Advertisement

ನಗರದಲ್ಲಿ ಮಳೆರಾಯನ ಹೋಳಿ

03:36 PM Mar 26, 2019 | Team Udayavani |
ಹುಬ್ಬಳ್ಳಿ: ಬಿಸಿಲ ಬೇಗೆಯಿಂದ ಬೆಂದಿದ್ದ ವಾಣಿಜ್ಯ ನಗರಿ ಜನತೆಗೆ ಸೋಮವಾರ ಸಂಜೆ ಸುರಿದ ಮಳೆ ತಂಪೆರೆದಿದೆ. ಗುಡುಗು-ಸಿಡಿಲು, ಬಿರುಗಾಳಿ ಹಾಗೂ ಆಲಿಕಲ್ಲು ಸಹಿತ ಸುಮಾರು 45 ನಿಮಿಷಕ್ಕೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿದಿದೆ. ಬೃಹದಾಕಾರದ ಮರಗಳು ಧರೆಗುರುಳಿ ವಿದ್ಯುತ್‌ ಕಂಬಗಳು ತುಂಡಾಗಿದ್ದು, ಹಲವು ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ.
ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮಳೆಯಿಂದ ನಗರದಲ್ಲಿ ಸುಮಾರು 52ಕ್ಕೂ ಹೆಚ್ಚು ಮರಗಳು ಬಿದ್ದಿದ್ದು, 10ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿವೆ. ಮರಗಳು ಬಿದ್ದಿರುವ ಪರಿಣಾಮ ಒಂದು ಟ್ರಾನ್ಸ್‌ಫಾರ್ಮರ್‌ ಸೇರಿದಂತೆ 25ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ತುಂಡಾಗಿವೆ. ಇದರಿಂದ ಆಯಾ ಭಾಗದಲ್ಲಿ ವಿದ್ಯುತ್‌ ಪೂರೈಕೆ ಕಡಿತಗೊಂಡು ಜನರು ಪರಿತಪಿಸುವಂತಾಗಿತ್ತು.
ಗಾಳಿ, ಗುಡುಗು ಸಹಿತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಯಿತು. ರಭಸದ ಗಾಳಿ ಆತಂಕ ಮೂಡಿಸಿತ್ತು.
ಕೆಲವೆಡೆ ಚರಂಡಿಗಳು ತುಂಬಿ ಹರಿಯುತ್ತಿದ್ದ ಪರಿಣಾಮ ಮಳೆ ನೀರು ರಸ್ತೆ ಮೇಲೆ ಆವೃತಗೊಂಡಿತ್ತು. ಹೀಗಾಗಿ ಬೈಕ್‌ ಸವಾರರು ಪರಿತಪಿಸುವಂತಾಗಿತ್ತು. ಮರಗಳು ಧರೆಗುರುಳಿದ ಪರಿಣಾಮ ಕೆಲ ಮಾರ್ಗಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.
ಮನೆಗಳು ಜಖಂ: ಮಕಂದಾರ ಗಲ್ಲಿಯಲ್ಲಿ ಮರ ಬಿದ್ದು ಮೂರು ಮನೆಗಳು ಜಖಂಗೊಂಡಿವೆ. ಓಂ ನಗರದಲ್ಲಿ ಮರ ಬಿದ್ದು ಮನೆ ಹಾಗೂ ಗುಡಿ ಹಾನಿಯಾಗಿದೆ. ಅರಳಿಕಟ್ಟಿ ಓಣಿಯಲ್ಲಿ ರಭಸವಾದ ಗಾಳಿಗೆ ಮನೆ ಶೀಟುಗಳು ಹಾರಿವೆ. ಶಫಿ ಖಾಜಿ ಎಂಬುವರ ಮನೆ ಮೇಲ್ಛಾವಣಿ ಹಾರಿ 15ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಗಂಗಾಧರ ನಗರದ ರವಿಕಾಂತ ಕುಂದಗೋಳ ಎಂಬುವರ ಮನೆ ಭಾಗಶಃ ಬಿದ್ದಿದೆ ಎಂದು ನಗರ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ತಿಳಿಸಿದ್ದಾರೆ.
ಗೋಕುಲ ರಸ್ತೆಯ ವಾಯವ್ಯ ಸಾರಿಗೆ ಸಂಸ್ಥೆ ಸಿಬ್ಬಂದಿ ವಸತಿಗೃಹ ಮುಂಭಾಗ ಎರಡು ಮರಗಳು ಬಿದ್ದು ಮೂರು ವಿದ್ಯುತ್‌ ಕಂಬಗಳು ತುಂಡಾಗಿವೆ. ಕಾಟನ್‌ ಮಾರ್ಕೆಟ್‌ನ ವಿವಿಧೆಡೆ ನಾಲ್ಕು ಮರಗಳು, ಸರ್ವೋದಯ ರಸ್ತೆ, ನೆಹರು ಮೈದಾನ, ಹಳೇ ಹುಬ್ಬಳ್ಳಿ ಚನ್ನಪೇಟೆ, ಜೀ ಅಡ್ಡಾ, ತೊರವಿ ಹಕ್ಕಲ, ಸನ್ಮಾನ ಕಾಲೋನಿ, ಟಿಪ್ಪು ನಗರ ವಿದ್ಯುತ್‌ ತಂತಿಯ ಮೇಲೆ ಮರದ ಕೊಂಬೆಗಳು ಬಿದ್ದಿವೆ.
ಭೂಸಪೇಟೆಯಲ್ಲಿ ವಿದ್ಯುತ್‌ ತಂತಿಯ ಮೇಲೆ ತಗಡಿನ ಶೀಟುಗಳು ಬಿದ್ದಿವೆ. ಹಳೇ ಹುಬ್ಬಳ್ಳಿ ನಾರಾಯಣ ಸೋಫಾ ವೃತ್ತದ ಹೈಮಾಸ್ಟ್‌ ವಿದ್ಯುತ್‌ ಕಂಬ ಗಾಳಿಗೆ ಸಂಪೂರ್ಣ ಬಾಗಿದೆ. ಕ್ಲಬ್‌ ರಸ್ತೆಯಲ್ಲಿ ವಿದ್ಯುತ್‌ ಕಂಬ ನೆಲಕ್ಕುರುಳಿದೆ
ಸ್ಥಳೀಯರ ಪ್ರತಿಭಟನೆ ಪಡದಯ್ಯನ ಹಕ್ಕಲದಲ್ಲಿ ಮಳೆ ಹಾಗೂ ಗಾಳಿಯಿಂದ ಜಯವ್ವ ಟಪಾಲ್‌ ಎಂಬುವರ ಮನೆಗೆ ನೀರು ನುಗ್ಗಿದ ಪರಿಣಾಮ ಮನೆ ಕುಸಿದಿದೆ. ಇನ್ನೂ ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ. ಇದಕ್ಕೆ ಅವೈಜ್ಞಾನಿಕ ಕಾಂಕ್ರಿಟ್‌ ರಸ್ತೆ ಕಾಮಗಾರಿ ಕಾರಣ ಎಂದು ಆರೋಪಿಸಿ ಸ್ಥಳೀಯರು ದಿಢೀರ್‌ ಪ್ರತಿಭಟನೆ ನಡೆಸಿದರು. ಕಾಂಕ್ರಿಟ್‌ ರಸ್ತೆಗಳನ್ನು ಎತ್ತರವಾಗಿ ನಿರ್ಮಿಸಿರುವುದದರಿಂದ ಮಳೆ ನೀರು ಮನೆಯೊಳಗೆ ನುಗುತ್ತಿದೆ ಎಂದು ಆರೋಪಿಸಿದರು. ನ್ಯೂ ಇಂಗ್ಲಿಷ್‌ ಸ್ಕೂಲ್‌ ಬಳಿಯ ವಾಣಿಜ್ಯ ಕಟ್ಟಡವೊಂದಕ್ಕೆ ನೀರು ನುಗ್ಗಿದ್ದು, ಕಾಂಕ್ರಿಟ್‌ ರಸ್ತೆ ಎತ್ತರವಾಗಿ ನಿರ್ಮಿಸಿರುವುದು ಇದಕ್ಕೆ ಕಾರಣವಾಗಿದೆ. ಇದೇ ವ್ಯಾಪ್ತಿಯಲ್ಲಿ ಮರವೊಂದು ರಸ್ತೆಗೆ ಬಿದ್ದಿದ್ದು ಸಂಚಾರ ಸ್ಥಗಿತಗೊಂಡಿತ್ತು.
Advertisement

Udayavani is now on Telegram. Click here to join our channel and stay updated with the latest news.

Next