Advertisement

Rain: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ವಿವಿಧೆಡೆ ದಿನವಿಡೀ ಉತ್ತಮ ಮಳೆ

02:15 AM Oct 16, 2024 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ದಿನವಿಡೀ ಮಳೆಯ ವಾತಾವರಣವಿತ್ತು. ಹಗಲು ವೇಳೆಯಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯಾಗಿದ್ದು, ಸಂಜೆ, ರಾತ್ರಿ ವೇಳೆಯಲ್ಲಿ ಹಲವೆಡೆ ಉತ್ತಮ ಮಳೆಯಾಗಿದೆ.

Advertisement

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಆಕಾಶದಲ್ಲಿ ಮೋಡದ ಚಲನೆ ಹೆಚ್ಚಾಗಿದ್ದು, ಬುಹುತೇಕ ಕಡೆಗಳಲ್ಲಿ ಮಳೆಯಾಗಿದೆ. ಸುಳ್ಯ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ಭಾಗದಲ್ಲೂ ಬೆಳಗ್ಗಿನಿಂದಲೇ ಉತ್ತಮ ಮಳೆಯಾಗಿದೆ. ದೇಶಾದ್ಯಂತ ಹಿಂಗಾರು ಮಾರುತಗಳು ಬಿರುಸಾಗುತ್ತಿವೆ. ಕರಾವಳಿಯಲ್ಲೂ ಹಿಂಗಾರು ಮಳೆಯ ಲಕ್ಷಣಗಳು ಈಗಾಗಲೇ ಗೋಚರಿಸಲು ಆರಂಭವಾಗಿದ್ದು, ವಿವಿಧೆಡೆ ಗುಡುಗು ಸಹಿತ ಮಳೆ ಸುರಿಯಲು ಈಗಾಗಲೇ ಆರಂಭವಾಗಿದೆ.

ಕರಾವಳಿಗೆ ಬುಧವಾರ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದ್ದು, ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ. ಸದ್ಯ ಗುರುವಾರ ಮತ್ತು ಶುಕ್ರವಾರ ಎಲ್ಲೋ ಅಲರ್ಟ್‌ ಇದೆ. ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 27.6 ಡಿ.ಸೆ. ದಾಖಲಾಗಿದ್ದು, ಮಳೆ ವಾತಾವರಣದಿಂದಾಗಿ ಸಾಮಾನ್ಯಕ್ಕಿಂತ 3.4 ಡಿ.ಸೆ. ಇಳಿಕೆಯಾಗಿದೆ. ಕನಿಷ್ಠ ತಾಪಮಾನ 23.6 ಡಿ.ಸೆ. ದಾಖಲಾಗಿದೆ.

ಉಡುಪಿಯಲ್ಲೂ ಮಳೆ
ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆಯಿಂದ ಸಂಜೆವರೆಗೂ ಬಿಟ್ಟುಬಿಟ್ಟು ಸಾಧಾರಣ ಮಳೆಯಾಗಿದೆ. ಬಿಸಿಲು, ಮೋಡ ಕವಿದ ವಾತಾವರಣದ ನಡುವೆ ಉಡುಪಿ, ಕುಂದಾಪುರ, ಕಾರ್ಕಳ ಸುತ್ತಮುತ್ತ ಸಣ್ಣದಾಗಿ ನಿರಂತರ ಮಳೆಯಾಗಿದೆ. ಉಡುಪಿ, ಮಣಿಪಾಲ, ಮಲ್ಪೆ ಭಾಗದಲ್ಲಿ ಇಡೀ ದಿನ ಮಳೆ ಸುರಿದಿದೆ.
ಸೋಮವಾರ ತಡರಾತ್ರಿಯೂ ಹಲವೆಡೆ ಕೆಲಕಾಲ ಮಳೆಯಾಗಿದ್ದು, ಮಂಗಳವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಗಳ 3.9 ಮಿ. ಮೀ. ಸರಾಸರಿ ಮಳೆಯಾಗಿದೆ.

ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ
ಭಾರೀ ಮಳೆ ಮತ್ತು ಸಮುದ್ರದಲ್ಲಿ ಅಲೆಗಳ ಅಬ್ಬರಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಮೀನು ಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಹಾಗೂ ಮೀನುಗಾರಿಕೆಗೆ ತೆರಳಿರುವ ಎಲ್ಲ ಮೀನುಗಾರರು ಕೂಡಲೇ ದಡ ಸೇರಬೇಕು. ಪ್ರವಾಸಿಗರು, ಸಾರ್ವಜನಿಕರು ನದಿ, ಜಲಪಾತ, ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು. ತುರ್ತುಸೇವೆಗೆ ಶುಲ್ಕರಹಿತ 1077 ಹಾಗೂ 0820-2574802 ಅನ್ನು ಸಂಪರ್ಕಿಸಲು ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

Advertisement

ಮಳೆಯಿಂದ ಭತ್ತ ಕಟಾವಿಗೆ ಹಿನ್ನಡೆ
ಕರಾವಳಿಯಲ್ಲಿ ಈಗ ಪ್ರತಿ ದಿನವೂ ಮಳೆ ಸುರಿಯುತ್ತಿದೆ. ದ.ಕ. ಮತ್ತು ಉಡುಪಿಯ ವಿವಿಧ ಪ್ರದೇಶಗಳಲ್ಲಿ ಭತ್ತದ ಬೆಳೆ ಬೆಳೆಯಲಾಗುತ್ತಿದೆ. ಇಲ್ಲಿ ಈಗ ಬಹುತೇಕ ಗದ್ದೆಗಳಲ್ಲಿ ಪೈರು ಬೆಳೆದು ನಿಂತಿದ್ದು ಕಟಾವಿಗೆ ಸಿದ್ಧವಾಗುತ್ತಿವೆ. ಈ ರೀತಿಯ ಮಳೆ ಭತ್ತದ ಬೆಳೆಗೆ ಅಪಾಯಕಾರಿಯಾಗಿದೆ. ಆದರೆ ಮಳೆಯಿಂದಾಗಿ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ.

ಈಗ ಕಟಾವು ಯಂತ್ರದ ಮೂಲಕವೇ ನಡೆಯುತ್ತದೆಯಾದರೂ ಯಂತ್ರಗಳನ್ನು ಗದ್ದೆಗೆ ಇಳಿಸುವ ಸ್ಥಿತಿ ಇಲ್ಲ. ಹೆಚ್ಚಿನ ಕಡೆ ದಿನದ ಒಂದೆರಡು ಹೊತ್ತು ಖಾಯಂ ಮಳೆ ಸುರಿಯುವುದರಿಂದ ಬೈಲು ಗದ್ದೆಗಳಲ್ಲಿ ನೀರು ನಿಂತಿದೆ. ಹೀಗಾಗಿ ಯಂತ್ರಗಳನ್ನು ಇಳಿಸಲು ಸಾಧ್ಯವಾಗಿಲ್ಲ. ಭತ್ತದ ಬೆಳೆಗೆ ಹಾನಿಯಾದರೆ ಮೇವಿನ ಹುಲ್ಲು ಕೊಳೆಯವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದ ಪರಿಸ್ಥಿತಿ ನಿರ್ಮಾಣವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next