Advertisement

ಮತದಾನಕ್ಕೆ ಮಳೆ ಆತಂಕ: ಕರಾವಳಿ, ದಕ್ಷಿಣ ಒಳನಾಡಿನ ಕೆಲವೆಡೆ ಭಾರೀ ಮಳೆ ಸಾಧ್ಯತೆ

11:22 PM May 09, 2023 | Team Udayavani |

ಬೆಂಗಳೂರು/ಹುಬ್ಬಳ್ಳಿ: ರಾಜ್ಯಾದ್ಯಂತ ಬುಧವಾರ ಮತದಾನಕ್ಕೆ ಸಿದ್ಧತೆಗಳು ಪೂರ್ತಿಗೊಂಡಿರುವಂತೆಯೇ ಮಳೆಯ ಆತಂಕ ಎದುರಾಗಿದೆ. ಎಲ್ಲರೂ ಮತದಾನ ಮಾಡುವಂತೆ ಆಗಬೇಕು ಎಂದು ಚುನಾವಣ ಆಯೋಗ ಹಲವು ಕ್ರಮಗಳನ್ನು ಕೈಗೊಂಡಿರುವಂತೆಯೇ ಮಳೆಯ ಆತಂಕ ಎದುರಾಗಿದೆ. ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬುಧವಾರ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ.

Advertisement

ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಮೇ 10ರಂದು ರಾಜ್ಯದ ಬಹುತೇಕ ಕಡೆ ಮೋಡ ಕವಿದ ವಾತಾವರಣ ಇರಲಿದ್ದು, ಮಧ್ಯಾಹ್ನದ ಅನಂತರ ಮಳೆಯಾಗುವ ಸಾಧ್ಯತೆ ಇವೆ. ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ 4 ದಿನಗಳ ಕಾಲ ಸಂಜೆ ವೇಳೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕೊಟ್ಟಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆ ಮೇ 11ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕೊಟ್ಟಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆ ಭಾರೀ ಮಳೆಯಾಗಲಿದೆ.

ಮಳೆಯಲ್ಲೇ ತೆರಳಿದರು
ಜಗಳೂರಿನಲ್ಲಿ ಮಳೆಯ ನಡುವೆಯೇ ಚುನಾವಣ ಸಿಬಂದಿ ಮತಗಟ್ಟೆ ಕೇಂದ್ರಗಳತ್ತ ತೆರಳಿದರು. ವಿಜಯನಗರ ಜಿಲ್ಲೆ ಹೂವಿನಹಡಗಲಿಯಲ್ಲಿ ಮಳೆ-ಗಾಳಿಯ ರಭಸಕ್ಕೆ ಮಸ್ಟರಿಂಗ್‌ಗೆ ಹಾಕಿದ್ದ ಶಾಮಿಯಾನ ಕಿತ್ತು ಹೋಗಿದೆ. ಚುನಾವಣ ಸಿಬಂದಿ ಮಳೆಯಲ್ಲೇ ಮತಗಟ್ಟೆಗಳತ್ತ ತೆರಳಬೇಕಾಯಿತು. ಹುಬ್ಬಳ್ಳಿಯಲ್ಲಿ ಮಳೆಗೆ ಬೈಕ್‌ಗಳು ಕೊಚ್ಚಿ ಹೋಗಿವೆ. ಬೆಳಗಾವಿ, ಧಾರವಾಡ, ಬಾಗಲಕೋಟೆ, ಗದಗ, ಹಾವೇರಿಯಲ್ಲೂ ಭಾರೀ ಮಳೆಯಾಗಿದೆ.

ಸಿಡಿಲು ಬಡಿದು ಓರ್ವ ಸಾವು
ಧಾರಾಕಾರ ಮಳೆಗೆ ಯಲಬುರ್ಗಾ ತಾಲೂಕಿನ ಬೀಲರಲದಿನ್ನಿ ಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತನಾಗಿದ್ದ ಯುವ ರೈತ ಕನಕಪ್ಪ ಹೊನ್ನನಗೌಡ ಮಾಲಿಪಾಟೀಲ್‌ (30) ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗಿದ್ದರಿಂದ ಬಿಸಿಲಿನ ಬೇಗೆಗೆ ಬಾಡಿ ಹೋಗಿದ್ದ ಕಾಫಿ, ಕಾಳುಮೆಣಸು ಬೆಳೆಗೆ ಜೀವಕಳೆ ಬಂದಿದೆ. ಮಲೆನಾಡಿನ ಕೊಪ್ಪ, ನರಸಿಂಹರಾಜಪುರ, ಮೂಡಿಗೆರೆ, ಬಾಳೆಹೊನ್ನೂರು, ಬಯಲುಸೀಮೆ ಪ್ರದೇಶಗಳಲ್ಲೂ ಸಾಧಾರಣ ಮಳೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next