Advertisement

ಮಳೆ: ಬಂಟ್ವಾಳ ತಾಲೂಕಿನ ವಿವಿಧೆಡೆ ಗುಡ್ಡ ಕುಸಿತ

08:25 PM Jul 23, 2019 | Team Udayavani |

ಬಂಟ್ವಾಳ: ಭಾರೀ ಮಳೆಯಿಂದ ಬಂಟ್ವಾಳ ತಾಲೂಕಿನ ವಿವಿಧ ಕಡೆಗಳಲ್ಲಿ ಗುಡ್ಡ ಕುಸಿತ, ಮಣ್ಣು ಕುಸಿತ ಘಟನೆ ಗಳು ಸಂಭವಿಸಿವೆ. ಪುದು ಗ್ರಾಮದ ಯೂಸುಫ್‌ ಅವರ ಮನೆ ಹತ್ತಿರ ಗುಡ್ಡದ ಮಣ್ಣು ಜರಿದು ಮನೆಗೆ ಭಾಗಶಃ ಹಾನಿಯಾಗಿದ್ದು, ಸುಮಾರು 5 ಸಾವಿರ ರೂ. ಮೌಲ್ಯದ ಸೊತ್ತು ನಷ್ಟವಾಗಿದೆ. ಇದೇ ಗ್ರಾಮದ ನಾಣ್ಯ ನಿವಾಸಿ ಬೇಬಿ ಮೋನಪ್ಪ ಮೂಲ್ಯ ಮನೆಗೆ ಹೋಗುವ ದಾರಿಯಲ್ಲಿ ತೋಡಿನ ಬದಿಯ ಮಣ್ಣು ಜರಿದು ಸಂಪರ್ಕ ಕಡಿತಗೊಂಡಿದೆ. ಇದರಿಂದ ಸುಮಾರು 10 ಸಾವಿರ ರೂ. ನಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ವಿಟ್ಲಪಟ್ನೂರು ಗ್ರಾಮದ ಕುಕ್ಕಿಲ ನಿವಾಸಿ ಕೆ. ಇಬ್ರಾಹಿಂ ಅವರ ಮನೆಗೆ ಗುಡ್ಡ ಕುಸಿದು ಹಾನಿಯಾಗಿದೆ. ಇದರಿಂದ ಸುಮಾರು 5 ಸಾವಿರ ರೂ. ಮೌಲ್ಯದ ಸೊತ್ತು ನಷ್ಟದ ಬಗ್ಗೆ ಕಂದಾಯ ಇಲಾಖೆಗೆ ದೂರಿ ನೀಡಿದ್ದಾರೆ.

Advertisement

ಕೆದಿಲ ಗ್ರಾಮ ಧರ್ಮಶ್ರೀ ವಿಶ್ವಸ್ಥ ಭಜನ ಮಂಡಳಿಯ ತೋಟಕ್ಕೆ ತಡೆ ಗೋಡೆ ಕುಸಿದು ಬಿದ್ದು 30 ಅಡಿಕೆ ಮರಗಳಿಗೆ ಹಾನಿಯಾಗಿ ಸುಮಾರು 50 ಸಾವಿರ ರೂ. ಬೆಳೆ ಹಾನಿ ಆಗಿದೆ. ಸಜೀಪನಡು ಗ್ರಾಮದಲ್ಲಿ ಗುಡ್ಡ ಜರಿದು ಮೇಲಾºಗದ ಮನೆಗೆ ಹಾನಿಯಾಗುವ ಸಂಭವದ ಹಿನ್ನೆಲೆಯಲ್ಲಿ ಇಲ್ಲಿನ ಮನೆ ಮಂದಿಯನ್ನು ಅವಶ್ಯ ಇದ್ದರೆ ತೆರವು ಮಾಡುವಂತೆ ಕಂದಾಯ ಇಲಾಖೆ ಸೂಚಿಸಿದೆ.

ಅಧಿಕಾರಿಗಳ ಭೇಟಿ
ಅನಾಹುತದ ಸ್ಥಳಗಳಿಗೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಅವಶ್ಯ ಇರುವಲ್ಲಿ ಪರಿಹಾರದ ಕ್ರಮ ಕೈಗೊಂಡಿದ್ದಾರೆ ಎಂದು ತಹಶೀಲ್ದಾರ್‌ ಕಚೇರಿ ಪ್ರಕಟನೆ ತಿಳಿಸಿದೆ.

ಮುಂಜಾಗ್ರತೆಗೆ ಸೂಚನೆ
ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ನದಿ ಪಾತ್ರದ ಜನರು ಮುಂಜಾಗ್ರತೆ ವಹಿಸುವಂತೆ ತಾಲೂಕು  ಆಡಳಿತ ಜು. 23ರಂದು ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next