Advertisement
ಅಪಾರ ಬೆಳೆಹಾನಿ: ಬೇಡ್ತಿ, ಡೌಗಿ, ಡೋರಿ, ಕರೆಮ್ಮನಹಳ್ಳ, ತುಪರಿ, ಬೆಣ್ಣಿ ಸೇರಿ ಒಟ್ಟು 23 ಹಳ್ಳಗಳ ಅಕ್ಕಪಕ್ಕದ ಹೊಲಗಳಲ್ಲಿನ ಕಬ್ಬು, ಗೋವಿನಜೋಳ, ಭತ್ತ, ಹತ್ತಿ, ಮೆಣಸಿನಕಾಯಿ ಬೆಳೆ ಸಂಪೂರ್ಣ ನಾಶವಾಗಿದೆ. ಬೇಡ್ತಿ ಹಳ್ಳ ಮತ್ತು ದೊಡ್ಡ ಹಳ್ಳದ ಅಕ್ಕಪಕ್ಕದಲ್ಲಿದ್ದ ಕಬ್ಬಿನ ಬೆಳೆ ಬೇರು ಸಮೇತ ಕಿತ್ತು ಹೋಗಿದ್ದರೆ, ನೀರಿನ ಮಧ್ಯೆ ಎರಡು ಮೂರು ದಿನಗಳ ಕಾಲ ನಿಂತಿರುವ ಗೋವಿನಜೋಳ ಕೊಳೆತು ಬಿದ್ದಿದೆ. ಸೋಯಾ ಅವರೆಗೆ ಹಳದಿ ಭಂಗ ರೋಗ ತಗುಲಿದ್ದು, ಗೋವಿನ ಜೋಳಕ್ಕೆ ಡೊಣ್ಣೆಹುಳುವಿನ ಕಾಟ ಶುರುವಾಗಿದೆ. ಸೋವಿನ ಜೋಳ ಸೊಗಸಾಗಿ ಬೆಳೆದು ನಿಂತಿರುವುದು ಕಾಣುತ್ತದೆ. ಆದರೆ ತೇವಾಂಶ ಅಧಿಕವಾಗಿದ್ದರಿಂದಾಗಿ ಹೀಚು ತೆನೆ ಹಾಕುತ್ತಿದ್ದು, ಅನ್ನದಾತರು ಅತಂಕದಲ್ಲಿದ್ದಾರೆ. ಕಲ್ಲಾಪುರ, ರಾಮಾಪುರ, ಅರವಟಗಿ, ಡೋರಿ,ಬೆಣಚಿ, ಕಂಬಾಗಣವಿ, ಕಾಶೆನಟ್ಟಿ, ಅಳ್ನಾವರ, ಕಡಬಗಟ್ಟಿ, ಹುಲಕೊಪ್ಪ ಸೇರಿದಂತೆ ಅನೇಕ ಕಡೆಗಳಲ್ಲಿ ಹಳ್ಳಗಳ ಹಾವಳಿಗೆ ಅಕ್ಕಪಕ್ಕದ ಹೊಲದಲ್ಲಿನ ಬೆಳೆ ಕೊಚ್ಚಿಕೊಂಡು ಹೋಗಿದೆ. ತುಪರಿಹಳ್ಳದ ಅಕ್ಕಪಕ್ಕದ ಹೊಲದಲ್ಲಿ ಇರುವ ಹೆಸರು, ಶೇಂಗಾ ಸೇರಿದಂತೆ ಇತರ ಬೆಳೆಗಳು ಅಲ್ಲಲ್ಲಿ ನಾಶವಾಗಿವೆ
Related Articles
ಹಳ್ಳ ಹರಿದಿದ್ದೇ ದಾರಿ: ಕಿಲೋಮೀಟರ್‌ಗಟ್ಟಲೇ ತೇಲಿ ಹೋದ ಟನ್ ಭಾರದ ಮರದ ದಿಮ್ಮಿಗಳು, ಎಲ್ಲೆಂದರಲ್ಲಿ ಕೊರೆಯಲ್ಪಟ್ಟ ಹಳ್ಳಗಳ ಭೂ ಭಾಗ, ಎಲ್ಲದರ ಮಧ್ಯೆ ಚಮತ್ಕಾರ ರೂಪದಲ್ಲಿ ಅಲ್ಲಲ್ಲಿ ಹಳ್ಳದ ದಡದಲ್ಲೇ ಉಳಿದ ಸೀಮೆ ದೇವರುಗಳು. ಇಷ್ಟಕ್ಕೂ ಬರೀ ಬೆಳೆನಾಶ ಮಾತ್ರವಲ್ಲ, ಬೇಡ್ತಿ ಹಳ್ಳದ ರಭಸಕ್ಕೆ ರೈತರು ಹಳ್ಳದುದ್ದಕ್ಕೂ 15 ವರ್ಷಗಳ ಹಿಂದೆ ಸುಜಲ ಜಲಾನಯನ ಯೋಜನೆ ಅಡಿಯಲ್ಲಿ ನೆಟ್ಟಿದ್ದ ಸಾಗವಾನಿ ಮರಗಳು ಬೇರು ಸಮೇತ ಬಿದ್ದು ಹೋಗಿವೆ. ಕೆಲವು ಕಡೆಗಳಲ್ಲಿ ಹಳ್ಳದಲ್ಲಿಯೇ ತೇಲಿಕೊಂಡು ಹೋಗಿವೆ. ಹಳ್ಳ ಕೊರೆದ ರಭಸಕ್ಕೆ ಎಷ್ಟೋ ಕಡೆಗಳಲ್ಲಿ ಹೊಲಗಳ ಚಿತ್ರಣವೇ ಬದಲಾಗಿದೆ. 15 ಅಡಿಯಷ್ಟು ಅಗಲದಲ್ಲಿ ಅಂಕುಡೊಂಕಾಗಿ ಹರಿಯುತ್ತಿದ್ದ ಹಳ್ಳಗಳು ಇದೀಗ 50-100 ಅಡಿ ಅಗಲದಲ್ಲಿ ರಭಸವಾಗಿ ನುಗ್ಗಿ ಹರಿದಿದ್ದರಿಂದ ಹಳ್ಳದಲ್ಲಿನ ಗಿಡಗಂಟೆಗಳು ನೆಲಕ್ಕುರುಳಿವೆ. ಇನ್ನು ಕೋಡಿ ಬಿದ್ದ ಕೆರೆಗಳ ಬುಡದಲ್ಲಿ ಸೃಷ್ಟಿಯಾಗುವ ಕಿರು ಹಳ್ಳ ಮತ್ತು ತೊರೆಗಳು ಕೂಡ ತಮ್ಮ ಮೂಲ ಸ್ಥಾನವನ್ನು ಪುನರ್‌ಸೃಷ್ಟಿಸಿಕೊಂಡಿದ್ದು, ಅಲ್ಲಲ್ಲಿ ರೈತರ ಹೊಲಗಳಿಗೆ ನುಗ್ಗಿ ಹಾನಿ ಮಾಡಿವೆ.
•ಬಸವರಾಜ ಹೊಂಗಲ್
Advertisement