ಕಾನಾಹೊಸಹಳ್ಳಿ: ಚಳಿಗಾಲ ಆರಂಭದ ಹೊತ್ತಿಲಲ್ಲಿ ಚಂಡಮಾರುತ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಪ್ರಭಾವ ಬೀರಿದ್ದು ಕಾನಾಹೊಸಹಳ್ಳಿ ಸಮೀಪದ ಜುಟ್ಟಲಿಂಗನಹಟ್ಟಿ ಗ್ರಾಮದ ರೈತ ಮಂಜುನಾಥನ ಪಾಲಿಗೆ ಮಳೆ ಲಕ್ಷಾಂತರ ರೂ. ನಷ್ಟ ಮಾಡಿದೆ.
ಜುಟ್ಟಲಿಂಗನಹಟ್ಟಿಯ ಯುವ ರೈತ ಮಂಜುನಾಥ ಮೂರು ಎಕರೆ ಜಮೀನಿನಲ್ಲಿ ಮೂರು ಲಕ್ಷ ಖರ್ಚು ಮಾಡಿ ಇಪ್ಪತ್ತು ಕ್ವಿಂಟಲ್ ಬ್ಯಾಡಗಿ ಮೆಣಸಿನಕಾಯಿ ಬೆಳೆದಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡಬೇಕು ಎನ್ನುವಷ್ಟರಲ್ಲಿ ಒಣ ಮೆಣಸಿನಕಾಯಿಯನ್ನು ಒಣಗಿಸಲೆಂದು ಜಮೀನಿನಲ್ಲಿ ಹಾಕಿದ್ದು ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮೆಣಸಿನಕಾಯಿ ಬೆಳೆ ಸಂಪೂರ್ಣ ಕೊಳೆತುಹೋಗಿದ್ದು ಕೈಗೆ ಬಂದ ಬೆಳೆ ಬಾಯಿಗೆ ಬಾರದಂತಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಜುಟ್ಟಲಿಂಗನಹಟ್ಟಿ ಗ್ರಾಮದಲ್ಲಿ ಯುವ ರೈತ ಮಂಜುನಾಥ ಜೊತೆಗೆ ಇತರೆ ತೋಟದ ಬಸವರಾಜ್, ರಾಮಲಿಂಗಪ್ಪ, ಎಸ್.ಪಿ. ಬಸವರಾಜ್, ಸಣ್ಣಬೊಮ್ಮಣ್ಣ, ಬಸಣ್ಣ ಒಟ್ಟು 6 ಜನ ರೈತರು ಹತ್ತು ಎಕರೆ ಜಮೀನಿನಲ್ಲಿ ಸಸಿ, ಔಷಧ, ಕೂಲಿಗಾರರಿಗೆಂದು ಲಕ್ಷಾಂತರ ರೂ ಖರ್ಚು ಮಾಡಿ ಬೆಳೆ ಬೆಳೆದಿದ್ದಾರೆ. ಎಲ್ಲರದೂ ಇದೇ ಪರಿಸ್ಥಿತಿ. ಇಷ್ಟೆಲ್ಲ ಆದರೂ ಯಾವುದೇ ಅಧಿಕಾರಿಗಳು ಇಲ್ಲಿವರೆಗೂ ಭೇಟಿ ನೀಡಿ ಪರಿಶೀಲಿಸಿಲ್ಲ.
ನಾನು ಕಳೆದ ನಾಲ್ಕು ತಿಂಗಳ ಹಿಂದೆ 25 ಸಾವಿರ ಬ್ಯಾಡಗಿ ಮೆಣಸಿನಕಾಯಿ ಸಸಿ ನಾಟಿ ಮಾಡಿದ್ದು ಒಳ್ಳೆಯ ಬೆಳೆ ಬಂದಿತ್ತು. ಮಾರುಕಟ್ಟೆಯಲ್ಲಿ ಒಳ್ಳೆಯ ರೇಟು ಇದೆ. ಆದರೆ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಜಮೀನಿನಲ್ಲಿ ಒಣಗಿ ಹಾಕಿದ್ದ ಮೆಣಸಿನಕಾಯಿ ಸಂಪೂರ್ಣ ಕೊಳೆತುಹೋಗಿದೆ.
ಇದೇ ರೀತಿಯಲ್ಲಿ ನಮ್ಮ ಜಮೀನಿನಲ್ಲಿ ಸುತ್ತಮುತ್ತಲಿನ ಆರು ಜನ ರೈತರ ಪರಿಸ್ಥಿತಿ ಇದೇ ರೀತಿ ಆಗಿದ್ದು ನಮಗೆ ಸರಕಾರದ ಕಡೆಯಿಂದ ನಷ್ಟವಾಗಿರುವ ಬೆಳೆಗೆ ಪರಿಹಾರ ನೀಡಿ. ಮಂಜುನಾಥ, ಬಸವರಾಜ್, ರೈತರು