Advertisement
ಈ ಮಧ್ಯೆ ಕಂದಾಯ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿರುವ ಹಣಕಾಸು ಇಲಾಖೆ ಕಾರ್ಯದರ್ಶಿ, ಬೆಳೆ ಪರಿಹಾರಕ್ಕೆ ಸಂಬಂಧಿಸಿದ ಸಮೀಕ್ಷೆ ವರದಿ ಬಂದ ತತ್‌ಕ್ಷಣ ರೈತರ ಖಾತೆಗೆ ಪರಿಹಾರ ಮೊತ್ತೆ ಜಮೆ ಮಾಡಲು ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಬೆಳೆ ನಷ್ಟ ಕುರಿತು ಆ್ಯಪ್‌ನಲ್ಲಿ ಅಪ್‌ಲೋಡ್ ಆದ ಕೂಡಲೇ ರೈತರ ಖಾತೆಗಳಿಗೆ ಹಣ ಜಮೆ ಮಾಡಲು ನಿರ್ದೇಶನ ನೀಡಿದ್ದಾರೆ.
Related Articles
Advertisement
ರಾಗಿ, ಜೋಳ, ಭತ್ತ, ತರಕಾರಿ, ಶೇಂಗಾ ಸಹಿತ ವ್ಯಾಪಕ ಬೆಳೆ ನಷ್ಟವಾಗಿದೆ. ಅದಕ್ಕೆ ಕೂಡಲೇ ಪರಿಹಾರ ಕೊಡಲು ಸಮೀಕ್ಷೆ ಮಾಡಿ, ಆ್ಯಪ್‌ನಲ್ಲಿ ಮಾಹಿತಿ ಲೋಡ್ ಆದ ತತ್‌ಕ್ಷಣ ಪರಿಹಾರದ ಹಣ ರೈತರ ಖಾತೆಗೆ ಜಮೆಯಾಗಲಿದೆ. ಹಣಕಾಸು ಕಾರ್ಯದರ್ಶಿಯವರು ಕಂದಾಯ ಇಲಾಖೆ ಕಾರ್ಯದರ್ಶಿಗೆ ಹಣ ಬಿಡುಗಡೆ ಮಾಡಿದ್ದು, ಕೂಡಲೇ ಖಾತೆಗೆ ಜಮೆ ಮಾಡಬೇಕು; ಹಣ ಕೊರತೆಯಾದರೆ ಮುಂಚಿತವಾಗಿ ತಿಳಿಸಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಳೆಯಿಂದ 118 ಸಾವು :
ಮನೆ ಹಾನಿಯಾದವರಿಗೆ ಈವರೆಗೆ 332 ಕೋಟಿ ರೂ. ನೀಡಲಾಗಿತ್ತು. ಮತ್ತೆ 415 ಕೋ.ರೂ. ನೀಡಿದ್ದೇವೆ. ಮನೆಗೆ ನೀರು ನುಗ್ಗಿದ್ದರೆ ತಲಾ 10 ಸಾವಿರ ರೂ. 24 ತಾಸುಗಳ ಒಳಗೆ ನೀಡುತ್ತೇವೆ. ಈವರೆಗೆ 85 ಸಾವಿರ ಜನರಿಗೆ ಸುಮಾರು 85 ಕೋ.ರೂ. ನೀಡಿದ್ದೇವೆ. ಈ ವರ್ಷ ಮಳೆಯಿಂದ 118 ಮಂದಿ ಸಾವನ್ನಪ್ಪಿದ್ದು, ತಲಾ 5 ಲಕ್ಷ ರೂ.ಗಳಂತೆ 5.9 ಕೋಟಿ ರೂ. ನೀಡಲಾಗಿದೆ ಎಂದು ಸಚಿವ ಅಶೋಕ್ ಹೇಳಿದ್ದಾರೆ.
ಸಾಮಾನ್ಯ ಬೆಳೆಗೆ 20 ಸಾವಿರ ರೂ., ನೀರಾವರಿ ಜಮೀನಿಗೆ 35 ಸಾವಿರ ರೂ., ವಾಣಿಜ್ಯ ಬೆಳೆಗೆ 49 ಸಾವಿರ ರೂ. ಪರಿಹಾರ ನೀಡಬೇಕು ಎಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೇನೆ. ಇದು ಇಡೀ ರಾಷ್ಟ್ರಕ್ಕೆ ಅನ್ವಯವಾಗಲಿದೆ ಎಂದರು.
ಇಂದಿನಿಂದ 3 ದಿನ ಮತ್ತೆ ಮಳೆ? : ಬಂಗಾಲಕೊಲ್ಲಿಯ ಆಗ್ನೇಯ ಭಾಗದಲ್ಲಿ ಮತ್ತೂಂದು ಚಂಡಮಾರುತದ ಚಟುವಟಿಕೆ ಆರಂಭವಾಗಿದ್ದು, ಅದರ ಪರಿಣಾಮವಾಗಿ ಶುಕ್ರವಾರ ಬಂಗಾಲ ಕೊಲ್ಲಿಯ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಲಿದೆ. ಹೀಗಾಗಿ ರಾಜ್ಯದಲ್ಲಿ ನ. 26ರಿಂದ 28ರ ವರೆಗೆ 3 ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನ. 28ರ ವರೆಗೆ 3 ದಿನ ಎಚ್ಚರಿಕೆ ವಹಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡ ಲಾಗಿದೆ ಎಂದು ಸಚಿವ ಅಶೋಕ್ ತಿಳಿಸಿದ್ದಾರೆ.
ಪರಿಹಾರ ನೀಡಲು ಕ್ರಮ :
ಪ್ರತಿನಿತ್ಯ ಜಂಟಿ ಸಮೀಕ್ಷೆ ಮುಗಿದಂದೇ ತಂತ್ರಾಂಶದಲ್ಲಿ ದಾಖಲಿಸಬೇಕು ಎಂದು ಎಲ್ಲ ಡಿ.ಸಿ.ಗಳಿಗೂ ಸೂಚನೆ ನೀಡಿದ್ದೇನೆ. ಇದರಿಂದ ರೈತರಿಗೆ ಮರುದಿನವೇ ಪರಿಹಾರ ನೀಡಲು ಸಾಧ್ಯವಾಗುತ್ತದೆ. ನ. 30ರೊಳಗೆ ಸಮೀಕ್ಷೆ ಪೂರ್ಣ ಗೊಳಿಸಲು ಆದೇಶ ನೀಡಿದ್ದೇನೆ ಎಂದು ಸಚಿವ ಅಶೋಕ್ ಹೇಳಿದ್ದಾರೆ. ಕೊಡಗು, ಹಾಸನ, ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬೆಳೆ, ಆಸ್ತಿ ಹಾನಿಯನ್ನು ಪರಿಶೀಲನೆ ಮಾಡಿದ್ದೇನೆ. ಸರಕಾರ 1.5 ಲಕ್ಷ ರೈತರಿಗೆ ಈವರೆಗೆ 130 ಕೋಟಿ ರೂ. ಹಣ ಪಾವತಿ ಮಾಡಿತ್ತು. ಬುಧವಾರ 70 ಸಾವಿರ ರೈತರಿಗೆ 52 ಕೋಟಿ ಹಣವನ್ನು ನೇರವಾಗಿ ಬ್ಯಾಂಕಿಗೆ ಜಮಾ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಳೆಯಿಂದಾದ ಬೆಳೆಹಾನಿಯ ಯಾವುದೇ ಮಾಹಿತಿ ಮುಚ್ಚಿಡುವ ಕೆಲಸ ಮಾಡಿಲ್ಲ. ಸರಕಾರ ಎಲ್ಲವನ್ನೂ ತೆರೆದಿಟ್ಟಿದೆ. ಬೆಳೆ ಪರಿಹಾರ ರೈತರ ಖಾತೆಗೆ ಹೋಗುತ್ತದೆ. ಅದೇನು ಸಿದ್ದರಾಮಯ್ಯ ಅವರ ಖಾತೆಗೆ ಹೋಗುತ್ತದೆಯೇ? ಪರಿಹಾರ ಪಡೆದವರು ಅದನ್ನು ಹೇಳಿಕೊಳ್ಳುತ್ತಾರೆಯೇ? -ಬಿ.ಸಿ. ಪಾಟೀಲ್, ಕೃಷಿ ಸಚಿವ