Advertisement

ಮಳೆ ನೀರು ಹರಿಯುವ ಚರಂಡಿ ಸ್ವಚ್ಛತೆ ಇನ್ನಷ್ಟೇ ಆಗಬೇಕಿದೆ

04:12 PM Jun 10, 2020 | mahesh |

ಉಡುಪಿ: ಮಳೆಗಾಲ ಆರಂಭವಾದರೂ ನಗರಸಭೆಯ ವತಿಯಿಂದ ಮಳೆ ಸಂಬಂಧಿ ಪೂರ್ವ ತಯಾರಿ ಮಾತ್ರ ಇನ್ನೂ ಆರಂಭವಾಗಿಲ್ಲ. ಮಳೆಗಾಲದಲ್ಲಿ ಮಳೆ ನೀರು ಸರಿಯಾದ ರೀತಿಯಲ್ಲಿ ಹರಿದು ಹೋಗಲು ದಾರಿ ಇಲ್ಲದೆ ಸಮೀಪದ ಮನೆಗಳಿಗೆ ನುಗ್ಗುತ್ತದೆ. ನಗರದ ಬನ್ನಂಜೆ ವಾರ್ಡ್‌ನ ಬಹುಭಾಗದಲ್ಲಿ ಮಳೆನೀರು ಹರಿಯುವ ಚರಂಡಿಯಲ್ಲಿ ಹೂಳು ತುಂಬಿ ಮುಚ್ಚಲ್ಪಟ್ಟಿವೆ. ಇನ್ನು ಕೆಲವು ಭಾಗದಲ್ಲಿ ತೆಂಗಿನ ಮರದ ಗರಿಗಳು, ಪೇಪರ್‌, ಪ್ಲಾಸ್ಟಿಕ್‌ ಬಾಟಲಿ, ತ್ಯಾಜ್ಯಗಳು ತುಂಬಿವೆ. ಗರಡಿಗೆ ಹೋಗುವ ರಸ್ತೆಯಲ್ಲಿ ಪ್ರತಿ ಬಾರಿ ನೆರೆ ಉಂಟಾಗಿ ಅಪಾಯ ಎದುರಾಗುತ್ತಿತ್ತು. ಆದರೆ ಈ ತೋಡಿನ ಹೂಳೆತ್ತಿರುವುದರಿಂದ ಸ್ಥಳೀಯರು ನಿರಾಳರಾಗಿದ್ದಾರೆ.

Advertisement

ಚರಂಡಿಯಲ್ಲಿ ಕೊಳಚೆ ನೀರು
ಬನ್ನಂಜೆ ವಾರ್ಡ್‌ನ ಇನ್ನೊಂದು ವಿಶೇಷ ವೆಂದರೆ ಬಸ್‌ ನಿಲ್ದಾಣ ಪರಿಸರದಿಂದ ಬರುವ ಎಲ್ಲ ಕೊಳಚೆ ನೀರು ತೆರೆದ ಚರಂಡಿಯಲ್ಲಿ ಹರಿಯುತ್ತದೆ. ಕೆಲವೊಮ್ಮೆ ರಾತ್ರಿ ಭಾರೀ ಮಳೆ ಬಂದರೆ ಬಸ್‌ ನಿಲ್ದಾಣದ ಉತ್ತರ ದಿಕ್ಕಿನಲ್ಲಿರುವ ತಗ್ಗು ಪ್ರದೇಶಗಳು ಮುಳುಗುವ ಭೀತಿ ಇದೆ. ನೀರು ಹರಿಯುವ ದಾರಿ ತಡೆಗಟ್ಟುವವರು, ಯದ್ವಾತದ್ವ ಆವರಣ ನಿರ್ಮಾಣ, ಅಪಾರ್ಟ್‌ಮೆಂಟ್‌ ನಿರ್ಮಾಣದಿಂದ ನೀರು ಹರಿಯಲು ಸಾಧ್ಯವಾಗದೆ ಮನೆಗಳಿಗೆ ನೀರು ನುಗ್ಗುವುದು ಇಲ್ಲಿ ಸರ್ವ ಸಾಮಾನ್ಯ.

ಕಾರ್ಮಿಕರ ಕೊರತೆ
ಕೋವಿಡ್ ಆರಂಭದಲ್ಲಿ ನಿಗದಿತ ಸಮಯ ದಲ್ಲಿ ಮಾತ್ರ ಕೆಲಸ ಮಾಡಬೇಕಿತ್ತು. ಸದ್ಯ ಲಾಕ್‌ಡೌನ್‌ ಸಡಿಲಿಕೆಯಾದರೂ ಕಾರ್ಮಿಕರ ಕೊರತೆ ಇರುವುದರಿಂದ ಹೆಚ್ಚಿನ ಕೆಲಸ ನಡೆಸಲು ಸಾಧ್ಯವಾಗಿಲ್ಲ. ನಾರಾಯಣಗುರು ಸರ್ಕಲ್‌ ಬಳಿಯ ಟೈಗರ್‌ ಪಿಜಿ ಬಳಿ, ಗರಡಿ ರೋಡ್‌ಗೆ  ತೆರಳುವಲ್ಲಿ ಹಾಗೂ ಉಳಿದ ಭಾಗದಲ್ಲಿ ಚರಂಡಿಗಳ ಮೇಲೆ ಗಿಡಗಂಟಿ ಬೆಳೆದು ನೀರು ಹರಿಯದಂತೆ ಮುಚ್ಚಿಹೋಗಿವೆ. ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂನಂತಹ ಕಾಯಿಲೆ ಬರುವ ಸಾಧ್ಯತೆ ಇದೆ.

ರಸ್ತೆ ಮೇಲೆ ಹರಿಯುವ ಮಳೆ ನೀರು
ಬಹುತೇಕ ಚರಂಡಿಗಳು ಕಸ, ಕಡ್ಡಿಯಿಂದ ತುಂಬಿ ರುವುದರಿಂದ ಮಳೆ ನೀರು ರಸ್ತೆ ಮೇಲೆ ಬರುವ ಸಾಧ್ಯತೆ ಇದೆ ಎಂದು ಅಂಗಡಿ ವ್ಯಾಪಾರಿ ಹರೀಶ್‌ ಅಭಿಪ್ರಾಯಪಡುತ್ತಾರೆ. ಮಳೆಗಾಲದ ತಯಾರಿಯ ಕುರಿತಂತೆ ಸ್ವತ್ಛತಾ ಕೆಲಸ ಇನ್ನಷ್ಟೇ ಆಗಬೇಕಿದೆ. ಲಾಕ್‌ಡೌನ್‌ ಮೊದಲು ಸುತ್ತಲ ಪರಿಸರದಲ್ಲಿ ಆವರಿಸಿದ ಪೊದೆ, ಕಳೆಗಿಡಗಳನ್ನು ತೆರವು ಮಾಡಿದ್ದು ಬಿಟ್ಟರೆ ಮತ್ತೆ ಯಾವುದೇ ಕೆಲಸ ಆಗಿಲ್ಲ. ಮಳೆಗಾಲದಲ್ಲಿ ನೀರು ರಸ್ತೆಯಲ್ಲಿ ನಿಲ್ಲುವುದರಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗುವುದೆಂದು ಬನ್ನಂಜೆ ಬಸ್‌ನಿಲ್ದಾಣ ಬಳಿಯ ಆಟೋ ರಿಕ್ಷಾ ಚಾಲಕರು ದೂರಿದ್ದಾರೆ.

ಸಿಬಂದಿ ಕೊರತೆ
ಕೋವಿಡ್‌-19 ರಿಂದ ಸ್ವಚ್ಛತಾ ಸಿಬಂದಿಗಳ ಕೊರತೆ ಉಂಟಾಗಿದೆ. ಇದರಿಂದ ಮಳೆಗಾಲದ ಸಿದ್ಧತೆ ವಿಳಂಬವಾಗಿದೆ. ಗರಡಿ ಭಾಗದ ರಸ್ತೆಗಳ ಮೇಲೆ ಮಳೆಗಾಲದಲ್ಲಿ ನೀರು ಹರಿಯುವುದರಿಂದ ಇಲ್ಲಿ ಇನ್ನಷ್ಟೇ ಚರಂಡಿಯ ಹೂಳೆತ್ತುವ ಕೆಲಸ ಆಗಬೇಕಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇದಕ್ಕೆ ಅಧಿಕಾರಿಗಳಿಂದ ಭರವಸೆ ಸಿಕ್ಕಿದೆ. ಆದಿಉಡುಪಿ ಸೇರಿದಂತೆ ವಾರ್ಡ್‌ನ ವಿವಿಧ ಭಾಗದಲ್ಲಿ ಬೀದಿ ದೀಪಗಳನ್ನು ಸರಿಪಡಿಸಲಾಗಿದೆ. ಬಾಕಿ ಉಳಿದ ಕಡೆ ಬೀದಿದೀಪ ಹಾಕುವ ಕೆಲಸ ನಡೆಯುತ್ತಿದೆ.
-ಸವಿತಾ ಹರೀಶ್‌ ರಾಂ, ನಗರಸಭೆ ಸದಸ್ಯೆ, ಬನ್ನಂಜೆ ವಾರ್ಡ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next