Advertisement

ಮಳೆ ಕ್ಷೀಣ: ಕೆಆರ್‌ಎಸ್‌ ಒಳಹರಿವು ಕುಸಿತ

07:20 AM Jul 29, 2017 | Harsha Rao |

ಮಂಡ್ಯ: ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮುಂಗಾರು ಮಳೆ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ಗೆ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣದಲ್ಲಿ ತೀವ್ರ ಕುಸಿತ ಉಂಟಾಗಿದೆ. ಆದರೆ, ಅಣೆಕಟ್ಟೆಯಿಂದ ನದಿಗೆ ಹರಿಸುತ್ತಿರುವ ನೀರಿನ ಪ್ರಮಾಣ ಮಾತ್ರ ಹೆಚ್ಚುತ್ತಲೇ ಇದೆ. ನದಿಯ ಮೂಲಕ ತಮಿಳುನಾಡಿಗೆ ಕಾವೇರಿ ಸರಾಗವಾಗಿ
ಹರಿಯುತ್ತಲೇ ಇದ್ದಾಳೆ. ಕೆಆರ್‌ಎಸ್‌ನ ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು, ಪ್ರಸ್ತುತ ಜಲಾಶಯದಲ್ಲಿ 89.60 ಅಡಿಗಳಷ್ಟು ನೀರಿದೆ. ಅಣೆಕಟ್ಟೆಗೆ 5511 ಕ್ಯೂಸೆಕ್‌ ಒಳಹರಿವಿದ್ದರೆ, 4072 ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ.
ಮುಂಗಾರು ಮಳೆ ವೈಫ‌ಲ್ಯದಿಂದ ಈ ವರ್ಷ ಕೆಆರ್‌ಎಸ್‌ ತುಂಬುವ ಸಾಧ್ಯತೆಗಳಿಲ್ಲ. ಅಣೆಕಟ್ಟೆಯ ನೀರಿನ ಮಟ್ಟ 100 ಅಡಿಗೆ ಏರುವ ಸಂಭವವೂ ಕಡಿಮೆ ಇದೆ. ಜು.21ರಂದು ಅಣೆಕಟ್ಟೆಗೆ 15,073 ಕ್ಯೂಸೆಕ್‌ ಒಳಹರಿವಿದ್ದಾಗ, 1546 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿತ್ತು. ಶುಕ್ರವಾರ ಒಳಹರಿವಿನ ಪ್ರಮಾಣ 5511 ಕ್ಯೂಸೆಕ್‌ಗಳಿದ್ದರೂ 4072 ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ನೀರನ್ನು ತಮಿಳುನಾಡಿಗೆ
ಬಿಡಲಾಗುತ್ತಿದೆ ಎಂಬುದು ರೈತರ ಆಕ್ರೋಶ.

Advertisement

ಬಿತ್ತನೆ ಕುಂಠಿತ: ಸಾಮಾನ್ಯವಾಗಿ ಜುಲೈ ಅಂತ್ಯದ ವೇಳೆಗೆ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ ನಡೆದು ನಾಲೆಗಳಿಗೆ ನೀರು ಹರಿಸುವ ಸಂಬಂಧ ನಿರ್ಧಾರ ಕೈಗೊಳ್ಳಲಾಗುತ್ತಿತ್ತು. ಜುಲೈ ಅಂತ್ಯದ ವೇಳೆಗೆ ಭತ್ತದ ಬಿತ್ತನೆಯೂ ಜಿಲ್ಲೆಯಲ್ಲಿ ಶೇ.30ರಿಂದ 40ರಷ್ಟು ಮುಗಿದಿರುತ್ತಿತ್ತು. ಆದರೆ, ಈ ವರ್ಷ ಈವರೆಗೂ ಬಿತ್ತನೆಯೇ ಆಗಿಲ್ಲ. ಉಳಿದ ಬೆಳೆಗಳಲ್ಲಿಯೂ ನಿರೀಕ್ಷಿತ ಪ್ರಮಾಣದ ಬಿತ್ತನೆಯಾಗಿಲ್ಲ.

ತುರ್ತು ಅಧಿವೇಶನ ಕರೆಯಲು ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ದುರ್ಬಲಗೊಂಡಿದ್ದು, ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ತುರ್ತು ಅಧಿವೇಶನ ನಡೆಸಿ ಪರಿಹಾರ ಮಾರ್ಗದ ಕುರಿತು ಚರ್ಚಿಸಬೇಕು ಎಂದು ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ಕೊರತೆಯಿಂದ ರೈತರು ಕಷ್ಟದಲ್ಲಿದ್ದರೆ
ಸರ್ಕಾರ ಧರ್ಮ ಸಂಘರ್ಷ ಹುಟ್ಟುಹಾಕುತ್ತಿದೆ ಎಂದು ದೂರಿದರು. 1959ರಲ್ಲಿ ಭೀಕರ ಪರಿಸ್ಥಿತಿ ಎದುರಾಗಿತ್ತು.

ಲಕ್ಷಾಂತರ ಜಾನುವಾರುಗಳು ಸಾವನ್ನಪ್ಪಿದ್ದವು. ಕೆಲವು ಜಾನುವಾರುಗಳನ್ನು ರೈತರೇ ಸಾಕಲಾಗದೇ ಬಯಲಿಗೆ
ಬಿಟ್ಟಿದ್ದರು. 1980ರಲ್ಲಿ ಇದೇ ಪರಿಸ್ಥಿತಿ ಎದುರಾಗಿತ್ತು. ಇದೀಗ ಮತ್ತೆ ಅಂತದ್ದೇ ಬರಗಾಲ ಬಂದಿದೆ. ಮುಂಗಾರು, ಹಿಂಗಾರು ಮಳೆಗಳು ಕೈಕೊಟ್ಟಿದ್ದು, ರಾಜ್ಯದೆಲ್ಲೆಡೆ ಬರ ಪರಿಸ್ಥಿತಿ ಉದ್ಭವಿಸಿದೆ. ಸರ್ಕಾರ ಕೂಡಲೇ ತುರ್ತು ಅಧಿವೇಶನ ನಡೆಸಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

ಕಾವೇರಿ, ಹೇಮಾವತಿ ಸೇರಿದಂತೆ ರಾಜ್ಯದ ಎಲ್ಲಾ ಜಲಾಶಯಗಳು ನೀರಿಲ್ಲದೆ ಬರಿದಾಗಿವೆ. 18.60 ಲಕ್ಷ ಹೆಕ್ಟೇರ್‌ ಬೆಳೆ ನೀರಿಲ್ಲದೆ ಒಣಗುತ್ತಿದೆ. ಈ ಸಂದರ್ಭದಲ್ಲಿ ರಾಜ್ಯಸರ್ಕಾರ ತಮಿಳುನಾಡಿಗೆ 50 ಟಿಎಂಸಿ ನೀರು ಕೊಡಲು ಮುಂದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾಡಹಬ್ಬ ದಸರಾವನ್ನು ಸರಳವಾಗಿ ಆಚರಿಸಿ, ಜಾನುವಾರುಗಳ ರಕ್ಷಣೆಗೆ ಗೋಶಾಲೆಗಳನ್ನು ಸ್ಥಾಪಿಸಬೇಕು.

ಮಂಡ್ಯದಲ್ಲಿ ಪ್ರತಿಭಟನೆ ಮಂಡ್ಯ: ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ, ನಾಲೆಗಳಿಗೆ ನೀರು ಹರಿಸುವಂತೆ
ಒತ್ತಾಯಿಸಿ ಜಿಲ್ಲೆಯಲ್ಲಿ ರೈತರು ಶುಕ್ರವಾರವೂ ಪ್ರತಿಭಟನೆ ನಡೆಸಿದರು. ಮದ್ದೂರಿನಲ್ಲಿ ಕಸ್ತೂರಿ ಕರ್ನಾಟಕ ಜನಪರ
ವೇದಿಕೆ ಕಾರ್ಯಕರ್ತರು ಹಾಗೂ ರೈತರು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ 21ನೇ ದಿನಕ್ಕೆ ಕಾಲಿಟ್ಟಿದ್ದು, ಬೆಂಗಳೂರು ವಾಸಿಗಳಿಗೆ ನೀರು ಸ್ಥಗಿತಗೊಳಿಸಿ ಅದೇ ನೀರನ್ನು ಕೆರೆಗಳಿಗೆ ಹಾಗೂ ಬೇಸಾಯಕ್ಕೆ ನೀಡುವಂತೆ ಕಾವೇರಿ
ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್‌ ವಿಜಯ್‌ಕುಮಾರ್‌ ಎದುರು ರೈತರು ಪಟ್ಟು ಹಿಡಿದರು. ಈ ಮಧ್ಯೆ, ಆಮರಣಾಂತ ಉಪವಾಸ ಕೈಗೊಂಡಿರುವ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ ಗೌಡ ಅಸ್ವಸ್ಥರಾಗಿದ್ದು, ಅವರನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಲು ಮುಂದಾದರು. ಈ ವೇಳೆ, ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಬಳಿಕ, ಅಧಿಕಾರಿಗಳ ಭರವಸೆ ಮೇರೆಗೆ ಉಪವಾಸ
ಅಂತ್ಯಗೊಳಿಸಿದರು. ಕೆ.ಎಂ.ದೊಡ್ಡಿಯಲ್ಲಿ ರೈತ ಸಂಘದ ಕಾರ್ಯಕರ್ತರು ಎತ್ತಿನಗಾಡಿಗಳೊಂದಿಗೆ ಬೃಹತ್‌ ಪ್ರತಿಭಟನೆ ನಡೆಸಿದರು.

ಕರಾವಳಿ, ಒಳನಾಡಿನಲ್ಲಿ ಸಾಧಾರಣ ಮಳೆ
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಶುಕ್ರವಾರ ಕೊಂಚ ಚುರುಕುಗೊಂಡಿರುವುದರಿಂದ ಕರಾವಳಿ, ಒಳನಾಡು
ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ. ಬೆಂಗಳೂರು, ತುಮಕೂರು, ಕೋಲಾರ ಸುತ್ತಮುತ್ತ ಸಂಜೆ ಉತ್ತಮ
ಮಳೆಯಾಗಿದೆ. ಈ ಭಾಗಗಳಲ್ಲಿ ಕನಿಷ್ಠ 30ರಿಂದ ಗರಿಷ್ಠ 70 ಮಿ.ಮೀ. ಮಳೆ ದಾಖಲಾಗಿದೆ. ಇನ್ನೂ ಒಂದೆರಡು ದಿನ
ಇದೇ ವಾತಾವರಣ ಮುಂದುವರಿಯಲಿದೆ. ಅದೇ ರೀತಿ, ಉತ್ತರ ಒಳನಾಡಿನ ಕಲಬುರಗಿ, ವಿಜಯಪುರ, ಹಾವೇರಿ,
ಬೆಳಗಾವಿ, ಬಳ್ಳಾರಿ, ಗದಗ ಮತ್ತಿತರ ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ. ಉಡುಪಿಯಲ್ಲಿ 62.7, ದಕ್ಷಿಣ ಕನ್ನಡ 54,
ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 15ರಿಂದ ಗರಿಷ್ಠ 32 ಮಿ.ಮೀ. ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next