ಕಲಬುರಗಿ: ಕಳೆದೊಂದು ವಾರದಿಂದು ಸುರಿಯುತ್ತಿರುವ ಧಾರಾಕಾರ ಮಳೆಗೆ ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲೂ ಸಾಕಷ್ಟು ಹಾನಿಯಾಗಿದ್ದು, ಕಿತ್ತು ಹೋಗಿರುವ ರಸ್ತೆ, ನೀರಲ್ಲಿ ನಿಂತು ಹಾಳಾದ ಬೆಳೆಹಾನಿ ಸೇರಿದಂತೆ ಇತರ ಆಸ್ತಿ-ಪಾಸ್ತಿಗಳ ಹಾನಿಯನ್ನು ಶಾಸಕ ಬಸವರಾಜ ಮತ್ತಿಮಡು ಹಾಗೂ ಜಿಲ್ಲಾಧಿಕಾರಿ ವಿ.ವಿ. ರೆಡ್ಡಿ ಜೋತ್ಸ್ನಾ ವೀಕ್ಷಿಸಿದರು.
ಕ್ಷೇತ್ರದ ಕಲ್ಲಹಂಗರಗಾ, ಜಂಬಗಾ, ಕುಮಸಿ, ಬನ್ನೂರ, ಅವರಾದ, ಕುರಿಕೋಟಾ, ಸಿರಗಾಪುರ ಸೇರಿದಂತೆ ಇತರ ಗ್ರಾಮಗಳಿಗೆ ಭೇಟಿ ನೀಡಿ ಹಾನಿಯನ್ನು ಸಮಗ್ರವಾಗಿ ವೀಕ್ಷಿಸಿದರಲ್ಲದೇ ಅಗತ್ಯ ತುರ್ತು ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಿಖರ ಹಾನಿ ಸಮೀಕ್ಷೆಯಾಗಬೇಕು. ಬೆಳೆಹಾನಿಯಲ್ಲಿ ಒಬ್ಬ ರೈತ ಹೊರಗುಳಿಯಬಾರದು. ಜತೆಗೆ ತೀವ್ರ ಸಮಸ್ಯೆಗೆ ಒಳಗಾಗಿರುವವರಿಗೆ ತಕ್ಷಣ ತಾತ್ಕಾಲಿಕ ವ್ಯವಸ್ಥೆ ಮಾಡುವಂತೆ ಶಾಸಕರು, ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಸಂತ್ರಸ್ತರಿಗಾಗಿ ಆರಂಭಿಸಿರುವ ಗಂಜಿ ಕೇಂದ್ರವನ್ನು ಪರಿಶೀಲಿಸಿ, ಜನರ ಸಮಸ್ಯೆ ಆಲಿಸಲಾಯಿತು. ಸೂಕ್ತ ಸೌಲಭ್ಯ ಒದಗಿಸುವಭರವಸೆ ನೀಡಲಾಯಿತು. ಗಂಜಿ ಕೇಂದ್ರದ ಅಡುಗೆ ಕೋಣೆ ಪರಿಶೀಲಿಸಿ, ಸ್ವತಃ ಆಹಾರ ಸೇವಿಸಿ ಗುಣಮಟ್ಟ ಪರಿಶೀಲಿಸಲಾಯಿತು. ಕಮಲಾಪುರ ತಹಶೀಲ್ದಾರ್ ಅಂಜುಮ್ ತಬಸುಮ್, ಪ್ರಮುಖರಾದ ಜಗನ್ನಾಥ್ ಮಾಲಿ ಪಾಟೀಲ್, ಮಲ್ಲಿಕಾರ್ಜುನ್ ಹೀರಾಪುರ, ಕಲ್ಯಾಣರಾವ ಪಾಟೀಲ, ಶ್ರೀಚಂದ ಗಿರಿರಾಜ ಪಾಟೀಲ, ಚನ್ನವೀರಪ್ಪಎಂ ಸಲಗರ್, ಮಲ್ಲಿಕಾರ್ಜುನ್ ನೀಲೂರ, ಶರಣಗೌಡ ಪಾಟೀಲ, ಶಿವಕುಮಾರ್ ಪಾಟೀಲ್, ಶಿವಪುತ್ರಪ್ಪ ಹತಗುಂದಿ, ಸೋಮನಾಥ್ ಹತ್ತಿಕಂಕಣ, ಸೂರ್ಯಕಾಂತ ತೆಗನುರ, ರಾಜು ವಾಲಿ, ಶಂಭು ಬಿಲಗುಂದಿ, ಚೇತನ ತಡಕಲ, ಚೆನ್ನವೀರ ಹಿರೇಮಠ್ ಇದ್ದರು.