Advertisement

ಮಳೆ ಹಾನಿ: ತ್ವರಿತ ಕ್ರಮಕ್ಕೆ ನಳಿನ್‌ ಸೂಚನೆ

06:00 AM Jul 01, 2018 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಭೂಕುಸಿತ, ರಸ್ತೆಗಳಿಗೆ ಆಗಿರುವ ಹಾನಿಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಕ್ರಮ ಕೈಗೊಳ್ಳುವಂತೆ ಸಂಸದ ನಳಿನ್‌ ಕುಮಾರ್‌ ಕಟೀಲು ಅಧಿಕಾರಿಗಳಿಗೆ ಸೂಚಿಸಿದರು. ದ.ಕ. ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಶನಿವಾರ ಜರಗಿದ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಜಿಲ್ಲೆಯಲ್ಲಿ ಭಾರೀ ಮಳೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಕೈಗೊಂಡಿರುವ ಪರಿಹಾರ ಕ್ರಮಗಳ ವಿವರ ಪಡೆದುಕೊಂಡರು.

Advertisement

17 ಕೋ.ರೂ. ಪ್ರಸ್ತಾವನೆ
ಜಿ.ಪಂ. ಸಿಇಒ ಡಾ| ಎಂ.ಆರ್‌. ರವಿ ಮಾತನಾಡಿ, ಜಿಲ್ಲೆಯಲ್ಲಿ 268 ರಸ್ತೆ, ಸೇತುವೆಗಳು, 101 ಚರಂಡಿಗಳು, 120
ತಡೆಗೋಡೆಗಳು ಸಹಿತ 958 ಸಾರ್ವಜನಿಕ ಅಸ್ತಿಗಳಿಗೆ ಹಾನಿಯಾಗಿದೆ. ದುರಸ್ತಿಗೆ ಪ್ರಕೃತಿ ವಿಕೋಪ ನಿಧಿಯಲ್ಲಿ 17 ಕೋ.ರೂ. ನೀಡುವಂತೆ ಜಿಲ್ಲಾಧಿಕಾರಿಗೆ ಪ್ರಸಾವ ಸಲ್ಲಿಸಲಾಗಿದೆ. ಸುಳ್ಯ ಕಾಂತಮಂಗಲ ಸೇತುವೆಯ ದುರಸ್ತಿಗೆ ಸಿಆರ್‌ಎಫ್‌ನಿಂದ 10 ಲಕ್ಷ ರೂ. ಹಾಗೂ ಜಿ.ಪಂ.ನಿಂದ 5 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದರು.

ಮೂಲರಪಟ್ಣ ತೂಗುಸೇತುವೆ ಬಳಿ ಸಂಪರ್ಕ ರಸ್ತೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ತಿಳಿಸಿದರು.  ಬಂಟ್ವಾಳ,  ಮಂಗಳೂರಿಗೆ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಆರಂಭಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದರು.

ಗುರುಪುರ ಸೇತುವೆ: 2 ದಿನಗಳಲ್ಲಿ ವರದಿ
ರಾ.ಹೆ. 169ರಲ್ಲಿ ಗುರುಪುರ ಸೇತುವೆಯ ದೃಢತೆ ಬಗ್ಗೆ ತಜ್ಞರ ತಂಡ ಅಡಿಪಾಯ, ಕಬ್ಬಿಣ, ಕಾಂಕ್ರೀಟ್‌ ಸಹಿತ ಸೇತುವೆಯ ಪರಿಶೀಲನೆ ನಡೆಸಿದೆ. ಇನ್ನೆರಡು ದಿನಗಳಲ್ಲಿ ನಿಖರ ವರದಿ ಬರುವ ನಿರೀಕ್ಷೆ ಇದೆ ಎಂದು ರಾಷ್ಟ್ರೀಯ ಹೆದ್ದಾರಿ ಕಾರ್ಯನಿರ್ವಾಹಕ ಎಂಜಿನಿಯರ್‌ ವಿವರಿಸಿದರು.

ಬಂಟ್ವಾಳ-ಅಡ್ಡಹೊಳೆ ಚತುಷ್ಪಥ ಕಾಮಗಾರಿಯಿಂದ ಸಂಚಾರ ದುಸ್ತರವಾಗಿದೆ. ಕೆಸರು ನೀರು ಪಕ್ಕದ ಕೃಷಿಭೂಮಿಗಳಿಗೆ ಸೇರುತ್ತಿದೆ. ಹೆದ್ದಾರಿ ಇಲಾಖೆಯ ಅಧಿಕಾರಿಗಳು ತತ್‌ಕ್ಷಣ ಸ್ಪಂದಿಸಬೇಕು. ಎರಡು ತಂಡಗಳನ್ನು ನಿಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಸೂಚಿಸಿದರು. ಅದ್ಯಪಾಡಿಯಲ್ಲಿ ವಿಮಾನ ನಿಲ್ದಾಣದ ನೀರು ಹರಿದ ಕಾರಣ ರಸ್ತೆಗೆ ಆಗಿರುವ ಹಾನಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ವಿವರಿಸಿದರು.

Advertisement

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕರಾದ ಸಂಜೀವ ಮಠಂದೂರು, ಉಮಾನಾಥ ಕೋಟ್ಯಾನ್‌, ರಾಜೇಶ್‌ನಾೖಕ್‌ ಉಳಿಪಾಡಿ, ಹರೀಶ್‌ ಪೂಂಜ, ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ ಉಪಸ್ಥಿತರಿದ್ದರು.

ಶಿರಾಡಿ: ಜು. 15ರ ವೇಳೆಗೆ ಮುಕ್ತ
ಶಿರಾಡಿ ಘಾಟಿ ರಸ್ತೆಯಲ್ಲಿ ಕಾಂಕ್ರೀಟ್‌ ಕಾಮಗಾರಿ ಮುಗಿದಿದೆ. ಕ್ಯೂರಿಂಗ್‌ ಸೇರಿದಂತೆ ಇತರ ಕೆಲವು ಕೆಲಸಗಳಿಗಾಗಿ ಇನ್ನೂ 15 ದಿನಗಳ ಕಾಲಾವಕಾಶ ಬೇಕು. ಜು. 15ರ ವೇಳೆಗೆ ರಸ್ತೆ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೆ ಎಂದು ರಾ. ಹೆದ್ದಾರಿ ಕಾರ್ಯನಿರ್ವಾಹಕ ಎಂಜಿನಿಯರ್‌ ಸುಬ್ಬರಾಮ ಹೊಳ್ಳ ತಿಳಿಸಿದರು. ನಾನು ಶಿರಾಡಿ ಘಾಟಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕೆಲವು ಸಣ್ಣಪುಟ್ಟ ಕಾಮಗಾರಿಗಳ ಆವಶ್ಯಕತೆಯ ಬಗ್ಗೆ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ತಿಳಿಸಿದರು. 
ಶಿರಾಡಿ ಘಾಟಿ ರಸ್ತೆ  ಜು. 5ರ ವೇಳೆಗೆ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಈ ಹಿಂದೆ ಹೇಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next