Advertisement

ರಾಜ್ಯದಲ್ಲಿ ಮಳೆ ಮುಂದುವರಿಯುವ ಸೂಚನೆ : ರಕ್ಷಣಾ ಕಾರ್ಯ ಸಿದ್ಧತೆಗೆ ಸಿಎಂ ಸೂಚನೆ

05:36 PM Nov 17, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿ ಇನ್ನೂ ನಾಲ್ಕೈದು ದಿನ ಮಳೆ ಮುಂದುವರಿಯುವ ಸಾಧ್ಯತೆಗಳಿದ್ದು,ಸಿಎಂ ಬಸವರಾಜ್ ಬೊಮ್ಮಾಯಿ ಅವರು ರಕ್ಷಣಾ ಕಾರ್ಯಕ್ಕೆ ಸಿದ್ದವಾಗಲು ಸೂಚನೆ ನೀಡಿದ್ದಾರೆ.

Advertisement

ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ , ಅನಿರೀಕ್ಷಿತ ಮಳೆ ನಿರಂತರವಾಗಿ ಬೀಳುತ್ತಿದೆ. ಇನ್ನೂ ನಾಲ್ಕು ಐದು ದಿನಗಳ ಕಾಲ ಮಳೆಯಾಗಲಿದೆ ಎಂಬ ಸೂಚನೆಗಳಿವೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಒಟ್ಟು ಪರಿಣಾಮ ಬೆಂಗಳೂರು ನಗರ ಹಾಗೂ ಕೆಲವು ಜಿಲ್ಲೆಗಳಲ್ಲಿ ಬಹಳಷ್ಟು ಆಗಿದೆ. ಈಗಾಗಲೇ ಕೆಲವು ಸಭೆ ನಡೆಸಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ, ತಗ್ಗು ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಎನ್​ಡಿಆರ್​ಎಫ್ ತಂಡಕ್ಕೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

ಯುದ್ಧೋಪಾದಿಯಲ್ಲಿ ಬೆಂಗಳೂರಿನ ಸಮಗ್ರ ರಸ್ತೆಗಳ ದುರಸ್ತಿ

ಬೆಂಗಳೂರಿನ ಸಮಗ್ರ ರಸ್ತೆಗಳ ದುರಸ್ತಿಯನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಲಾಗುವುದು ಹಾಗೂ ಖುದ್ದಾಗಿ ತಾವೇ ಈ ಕಾರ್ಯವನ್ನು ಮೇಲ್ವಿಚಾರಣೆ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಮಳೆ ನಿಂತ ತಕ್ಷಣವೇ ತಗ್ಗು ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳಿಗೆ ತಂಡಗಳ ನಿಯೋಜನೆ ಹಾಗೂ ತಂಡದಲ್ಲಿ ಹೆಚ್ಚಿನ ಜನರನ್ನು ಸೇರ್ಪಡೆಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಇದಲ್ಲದೆ ಎನ್ ಡಿಆರ್ ಎಫ್ ತಂಡಗಳನ್ನು ಹಾಗೂ ರಾಜ್ಯದ ಎಸ್.ಡಿ.ಆರ್.ಎಫ್ ನ ನಾಲ್ಕು ವಿಶೇಷ ತಂಡಗಳನ್ನು ಬೆಂಗಳೂರಿಗೆ ಸೀಮಿತವಾಗಿ ರಚನೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.

Advertisement

ಮಳೆ ಬಂದಾಗ ನಿರ್ವಹಣೆ ಬಗ್ಗೆ ಇದ್ದ ಗೊಂದಲಗಳನ್ನು ನಿವಾರಿಸಲಾಗಿದ್ದು, ಮಳೆ ನಿಂತ ಕೂಡಲೇ ರಸ್ತೆ ದುರಸ್ತಿಯಾಗಬೇಕು. ನಿರ್ವಹಣೆ ಹೊತ್ತ ಸಂಸ್ಥೆ ಮಾಡದಿದ್ದರೆ, ಅವರ ಮೊತ್ತವನ್ನು ತಡೆಹಿಡಿದು, ಪಾಲಿಕೆಯೇ ಈ ಕಾರ್ಯವನ್ನು ಕೈಗೊಂಡು, ಜನರಿಗೆ ಅನಾನುಕೂಲವಾಗದಂತೆ ತಿಳಿಸಿದೆ ಎಂದು ನುಡಿದರು.

110 ಗ್ರಾಮಗಳ ಯು.ಜಿ.ಡಿ ಲೈನ್ ಗಳ ಸಮಸ್ಯೆಯನ್ನು ನಿವಾರಿಸಲು 280 ಕೋಟಿ ಮೊತ್ತದ ಟೆಂಡರ್ ಕಾರ್ಯಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

ಭಾರಿ ಪ್ರಮಾಣದಲ್ಲಿ ಬೆಳೆ ಹಾನಿ

ಅರಬ್ಬಿ ಸಮುದ್ರದಲ್ಲಿಯೂ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಕಾಲಿಕ ಮಳೆಯಾಗುತ್ತಿದ್ದು, ಭಾರಿ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕರಾವಳಿ ಭಾಗದ ಮೀನುಗಾರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕರಾವಳಿಯಲ್ಲಿ ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿಯಾಗಿದೆ.

ಹವಾಮಾನ ಇಲಾಖೆಯಿಂದ ಮಾಹಿತಿಯಂತೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next