ಮಣಿಪಾಲ: ಕರಾವಳಿಯಲ್ಲಿ ವಾರದಿಂದ ಸುರಿದ ಧಾರಕಾರ ಮಳೆ ಎರಡು ದಿನ ಬ್ರೇಕ್ ನೀಡಿದ ನಂತರ ಈಗ ಮತ್ತೆ ಆರಂಭವಾಗಿದೆ.
ಉಡುಪಿ ಜಿಲ್ಲೆಯ ಕಾಪು, ಉಡುಪಿ, ಮಣಿಪಾಲ, ಕುಂದಾಪುರ, ಶಿರ್ವ, ಕಾರ್ಕಳ, ಕೊಲ್ಲೂರು ಭಾಗದಲ್ಲಿ ಸೋಮವಾರ ರಾತ್ರಿಯಿಂದಲೂ ಮಳೆ ಸುರಿಯುತ್ತಿದ್ದು, ಮಂಗಳವಾರವೂ ಮುಂದುವರಿದಿದೆ.
ಭಾರೀ ಮಳೆಯಿಂದಾಗಿ ಪಲಿಮಾರು ತಗ್ಗು ಪ್ರದೇಶಗಳಲ್ಲಿ ನೆರೆ ನೀರು ಏರಿ ನಿಂತಿದೆ. ಮೂಡು ಪಲಿಮಾರು, ಹೊಯಿಗೆ ಹಾಗೂ ಅವರಾಲು ಅಣೆಕಟ್ಟು ಪ್ರದೇಶದ ಸುಮಾರು ಹದಿನೈದು ಮನೆ ಮಂದಿಗೆ ಇದರಿಂದ ತೊಂದರೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ವೇಣೂರು, ಬಂಟ್ವಾಳ, ಸುಬ್ರಹ್ಮಣ್ಯ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಬೆಳ್ತಂಗಡಿ, ಮೂಡಬಿದಿರೆ ಪ್ರದೇಶದಲ್ಲೂ ಮಳೆ ಸುರಿಯುತ್ತಿದ್ದು, ಆದರೆ ತೀವ್ರತೆ ಕಡಿಮೆಯಾಗಿದೆ.
ನಿರಂತರ ಮಳೆಯಿಂದಾಗಿ ಕಳೆದ ಬುಧವಾರದಿಂದ ಐದು ದಿನಗಳ ಕಾಲ ದಕ್ಷಿನ ಕನ್ನೆ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಮಳೆ, ನೆರೆಯ ಪ್ರಮಾಣ ಕಡಿಮೆಯಾದ ಹಿನ್ನಲೆಯಲ್ಲಿ ಮಂಗಳವಾರ ರಜೆ ಇಲ್ಲ ಎಂದು ಉಭಯ ಜಿಲ್ಲಾಡಳಿತಗಳು ಘೋಷಿಸಿವೆ.