ಹುಣಸೂರು: ಆಸಾನಿ ಚಂಡ ಮಾರುತದ ಪರಿಣಾಮ ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ನಾಗರಹೊಳೆ ಉದ್ಯಾನಕ್ಕೆ ಜೀವಕಳೆ ಬಂದಿದೆ. ಕಾಡಿನಲ್ಲಿರುವ ಕೆರೆ ಕಟ್ಟೆಗಳು ಭರ್ತಿ ಆಗಿದ್ದು, ವನ್ಯ ಪ್ರಾಣಿಗಳ ಸ್ವಚ್ಛಂದ ವಿಹಾರಕ್ಕೆ ಪಾರವೇ ಇಲ್ಲದಂತಾಗಿದೆ.
ಬೇಸಿಗೆ ಬಂತೆಂದರೆ ಮೇವು, ನೀರಿಗೆ ಹಾಹಾಕಾರ ಉಂಟಾಗಿ, ವನ್ಯಪ್ರಾಣಿಗಳು ರೈತರ ಜಮೀನಿಗೆ, ಊರುಗಳಿಗೆ ದಾಂಗುಡಿ ಇಡುತ್ತಿದ್ದವು. ಆದರೆ, ಆಸಾನಿ ಚಂಡಮಾರುತ ಇದಕ್ಕೆ ಬ್ರೇಕ್ ಹಾಕಿದೆ. ಉದ್ಯಾನದ ಎಲ್ಲಾ ವಲಯಗಳಲ್ಲೂ ಭಾರೀ ಮಳೆ ಬಿದ್ದಿದೆ. ಇದರಿಂದ ಮೇವು, ನೀರು ಯಥೇಚ್ಛವಾಗಿ ದೊರೆಯುತ್ತಿದೆ. ವನ್ಯ ಪ್ರಾಣಿಗಳು ಮೇವು ಮೇಯುತ್ತಾ ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿವೆ.
ನಿಟ್ಟುಸಿರು ಬಿಟ್ಟ ಅರಣ್ಯಾಧಿಕಾರಿಗಳು: ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಹಗಲು ರಾತ್ರಿ ಎನ್ನದೇ ಬೆಂಕಿಯಿಂದ ಅರಣ್ಯವನ್ನು ಕಾಯುತ್ತಿದ್ದರು. ಕೆಲವೊಮ್ಮೆ ಸಫಾರಿಯೂ ಸ್ಥಗಿತಗೊಳಿಸಲಾಗುತ್ತಿತ್ತು. ಈ ಬಾರಿ ಮುಂಗಾರು ಮಳೆ ಬೇಗನೆ ಆರಂಭವಾಗಿದ್ದು, ಕಾನನದಲ್ಲಿ ಹಸಿರು ಇಮ್ಮಡಿಸಿದೆ. ಪ್ರವಾಸಿಗರಿಗೆ, ವನ್ಯಪ್ರಿಯರಿಗೆ ನಾಗರಹೊಳೆ ಉದ್ಯಾನವನ ಹೇಳಿ ಮಾಡಿಸಿದ ತಾಣವಾಗಿದ್ದರೆ, ಬೇಸಿಗೆಯಲ್ಲೇ ಬಂದ ಮಳೆಯಿಂದಾಗಿ ಅರಣ್ಯಾಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ.
ನಾಗರಹೊಳೆಗೆ ದಾರಿ: ಮೈಸೂರು, ಬೆಂಗಳೂರು ಕಡೆಯಿಂದ ಬರುವವರು ಹುಣಸೂರು, ವೀರನಹೊಸಹಳ್ಳಿಗೆ ಬರಬೇಕು. ಅಥವಾ ಮೈಸೂರಿನಿಂದ ಎಚ್.ಡಿ.ಕೋಟೆಯ ಹ್ಯಾಂಡ್ ಪೋಸ್ಟ್ ಮಾರ್ಗವಾಗಿ ದಮ್ಮನಕಟ್ಟೆಗೆ ತೆರಳಬೇಕು. ಬೆಂಗಳೂರಿನಿಂದ 189 ಕಿ. ಮೀ. ಮೈಸೂರಿನಿಂದ 60 ಕಿ.ಮೀ.
Related Articles
ಸಫಾರಿ ಕೇಂದ್ರಗಳು: ನಾಗರಹೊಳೆ ಉದ್ಯಾನದ ಹುಣಸೂರು ತಾಲೂಕಿನ ವೀರನಹೊಸಹಳ್ಳಿ, ಎಚ್ .ಡಿ.ಕೋಟೆಯ ದಮ್ಮನಕಟ್ಟೆ, ಕೊಡಗಿನ ವಿರಾಜಪೇಟೆ ತಾಲೂಕಿನ ಕುಟ್ಟಬಳಿಯ ನಾಣಚ್ಚಿ ಗೇಟ್ನಿಂದ ಸಫಾರಿ ವ್ಯವಸ್ಥೆ ಇದ್ದು, ಪ್ರವಾಸಿಗರು ಆನ್ಲೈನ್ ಮೂಲಕವೂ ಬುಕ್ ಮಾಡಬಹುದು. ಜಂಗಲ್ ಲಾಡ್ಸ್ನ ಜೆ.ಎಲ್. ಆರ್ ಮೂಲಕವೂ ಸಫಾರಿಗೆ ಅವಕಾಶವಿದೆ.
ಸಂಪತ್ ಕುಮಾರ್