ದೇವನಹಳ್ಳಿ: ಬಯಲುಸೀಮೆಯ ಪ್ರದೇಶವಾಗಿರುವುದರಿಂದ ರೈತರು ಇರುವ ಅಲ್ಪಸ್ವಲ್ಪದ ನೀರಿನಲ್ಲೇ ಟೊಮೆಟೋ ಹಾಗೂ ಇತರೆ ಬೆಳೆ ಬೆಳೆಯುತ್ತಿದ್ದಾರೆ. ಸತತ ಮಳೆ ಮತ್ತು ಚಳಿಯ ಪರಿಣಾಮ ಟೊಮೆಟೋ ಬೆಳೆಗೆ ಅಂಗಮಾರಿ ರೋಗ ಬಿದ್ದು, ನಾಶವಾಗುತ್ತಿದ್ದು ರೈತರಲ್ಲಿ ಆತಂಕ ಮನೆ ಮಾಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬೆಂಗಳೂರಿಗೆ ಹತ್ತಿರದಲ್ಲಿದ್ದರೂ, ತೋಟಗಾರಿಕೆ ಬೆಳೆಗಳನ್ನು ಬೆಳೆದು ರೈತರು ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ವಿವಿಧ ಉದ್ದೇಶಗಳಿಗೆ ಭೂಸ್ವಾಧೀನ ಪ್ರಕ್ರಿಯೆಗಳು ಆಗಿದ್ದರೂ, ತಮ್ಮ ಇರುವ ಅಲ್ಪಸ್ವಲ್ಪದ ಜಮೀನಿನಲ್ಲಿ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ. ಸತತ ಮಳೆಯಿಂದ ಬೋರ್‌ವೆಲ್ ಗಳಲ್ಲಿ ಅಂತರ್ಜಲಮಟ್ಟ ಸಹ ಹೆಚ್ಚಾಗಿದೆ. ಇತ್ತೀಚೆಗೆ ಬಂಗಾಲಕೊಲ್ಲಿಯ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಮೂರ್ನಾಲ್ಕು ದಿನಗ ಳಿಂದ ಸುರಿಯುತ್ತಿರುವ ಮಳೆ ಹಾಗೂ ಚಳಿಯ ಪರಿಣಾಮವಾಗಿ ಟೊಮೆಟೋ ಬೆಳೆಗೆ ಕೊನೆ ಅಂಗಮಾರಿ ರೋಗ ಬಿದ್ದು ಗಿಡಗಳೆಲ್ಲಾ ನಾಶವಾಗುತ್ತಿವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಗಿಡದ ಎಲೆ ಕಪ್ಪು: ತೋಟಗಾರಿಕೆ ಬೆಳೆಗಳನ್ನು ಬೆಳೆದು ಬೆಂಗಳೂರಿಗೆ ಹಾಗೂ ಇತರೆ ಕಡೆಗೆ ರೈತರು ಕಳುಹಿಸುತ್ತಿದ್ದಾರೆ. ಸಾಲ ಮಾಡಿ ಬೆಳೆ ಬೆಳೆಯುತ್ತಿದ್ದಾರೆ. ಟೊಮೆಟೋ ಬೆಳೆ ನಾಟಿ ಮಾಡಿದ್ದೇವೆ. ಇದುವರೆಗೂ 70 ಸಾವಿರಕ್ಕೂ ಹೆಚ್ಚು ಬಂಡವಾಳ ಹೂಡಿಕೆ ಮಾಡಿದ್ದು, 2 ಲಕ್ಷ ರೂ. ನಷ್ಟವಾಗಿದೆ. ಈಗ ಜಿಟಿ, ಜಿಟಿ ಮಳೆ ಹಾಗೂ ಶೀತದ ವಾತಾವರಣವಿರುವ ಕಾರಣ ಗಿಡದ ಎಲೆಗಳು ಕಪ್ಪಾಗುತ್ತಿದ್ದು, ಕಾಯಿಯೂ ಕೂಡಾ ಕಪ್ಪಾಗಿ ಉದುರಿ ಹೋಗುತ್ತಿದೆ. ಇದರಿಂದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ.
ಟೊಮೆಟೋ ಬೆಳೆ ಮಳೆ ಕಂಟಕ: ಕಳೆದ ಮೂರು ತಿಂಗಳ ಹಿಂದೆ ಶುಂಠಿ ಬೆಳೆದಿದ್ದೇವು. ಹೆಚ್ಚು ಮಳೆಗಳಾಗಿದ್ದ ಕಾರಣ, ಭೂಮಿಯಲ್ಲಿ ತೇವಾಂಶ ಜಾಸ್ತಿಯಾಗಿ ಶುಂಠಿಯೆಲ್ಲಾ ಕೊಳೆತು ಹೋಯಿತು. ಈಗ ಸಾಲ ಮಾಡಿ ನಾಟಿ ಮಾಡಿರುವ ಟೊಮೆಟೋ ಬೆಳೆಗೂ ಮಳೆಯು ಕಂಟಕವಾಗಿ ಕಾಡುತ್ತಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.
ಭೂಮಿಯಲ್ಲಿ ತೇವಾಂಶ ಜಾಸ್ತಿಯಾದರೆ ರೋಗಗಳು ಸಹಜವಾಗಿ ಬರುತ್ತವೆ. ರೈತರು ಮುಂಜಾಗ್ರತಾ ಕ್ರಮವಾಗಿ ಮಣ್ಣಿನಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿದ್ದರೂ ಕಾಯಿ ಕೆಳಗೆ ಕಪ್ಪಾಗುತ್ತದೆ. ರೈತರು ಭೂಮಿಗೆ ಕ್ಯಾಲ್ಸಿಯಂ ಹೊಂದಿರುವ ಗೊಬ್ಬರ ಕೊಡಬಹುದು. ಎಲೆಗಳಿಗೆ ಸಿಂಪಡಣೆ ಮಾಡಬಹುದು.
● ಮಂಜುಳಾ, ತೋಟಗಾರಿಕಾ
ಹಿರಿಯ ಸಹಾಯಕ ನಿರ್ದೇಶಕಿ
ನಾಟಿ ಮಾಡಿರುವ ಟೊಮೆಟೋ ಬೆಳೆಗೆ ಕೊನೆ ಅಂಗಮಾರಿ ರೋಗ ಬಿದ್ದು ಕಾಯಿ ಕಪ್ಪಾಗಿದೆ. ಸತತ ಮಳೆಯಿಂದ ಅನೇಕ ರೋಗಗಳು ಟೊಮೆಟೋ ಬೆಳೆಯಲ್ಲಿ ಕಾಣಿಸಿಕೊಳ್ಳುತ್ತದೆ. ತೇವಾಂಶ ಹೆಚ್ಚಾಗುವುದರಿಂದ ಬೆಳೆಗಳ ಮೇಲೆ ಸಾಕಷ್ಟು ನಷ್ಟದ ಹಾನಿ ಎದುರಿಸಬೇಕಾಗುತ್ತದೆ.
● ಮುನಿಶಾಮಪ್ಪ, ರೈತ