ಮಂಗಳೂರು/ಉಡುಪಿ: ಹಿಂಗಾರು ಮತ್ತೆ ಬಿರುಸು ಪಡೆಯುತ್ತಿದ್ದು, ದ. ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ಗುರುವಾರ ಸಿಡಿಲಿನ ಆರ್ಭಟದೊಂದಿಗೆ ಉತ್ತಮ ಮಳೆಯಾಗಿದೆ.
ಬೆಳ್ತಂಗಡಿ, ಕಡಬ, ಪುತ್ತೂರು ತಾಲೂಕಿನಾದ್ಯಂತ ಭಾರೀ ಮಳೆ ಸುರಿದಿದೆ. ಬೆಳ್ತಂಗಡಿ ತಾಲೂಕು ಮತ್ತು ಕೊಡಗು ಜಿಲ್ಲೆಯ ವಿವಿಧೆಡೆ ಮಧ್ಯಾಹ್ನದಿಂದಲೇ ಮಳೆ ಸುರಿಯಲಾರಂಭಿಸಿತ್ತು.
ಮಂಗಳೂರು ನಗರದಲ್ಲಿ ಸಂಜೆ ವೇಳೆ ಸಾಧಾರಣ ಮಳೆಯಾಗಿದೆ. ಬೆಳ್ತಂಗಡಿ, ಉಜಿರೆ, ಪಂಜಿಕಲ್ಲು, ಸಂಟ್ಯಾರು, ಉರುವಾಲು, ನಿಡ್ಲೆ, ಪಂಜ ಪುತ್ತೂರು, ವಿಟ್ಲ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಮಳೆಯಾಗಿದೆ.
ಸಿಡಿಲು ಬಡಿದು ಮನೆಗೆ ಹಾನಿ:
Related Articles
ಉಪ್ಪಿನಂಗಡಿ: ತಣ್ಣೀರುಪಂತ ಗ್ರಾಮದ ಕಲ್ಲೇರಿಯ ಜನತಾ ಕಾಲನಿ ಬಳಿ ಗುರುವಾರ ಸಂಜೆ ಸಿಡಿಲು ಬಡಿದು ಸುಶೀಲಾ ಅವರ ಮನೆ ಬಿರುಕು ಬಿಟ್ಟಿದೆ.
ಉಡುಪಿ ಜಿಲ್ಲೆಯ ಉಡುಪಿ, ಮಣಿಪಾಲ ಪರಿಸರದಲ್ಲಿ ಗುರುವಾರ ರಾತ್ರಿ ಸಿಡಿಲಿನ ಅಬ್ಬರ ಜೋರಾಗಿತ್ತು. ಈ ಪ್ರದೇಶದಲ್ಲಿ ಸಾಧಾರಣ ಮಳೆಯಾಗಿದೆ.
ದ. ಕನ್ನಡ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗಿನ ವೇಳೆ ಚಳಿಯ ವಾತಾವರಣ ಇತ್ತು. ಉಳಿದಂತೆ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು.
ಒದ್ದೆಯಾದ ಅಡಿಕೆ:
ಮಳೆಯಿಂದ ಅಡಿಕೆ ಕೊçಲಿಗೆ ಹಿನ್ನಡೆಯಾಗಿದೆ. ಕೆಲವೆಡೆ ಪ್ರಥಮ ಕೊçಲು ಪೂರ್ಣಗೊಂಡಿದ್ದು ಅಂಗಳದಲ್ಲಿ ಹಾಕಿರುವ ಅಡಿಕೆ ಒದ್ದೆಯಾಗಿದೆ.
ವಾರಾಂತ್ಯ ಉತ್ತಮ ಮಳೆ ಸಾಧ್ಯತೆ:
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಯಂತೆ ನ.27 ಮತ್ತು 28ರಂದು ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ.