ಮಂಗಳೂರು/ಉಡುಪಿ: ಕರಾವಳಿ ಭಾಗದ ಕೆಲವು ಕಡೆ ಬುಧವಾರ ಮುಂಜಾನೆ ಮಳೆ ಸುರಿದಿದೆ. ಆದರೂ, ಉರಿ ಸೆಕೆ ಮುಂದುವರಿದಿದೆ.
ಬೆಳ್ತಂಗಡಿ, ಮುಂಡಾಜೆ, ಧರ್ಮಸ್ಥಳ, ಮಚ್ಚಿನ ಸುತ್ತಮುತ್ತ ಮುಂಜಾನೆ 5 ಗಂಟೆಯಿಂದ ಉತ್ತಮ ಮಳೆ ಸುರಿದಿದೆ. ಬಂಟ್ವಾಳ ತಾಲೂಕಿನ ನಾವೂರು, ಸರಪಾಡಿ, ಉಳಿ, ಮಾಣಿ ಭಾಗದಲ್ಲಿ ಹನಿ ಮಳೆಯಾಗಿದೆ. ಪುತ್ತೂರಿನ ಕಬಕ, ಪುಣಚ, ಬಂಟ್ವಾಳ, ಸುಬ್ರಹ್ಮಣ್ಯ, ಕಲ್ಮಕಾರು, ಹರಿಹರ ಪಲ್ಲತ್ತಡ್ಕ, ಐನೆಕಿದು ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕರಾವಳಿ ಭಾಗದ ಅಲ್ಲಲ್ಲಿ ಮುಂದಿನ ಎರಡು ದಿನ ಸಾಧಾರಣ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ಉಡುಪಿ: ಹನಿ ಮಳೆ
ಉಡುಪಿ: ಹವಾಮಾನ ವೈಪರಿತ್ಯದಿಂದಾಗಿ ಬುಧವಾರ ಉಡುಪಿ ನಗರದಲ್ಲಿ ಮುಂಜಾನೆ ವೇಳೆ ಹನಿ, ಹನಿ ಮಳೆ ಸುರಿಯಿತು. ಜಿಲ್ಲೆಯಾದ್ಯಂತ ಬೆಳಗ್ಗೆ ಮೋಡ ಕವಿದ ವಾತಾವರಣ ಇತ್ತಾದರೂ ಮಳೆಯಾಗಲಿಲ್ಲ.
ಮುಂದುವರಿದ ಉರಿ ಸೆಕೆ
ಮಂಗಳೂರು ಸಹಿತ ಕೆಲವು ಕಡೆಗಳಲ್ಲಿ ಮಳೆ ಸುರಿದಿಲ್ಲ. ಬೆಳಗ್ಗೆಯಿಂದಲೇ ಬಿಸಿಲಿನ ತಾಪ ಹೆಚ್ಚು ಇತ್ತು. ಇದೇ ಕಾರಣಕ್ಕೆ ದಿನವಿಡೀ ಉರಿ ಸೆಕೆ ಮುಂದುವರಿದಿತ್ತು. ಮಂಗಳೂರಿನಲ್ಲಿ 33 ಡಿ.ಸೆ. ಗರಿಷ್ಠ ಮತ್ತು 24.6 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.
Related Articles
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಬುಧವಾರ ಸಂಜೆ ವೇಳೆ ಮತ್ತೆ ಮಳೆಯಾಯಿತು. ಮಂಗಳವಾರಕ್ಕಿಂತ ಮಳೆ ಅಲ್ಪ ಬಿರುಸು ಪಡೆದಿತ್ತು. ಸುಮಾರು ಅರ್ಧ ತಾಸಿಗೂ ಅಧಿಕ ಸಮಯ ಮಳೆಯಾಗಿದೆ. ಕುಕ್ಕೆ ಸುಬ್ರಹ್ಮಣ್ಯ, ಐನೆಕಿದು, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಬಳ್ಪ ಸೇರಿದಂತೆ ಪರಿಸರದ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ದ.ಕ. ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ ಗರಿಷ್ಠ ತಾಪಮಾನ ದಾಖಲಾಗಿತ್ತು.