Advertisement

ಹುಣಸೂರು: ಮೊದಲ ವರ್ಷಧಾರೆಗೆ ನೂರಾರು ಎಕರೆ ಬಾಳೆ ಬೆಳೆ ನಾಶ, ಲಕ್ಷಾಂತರ ರೂ. ನಷ್ಟ

11:41 AM Mar 31, 2023 | Team Udayavani |

ಹುಣಸೂರು: ವರ್ಷದ ಮೊದಲ ಬಿರುಗಾಳಿ ಸಹಿತ ಮಳೆಗೆ ತಾಲೂಕಿನ ಬಿಳಿಕೆರೆ ಹೋಬಳಿಯ ಗದ್ದಿಗೆ ಭಾಗದಲ್ಲಿ ಅಪಾರ ಬಾಳೆ, ತೆಂಗಿನ ಮರಗಳು ಉರುಳಿ ಬಿದ್ದಿವೆ. ಅನೇಕ ಗುಡಿಸಲುಗಳಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಉಂಟು ಮಾಡಿದೆ.

Advertisement

ಬುಧವಾರ ಸಂಜೆ ಬೀಸಿದ ಗುಡುಗು ಸಹಿತ ಬಿರುಗಾಳಿ ಮಳೆಗೆ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಫಲಕ್ಕೆ ಬಂದಿರುವ ನೇಂದ್ರ ಮತ್ತು ಏಲಕ್ಕಿ ಬಾಳೆ ಕಂದು ಅರ್ಧಕ್ಕೆ ಮುರಿದು ಗೊನೆ ಸಹಿತ ನೆಲಕಚ್ಚಿದ್ದರೆ, ನೂರಾರು ತೆಂಗಿನ ಮರಗಳು ಬುಡ ಸಹಿತ ಉರುಳಿ ಬಿದ್ದಿವೆ. ಜಮೀನಿನಲ್ಲಿದ್ದ ಮರಗಳು ನೆಲಕ್ಕುರುಳಿವೆ. ಶುಂಠಿ ಜಮೀನಿನಲ್ಲಿ ಹಾಕಿಕೊಂಡಿದ್ದ ಹತ್ತಾರು ಶೆಡ್‌ಗಳು ಬಿರುಗಾಳಿಗೆ ಹಾರಿ ಹೋಗಿವೆ.

ಗದ್ದಿಗೆ ಬಳಿಯ ಸಂಜೀವ ನಗರದ ಹಲವಾರು ರೈತರಯ ಸೇರಿದಂತೆ ಹನುಮಂತಪುರ, ಗಡಿಯಂಚಿನ ಕೋಟೆ ತಾಲೂಕಿನ ಚಾಮಳ್ಳಿ ಹುಂಡಿ, ಷರೀಫ್ ಕಾಲೋನಿಗಳಲ್ಲಿ ನೂರಕ್ಕೂ ಹೆಚ್ಚು ರೈತರ ಜಮೀನುಗಳ ಬೆಳೆದಿದ್ದ ಬಾಳೆ, ತೆಂಗಿನ ಮರಗಳು ಉರುಳಿ ಬಿದ್ದು ಅನಾಹುತ ಸೃಷ್ಟಿಸಿದೆ.

ರಾಜ್ಯ ತೋಟಗಾರಿಕೆ ಫೆಡರೇಷನ್‌ನ ಉಪಾಧ್ಯಕ್ಷ ಸೂರ್ಯಕುಮಾರ್‌ರಿಗೆ ಸೇರಿದ ಫಲಕ್ಕೆ ಬಂದಿದ್ದ ತೆಂಗಿನ ಮರಗಳು ಅರ್ಧಕ್ಕೆ ಮುರಿದು ಬಿದ್ದಿವೆ. ಶುಂಠಿ ಹೊಲಗಳಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿದ್ದ ಶೆಡ್‌ಗಳನ್ನು ಬಿರುಗಾಳಿ ಹೊತ್ತೊಯ್ದು, ಪದಾರ್ಥಗಳಿಗೆ ಹಾನಿಯಾಗಿದೆ.

Advertisement

ಇಷ್ಟೆಲ್ಲಾ ಅನಾಹುತವಾಗಿದ್ದರೂ ಚುನಾವಣಾ ಕಾರ್ಯದಲ್ಲಿ ಬ್ಯುಸಿಯಾಗಿರುವ ಕಂದಾಯಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡದೆ ರೈತರು ಪರಿಹಾರ ಪಡೆಯುವುದು ಹೇಗೆಂಬ ಆಂತಕದಲ್ಲಿದ್ದಾರೆ.

ಜನ ಪ್ರತಿನಿಧಿಗಳು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡದಂತಾಗಿದೆ. ಇನ್ನಾದರೂ ಕಂದಾಯ ಇಲಾಖೆ ಅಧಿಕಾರಿಗಳು ಹಾನಿ ಸ್ಥಳಕ್ಕೆ  ಭೇಟಿ ಇತ್ತು ಸೂಕ್ತ ಪರಿಹಾರ ಕೊಡಿಸಬೇಕೆಂದು ತೋಟದ ಬೆಳೆಗಾರರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next