ಬೆಂಗಳೂರು: ಬೆಂಗಳೂರು, ಮೈಸೂರು, ಬೆಳಗಾವಿ, ಧಾರವಾಡ, ಸುಬ್ರಹ್ಮಣ್ಯ ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಸಿಡಿಲಬ್ಬರದ ಮಳೆಗೆ ಮೂವರು ಬಲಿಯಾಗಿದ್ದಾರೆ. ಈ ಮಧ್ಯೆ, ಇನ್ನೂ ಮೂರ್‍ನಾಲ್ಕು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದಲ್ಲಿ ಶನಿವಾರ ಸಂಜೆ ಸಿಡಿಲು ಬಡಿದು ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಅವರ ಸಹೋದರ ವೆಂಕರಡ್ಡಿ ಹನುಮರಡ್ಡಿ ಕೋನರಡ್ಡಿ (48) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊಲಕ್ಕೆ ಬಿತ್ತನೆ ಮಾಡಲು ತೆರಳಿದ್ದ ವೇಳೆ ಸಿಡಿಲು ಬಡಿಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ನಾರಾಯಣಪುರದಲ್ಲಿ ಸಿಡಿಲಿಗೆ ಗೌರಮ್ಮ (56) ಎಂಬುವರು ಮೃತಪಟ್ಟಿದ್ದಾರೆ.
ಜಮೀನಿನಿಂದ ಎಮ್ಮೆ ಹಿಡಿದುಕೊಂಡು ಮನೆಗೆ ಬರುತ್ತಿದ್ದಾಗ ಸಿಡಿಲು ಬಡಿಯಿತು. ಬೆಳಗಾವಿ ಜಿಲ್ಲೆಯಲ್ಲಿ ಎರಡನೇ ದಿನವೂ ಮಳೆಯ ರುದ್ರನರ್ತನ ಮುಂದುವರಿದಿದ್ದು, ಬೆಳಗಾವಿ ಹೊರವಲಯದ ಭೂತರಾಮನಹಟ್ಟಿಯಲ್ಲಿ ಶನಿವಾರ ಹಳ್ಳದ ನೀರಿನ ರಭಸಕ್ಕೆ ಸಿಲುಕಿ ಇಮ್ರಾನ್ ಸಲೀಮ ನದಾಫ (22) ಎಂಬುವರು ಕೊಚ್ಚಿಹೋಗಿದ್ದಾರೆ. ಹುಕ್ಕೇರಿ ತಾಲೂಕಿನ ಕೊಟಬಾಗಿಯಲ್ಲಿ ಟೇಲರಿಂಗ್ ಕೆಲಸ ಮಾಡುತ್ತಿದ್ದ ಇಮ್ರಾನ್, ಸಹೋದರ ಅಮೀರ ದಾವುದ್ ನದಾಫ ಜೊತೆ ಬೆಳಗಾವಿಗೆ ಬಂದಿದ್ದರು. ಊರಿಗೆ ಮರಳುವಾಗ ಜೋರಾಗಿ ಮಳೆ ಬಂದಿದ್ದರಿಂದ ಇಬ್ಬರೂ ಮರದ ಕೆಳಗಡೆ ನಿಂತಿದ್ದರು. ಇದೇ ವೇಳೆ ಏಕಾಏಕಿ ರಭಸವಾಗಿ ಬಂದ ನೀರಿನಲ್ಲಿ ಇಮ್ರಾನ್ ಕೊಚ್ಚಿಹೋದರು.
ಶನಿವಾರ ಸಂಜೆ ಚಿಕ್ಕೋಡಿ ಸುತ್ತಮುತ್ತ ಸುಮಾರು ಒಂದು ಗಂಟೆ ಕಾಲ ಮಳೆಯಾದ ಕಾರಣ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು. ಮೈಸೂರು, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳ ವಿವಿಧೆಡೆ ಭಾರೀ ಮಳೆಯಾಗಿದ್ದು, ಚಿಕ್ಕಮಗಳೂರು ಸಮೀಪದ ಬಾಳೆಹೊನ್ನೂರು -ಕಳಸ ಮಾರ್ಗದ ಮಾಲ್ಗೊàಡ್ ಸೇತುವೆ ಮೇಲೆ ನೀರು ಉಕ್ಕಿ ಹರಿಯಿತು. ಇದೇ ವೇಳೆ, ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದಲ್ಲಿ ಶುಕ್ರವಾರ ರಾತ್ರಿ ಸಿಡಿಲು ಬಡಿದು ಮಗು ಸೇರಿ ಮೂವರು ಗಾಯಗೊಂಡಿದ್ದಾರೆ.
ಕರಾವಳಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಸುಬ್ರಹ್ಮಣ್ಯದಲ್ಲಿ ಅಡಿಕೆ ಮರ, ರಬ್ಬರ್ ಹಾಗೂ ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ಕೃಷ್ಣ ನಾಯ್ಕ ಮತ್ತು ಅವರ ಪತ್ನಿ ಜಯಂತಿ ಎಂಬುವರು ಗಾಯಗೊಂಡಿದ್ದಾರೆ.
ಮುಂಗಾರು ಮಳೆ ಅಲ್ಲ; ಹವಾಮಾನ ಇಲಾಖೆ
ಭಾಗಶ: ದಕ್ಷಿಣ ಒಳನಾಡು ಮತ್ತು ಸಂಪೂರ್ಣ ಉತ್ತರ ಕರ್ನಾಟಕದಲ್ಲಿ ಇನ್ನೂ ಮುಂಗಾರು ಮಾರುತಗಳ ಪ್ರವೇಶ ಆಗಿಲ್ಲ.
ಆದರೆ, ಪೂರ್ವ ಮುಂಗಾರು ಪ್ರಬಲವಾಗಿರುವುದರಿಂದ ಅತ್ಯಧಿಕ ಮಳೆ ಆಗುತ್ತಿದೆ. ಶನಿವಾರ ಧಾರವಾಡದಲ್ಲಿ ಅತಿ ಹೆಚ್ಚು 92 ಮಿ.ಮೀ. ಮಳೆ ದಾಖಲಾಗಿದ್ದರೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸುರಿದ 84 ಮಿ.ಮೀ.ಮಳೆ ಅವಾಂತರ ಸೃಷ್ಟಿಸಿತು.
ಬೆಂಗಳೂರು ಒಳಗೊಂಡಂತೆ ರಾಜ್ಯದ ದಕ್ಷಿಣದ ಕೆಲ ಪ್ರದೇಶ ಹಾಗೂ ಉತ್ತರ ಒಳನಾಡಿನಲ್ಲಿ ಇನ್ನೂ ಮುಂಗಾರು ಪ್ರವೇಶ ಆಗಿಲ್ಲ. ಈಗ ಆಗುತ್ತಿರುವುದು ಪೂರ್ವಮುಂಗಾರು ಮಳೆಯಾಗಿದ್ದು, ಇನ್ನೂ ಮೂರ್‍ನಾಲ್ಕು ದಿನ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಮುಂಗಾರು ಮಾರುತಗಳು ಹಾಸನದವರೆಗೆ ಆಗಮಿಸಿದ್ದು, ಶೀಘ್ರದಲ್ಲೇ ಉಳಿದೆಡೆ ವಿಸ್ತರಣೆ ಆಗಲಿವೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್. ಪಾಟೀಲ ತಿಳಿಸಿದ್ದಾರೆ.