Advertisement

ಮಳೆ ನೀಡಿದ ಸಿಹಿ ಅನುಭವಗಳು..!

05:36 PM Jun 13, 2021 | Team Udayavani

ಅಯ್ಯೋ ಮಳೆ ಹನಿ ಒಡೆಯಿತು. ಅಂಗಳದಲ್ಲಿ ಬಟ್ಟೆಗಳಿವೆ. ಅಟ್ಟದ ಮೇಲೆ ಅಕ್ಕಿ ಒಣಗಿ ಹಾಕಿದ್ದೇನೆ ಬುಟ್ಟಿಗೆ ತುಂಬು. ಅಡುಗೆ ಮನೆ ಕಟ್ಟಿಗೆ ಮೂಲೆಗೆ ಕಟ್ಟಿಗೆ ವಟ್ಟಬೇಕು ನೆನೆದು ಮೆತ್ತಗಾದರೆ ಒಲೆ ಉರಿಯುವುದಿಲ್ಲ, ಅಡುಗೆಯೂ ಆಗುವುದಿಲ್ಲ. ಓಡು ಓಡು ಬೇಗನೆ ಮಳೆ ಜೋರು ಬರುವ ಹಾಗಿದೆ.

Advertisement

ಬಹುಶಃ ಈ ಮೇಲಿನ ಮಾತುಗಳು ಎಲ್ಲರ ಮನೆಯಲ್ಲಿಯೂ ಮಳೆ ಬರುವ ಮೊದಲು ಕೇಳಿಬರುವಂತಹವುಗಳೇ ..! ಓಡುವ ಕಾಲಿಗೆ ಪುರುಸೊತ್ತು ನೀಡದೆ ಮಳೆ ಮಿಂಚಿನ ವೇಗದಲ್ಲೋ ಚಿರತೆಯ ಓಟದಂತೆಯೋ ಬಿಟ್ಟು ಬಿಡದೆ ರಪರಪನೆ ಸುರಿದು ತನ್ನ ನೈಪುಣ್ಯವನ್ನು ತೋರಿಸಿಬಿಡುತ್ತದೆ.

ಹೌದು !, ಮಳೆ ಎಂದರೆ ಹೊಸತನ. ಅದರಲ್ಲೂ ಬಾಲ್ಯದ ದಿನಗಳಲ್ಲಿ ಮಳೆ ಎಂದರೆ ಮೋಜು . ತಮ್ಮಂದಿರನ್ನೆಲ್ಲ ಕರೆದುಕೊಂಡು ಶಾಲೆಗೆ ಹೋಗುವ ದಿನಗಳಲ್ಲಿ ನಾವು ಮಳೆಯ ಒಡನಾಡಿಗಳು. ರೋಡ್‌ನ‌ಲ್ಲಿ ನಿಂತ ಕೆಸರಿನ ಗುಂಡಿಗಳಲ್ಲಿ ಜಿಗಿಯುವುದು ಪ್ರಿಯವಾದ ಆಟ. ಹರಿಯುವ ನೀರಿನಲ್ಲಿ ಕಾಗದದ ದೋಣಿ ಮಾಡಿ ಬಿಡುತ್ತಿದ್ದೆವು.

ಅವ್ವ, ಎಲ್ಲರಿಗೂ ಸೇರಿ ಹನ್ನೆರಡು ಬಣ್ಣಗಳಿಂದ ಕೂಡಿದ ಛತ್ರಿ ತಂದು ಕೊಟ್ಟಿರುತ್ತಿದ್ದಳು. ಅದನ್ನು ಬ್ಯಾಗ್‌ಗೆ ಪುಸ್ತಕಗಳು ನೆನೆಯದಂತೆ ಹಿಡಿಯುತ್ತಿದ್ದೆವು. ನಾಳೆಯ ದಿನ ಕ್ಲಾಸಿನಲ್ಲಿ ಹೊಡೆತ ತಿನ್ನಬೇಕಾದೀತೆಂಬ ಭಯದಿಂದ ಅದೊಂದು ಜವಾಬ್ದಾರಿ ಕೆಲಸ ಮಾಡಿ ಉತ್ತಮ ವಿದ್ಯಾರ್ಥಿ ಎಂಬ ಹೆಸರು ಗಳಿಸಿದ್ದು ಉಂಟು ..! ಆದರೆ ಛತ್ರಿಗೂ ಎರಡು ವಾರದ ಆಯಸ್ಸು ಗಾಳಿ ಬೀಸುವ ದಿಕ್ಕಿಗೆ ಛತ್ರಿ ಹಿಡಿದು ಡಿಶ್‌ ಡಿಶ್‌ ಮಾಡುವ ಮೋಜುಗಳೇನೂ ಕಡಿಮೆಯಿರಲಿಲ್ಲ . ಇದಕ್ಕೂ ಎರಡು ಒಣ ತೊಗರಿಕಟ್ಟಿಗೆಯ ಪೆಟ್ಟುಗಳು ಮನೆಯಲ್ಲಿ ಉಚಿತವಾಗಿ ಸಿಗುತ್ತಿದ್ದವು.

ಸಾಮಾನ್ಯವಾಗಿ ರೈತರ ಬೀಜ ಬಿತ್ತನೆ ಕಾರ್ಯಗಳೆಲ್ಲ ಮಳೆಗಾಲದಲ್ಲಿಯೇ ಜರಗುತ್ತವೆ. ಆ ದಿನಗಳಲ್ಲಿ ಎತ್ತಿನಗಾಡಿಯಲ್ಲಿ ಮನೆಯವರೆಲ್ಲ ಸೇರಿ ಹೊಲಕ್ಕೆ ಹೋಗುತ್ತಿದ್ದೆವು. ಮಳೆ ಕೆಲವು ಹೊತ್ತು ಬರುವುದು ಮಾಡುತ್ತಿತ್ತು. ಆಗ ಮಣ್ಣಿನ ವಾಸನೆ, ಕೈ ಕಾಲಿಗೆ ಮೆತ್ತಿದ ಕೆಸರು, ವಾತಾವರಣದ ತಂಪಾದ ಗಾಳಿ ಎಲ್ಲವೂ ಹಾಯ್‌ ಎನಿಸುವ ಅನುಭವ. ಸಣ್ಣಗೆ ಶುರುವಾದ ಮಳೆಯಲ್ಲಿ ನಾಲಗೆ ಮುಂದಕ್ಕೆ ಚಾಚಿ ಮುಗಿಲಿಗೆ ಮುಖವೊಡ್ಡಿ ನಿಲ್ಲುವ ನಮ್ಮ ಭಂಗಿಯನ್ನು ಯಾರಾದರೂ ನೋಡಿದರೆ ಚಕ್ಕಡಿಯ ಅಡಿಯಲ್ಲಿ ಅವಿತುಕೊಳ್ಳುವ ನಾಟಕ ಜಾರಿಯಲ್ಲಿತ್ತು. ಕೆಲವೊಂದು ವರ್ಷ ಮಳೆಯಾಗದೆ ಬರಗಾಲ ಬಿದ್ದಾಗ ಓಣಿಯಲ್ಲಿ ವಾರಿಗೆಯವರೆಲ್ಲ ಸೇರಿ ಸಗಣಿಯಲ್ಲಿ ಹಟ್ಟಿಗೌರವ್ವ ಅನ್ನು ಮಾಡಿ ಪೂಜಿಸಿ ಒಂದು ಜರಡಿಯಲ್ಲಿಟ್ಟು ಒಬ್ಬೊಬ್ಬರು ಮೂರು ಬಾರಿಯಂತೆ ಅದನ್ನು ತಿರುವಿ ಹಾಕುತ್ತಿದ್ದೆವು. ತಿರುವಿ ಹಾಕಿದಾಗಲೂ ಮುಖ ಮೇಲೆಯಾಗಿದ್ದರೆ ಮಳೆ ಬರುವ ಸೂಚನೆ. ಮುಖ ಕೆಳಗಾದರೆ ಬರಗಾಲವೆಂದು ಅರ್ಥೈಸಿಕೊಳ್ಳುತ್ತಿದ್ದೆವು.

Advertisement

ಅನಂತರ ತಲೆ ಮೇಲೆ ಹೊತ್ತು ಒಬ್ಬೊಬ್ಬರು ಒಂದು ಮನೆಗೆ ತೆರಳಿ ಜರಡಿ ಜರಡಿ ಗೌರವ್ವ ಎನ್ನುತ್ತಾ ನೀರು ಹಾಕಿಸಿಕೊಂಡು ಖುಷಿಯಿಂದ ಬಗುರಿಯಂತೆ ತಿರುಗುತ್ತಿದ್ದೆವು. ಜತೆಗೆ ಬೊಗಸೆ ಜೋಳವನ್ನು ಸಹ ನೀಡಿಸಿಕೊಂಡು ಅವುಗಳನ್ನು ಅಂಗಡಿಗೆ ಹಾಕಿ ಮಂಡಕ್ಕಿ ಕೊಬ್ಬರಿ ಪನಿವಾರ ಹಂಚುತ್ತಿದ್ದೆವು. ಮುದ್ದು ಮಕ್ಕಳಾಗಿ ಮಳೆರಾಯನನ್ನು ಭೂಮಿಗೆ ಕರೆದ ಪರಿ ಇಂದಿಗೂ ಮೈ ರೋಮಾಂಚನಗೊಳಿಸುತ್ತದೆ.

ಭಾರೀ ಮಳೆಯಾಗಿ ನಮ್ಮೂರಿನ ಕೆರೆ ತುಂಬಿದಾಗ ನಾವಂತೂ ಕ್ಷೇತ್ರ ವೀಕ್ಷಣೆಗೆ ಹಾಜರಾಗುತ್ತಿದ್ದವರು. ಜತೆಗೆ ಒಂದಷ್ಟು ಕಲ್ಲು ಆರಿಸಿಕೊಂಡು ಒಂದೊಂದೇ ಕಲ್ಲು ಕೆರೆಗೆ ಎಸೆಯುತ್ತಾ ಅಲೆಗಳನ್ನು ಎಬ್ಬಿಸಿ ಯಾರ ಕಲ್ಲು ಹೆಚ್ಚು ದೂರ ಹೋಗುತ್ತದೆಂದು ನಾವು ನಾವೇ ತೀರ್ಪು ಕೊಡುತ್ತಿದ್ದೆವು. ಅಂಗಳದಲ್ಲಿ ಬಿದ್ದ ಆಲಿ ಕಲ್ಲುಗಳನ್ನು ಹಿಡಿಯಲು ಹರಸಾಹಸ ಮಾಡುತ್ತಿದ್ದೆವು. ಹೀಗೆ ಬಗೆದಷ್ಟು ಆಳದ ನೆನಪುಗಳ ಸಂಚಿಕೆಯನ್ನು ಹೊತ್ತು ತರುವ ಮಳೆ ಎಂಬ ಆಪ್ತ ಗೆಳೆಯನೊಂದಿಗೆ ಮಗುವಾಗಿ ಬೆರೆಯಲು ಮತ್ತೂಂದು ಬಾಲ್ಯವೇ ಬೇಕೆನಿಸುತ್ತದೆ ನನಗೆ.

 

ಮಧು ಕಾರಗಿ

ಬಿಇಎಸ್‌ ಎಂ ಕಾಲೇಜು, ಬ್ಯಾಡಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next