Advertisement

15ಕ್ಕೂ ಅಧಿಕ ಗ್ರಾಮಗಳ ನೂರಾರು ಮನೆ ಜಲಾವೃತ

01:58 AM Aug 10, 2019 | Team Udayavani |

ಬೆಳ್ತಂಗಡಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಹರಿಯುತ್ತಿರುವ ನದಿ ಮತ್ತು ಉಪನದಿಗಳಲ್ಲಿ ಶುಕ್ರವಾರ ನಿರೀಕ್ಷೆ ಮೀರಿದ ಪ್ರವಾಹ ಉಂಟಾಗಿ ತಾಲೂಕಿನ ಸುಮಾರು 15ಕ್ಕೂ ಅಧಿಕ ಗ್ರಾಮಗಳ ನೂರಾರು ಮನೆಗಳು ಜಲಾವೃಗೊಂಡು ಆತಂಕದ ವಾತಾವರಣ ನಿರ್ಮಾಣವಾಗಿತ್ತು.

Advertisement

ತಾಲೂಕಿನ ನೇತ್ರಾವತಿ, ಕಪಿಲ, ಮೃತ್ಯುಂಜಯ, ಸೋಮಾವತಿ ನದಿಗಳು, ನೆರಿಯ ಮತ್ತು ಅಣಿಯೂರು ಹೊಳೆಯಲ್ಲಿ ಪ್ರವಾಹದ ನೀರು ಉಕ್ಕಿಹರಿದಿತ್ತು. ಶುಕ್ರವಾರ ಮುಂಜಾನೆಯೇ ಪ್ರವಾಹ ಹರಿದು ಬಂದಿದ್ದು, ಬೆಳಗ್ಗೆಜನರು ಏಳುವ ಹೊತ್ತಿಗೆ ಮನೆಯಂಗಳದಲ್ಲಿ ನೆರೆ ಕಂಡು ಬೆಚ್ಚಿದರು. ಸ್ಥಳೀಯರು ಹೇಳುವ ಪ್ರಕಾರ ಇಂತಹ ನೆರೆ ನೀರು ಕಂಡದ್ದು ಇದೇ ಮೊದಲು.

ಲಾೖಲ, ನಾವೂರು, ಇಂದಬೆಟ್ಟು, ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ, ಮುಂಡಾಜೆ, ಕಲ್ಮಂಜ, ಚಾರ್ಮಾಡಿ, ಪುದುವೆಟ್ಟು, ಧರ್ಮಸ್ಥಳ, ಶಿಶಿಲ, ಕೊಕ್ಕಡ, ನಿಡ್ಲೆ, ಬೆಳಾಲು ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣ ವಾಗಿತ್ತು.

ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟವು ಶುಕ್ರವಾರ ಬೆಳಗ್ಗೆಯೇ ಮುಳುಗಡೆಯಾಗಿದ್ದು, ಮಧ್ಯಾಹ್ನದ ವೇಳೆಗೆಹೆಚ್ಚಿನ ಪ್ರಮಾಣದ ನೀರು ಕಂಡುಬಂದಿತ್ತು. ನೂರಾರು ಮನೆಗಳು ಜಲಾವೃತವಾಗಿರುವ ಜತೆಗೆ ಸಾವಿರಾರು ಎಕರೆ ಅಡಿಕೆ ತೋಟಗಳು, ಭತ್ತ, ರಬ್ಬರ್‌ ಬೆಳೆಗಳು ಜಲಾವೃತಗೊಂಡಿದ್ದವು.

ಪ್ರವಾಹಕ್ಕೆ ಸಿಲುಕಿದ ಭಕ್ತರು
ಮಿತ್ತಬಾಗಿಲು ಗ್ರಾಮದ ದಿಡುಪೆ ಪ್ರದೇಶದಲ್ಲಿ ಸ್ಥಳೀಯ ಹೊಳೆಯಿಂದ ಪ್ರವಾಹದ ನೀರು ಉಕ್ಕಿ ಕೂಡಬೆಟ್ಟು ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ವರಮಹಾಲಕ್ಷ್ಮೀ ಪೂಜೆಗೆ ಬಂದ ನೂರಕ್ಕೂ ಅಧಿಕ ಭಕ್ತರು ಸಿಲುಕಿ ಹಾಕಿಕೊಂಡರು. ನೆರಿಯ ಗ್ರಾಮದ ಕಾಟಾಜೆಯಲ್ಲಿ ವೃದ್ಧರೊಬ್ಬರು ನೆರೆ ನೀರಿನಲ್ಲಿ ಸಿಲುಕಿದ್ದು, ರಕ್ಷಿಸಲಾಯಿತು. ಚಾರ್ಮಾಡಿ ಪ್ರದೇಶದಲ್ಲಿ 35ಕ್ಕೂ ಅಧಿಕ ಮನೆಗಳು ಜಲಾವೃತವಾಗಿದ್ದವು. ನಾವೂರು, ಕಾಜೂರು-ಕೊಲ್ಲಿ ಪ್ರದೇಶದಲ್ಲೂ ಸಾಕಷ್ಟು ಮನೆಗಳು ಜಾಲಾವೃತಗೊಂಡಿದ್ದವು. ಪುದುವೆಟ್ಟು ಗ್ರಾಮದ ಬೊಲ್ಮನಾರು ಪೆಲತ್ತೇರಿ, ಕೇರ್ಯ ಪ್ರದೇಶದಲ್ಲಿ 15ಕ್ಕೂ ಅಧಿಕ ಮನೆಗಳು ಸಂಕಷ್ಟಕ್ಕೆ ಸಿಲುಕಿದ್ದವು. ಪಜಿರಡ್ಕ ಪ್ರದೇಶದಲ್ಲಿ ಕುಟುಂಬವೊಂದು ನೆರೆ ನೀರಿಗೆ ಸಿಲುಕಿ ಮನೆಯ ಮಹಡಿಯ ಮೇಲೆ ಬಂದು ರಕ್ಷಣೆಗಾಗಿ ಬೊಬ್ಬೆ ಹಾಕುತ್ತಿದ್ದುದು ಕಂಡುಬಂತು.

Advertisement

ತಾಲೂಕು ಆಡಳಿತ ಪರಿಹಾರ ಕೇಂದ್ರಗಳನ್ನು ತೆರೆದಿದೆ.

ಪಜಿರಡ್ಕ ಸಂಗಮ ಕ್ಷೇತ್ರ ಸೇರಿದಂತೆ ಹತ್ತಾರು ಧಾರ್ಮಿಕ ತಾಣಗಳು ಕೂಡ ಪ್ರವಾಹದ ನೀರಲ್ಲಿ ಮುಳುಗಿದ್ದವು.

ಕೊಚ್ಚಿ ಹೋದ ಸೇತುವೆ

ಸೋಮಂತ್ತಡ್ಕದಿಂದ ದಿಡುಪೆಗೆ ಸಂಪರ್ಕ ಕಲ್ಪಿಸುವ ಕುಕ್ಕಾವು ಸೇತುವೆ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದು, ಸಂಪರ್ಕ ಕಡಿತಗೊಂಡಿದೆ. ನೆರಿಯ ಗ್ರಾಮದ ಬಂಜಾರಿನಲ್ಲಿ ಹಳೆಯ ಸೇತುವೆ ಕೊಚ್ಚಿ ಹೋಗಿದೆ. ಪ್ರವಾಹಪೀಡಿತ ಪ್ರದೇಶಗಳಿಗೆ ಶಾಸಕ ಹರೀಶ್‌ ಪೂಂಜ, ವಿಧಾನ ಪರಿಷತ್‌ ಸದಸ್ಯ ಹರೀಶ್‌ಕುಮಾರ್‌, ದಕಜಿಪಂ ಸಿಇಒ ಡಾ| ಸೆಲ್ವಮಣಿ, ಪುತ್ತೂರು ಎಸಿ ಎಚ್.ಕೆ. ಕೃಷ್ಣಮೂರ್ತಿ, ಬೆಳ್ತಂಗಡಿ ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ಮೊದಲಾದ ಅಧಿಕಾರಿಗಳು ಭೇಟಿ ನೀಡಿ ಪರಿಹಾರಕ್ಕೆ ಕ್ರಮಕೈಗೊಂಡರು.
ನಿಖರ ಸಂಖ್ಯೆ ಲಭ್ಯವಿಲ್ಲ

ಪ್ರವಾಹದ ನೀರಿನಿಂದಾಗಿ 15ಕ್ಕೂ ಅಧಿಕ ಗ್ರಾಮಗಳ ಅನೇಕ ಮನೆಗಳು ಜಲಾವೃತಗೊಂಡಿದ್ದು, ಮನೆಗಳ ನಿಖರವಾದ ಸಂಖ್ಯೆ ಸಿಕ್ಕಿಲ್ಲ. ಸಂತ್ರಸ್ತರಿಗೆ ಸೂಕ್ತ ಪರಿಹಾರದ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪರಿಹಾರದ ಕ್ರಮ ಕೈಗೊಂಡಿದ್ದಾರೆ. ಸಾಕಷ್ಟು ಕೃಷಿ ಪ್ರದೇಶವೂ ಜಲಾವೃತವಾಗಿದೆ. – ಗಣಪತಿ ಶಾಸ್ತ್ರಿ ತಹಶೀಲ್ದಾರ್‌, ಬೆಳ್ತಂಗಡಿ
Advertisement

Udayavani is now on Telegram. Click here to join our channel and stay updated with the latest news.

Next