ಮೈಸೂರು: ಕೇಂದ್ರ ಸರ್ಕಾರದ ವತಿಯಿಂದ ಕೈಗೊಂಡಿರುವ ನಗರದ ಅಶೋಕಪುರಂ ರೈಲ್ವೆ ಕಾರ್ಯಾಗಾರ(ರೈಲ್ವೆ ವರ್ಕ್‌ಶಾಪ್)ದ ಆಧುನೀಕರಣ ಹಾಗೂ ಮೇಲ್ದರ್ಜೆಗೇರಿಸುವ ಕಾಮಗಾರಿ 2019ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಸಂಸದ ಪ್ರತಾಪಸಿಂಹ ಹೇಳಿದರು.
ನಗರದ ಅಶೋಕಪುರಂನಲ್ಲಿರುವ ರೈಲ್ವೆ ಕಾರ್ಯಾಗಾರಕ್ಕೆ ಮಂಗಳವಾರ ಭೇಟಿ ನೀಡಿದ ಅವರು, ಕೇಂದ್ರ ಸರ್ಕಾರದ 35.44 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿ ಪ್ರಗತಿಯ ಪರಿಶೀಲನೆ ನಡೆಸಿದರು. ಈ ವೇಳೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು.
ಕಳೆದ ಮೂರು ತಿಂಗಳ ಹಿಂದೆ ಕಾಮಗಾರಿ ಆರಂಭವಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಕಾಮಗಾರಿಗೆ ಚಾಲನೆ ಕಾರ್ಯಕ್ರಮ ನಡೆಯಲಿಲ್ಲ. ಆದರೆ ಕೇಂದ್ರ ರೈಲ್ವೆ ಕಾರ್ಯಾಗಾರದಲ್ಲಿ ನಡೆಯುತ್ತಿರುವ ಆಧುನೀಕರಣ ಕಾಮಗಾರಿ ಮುಂಬರುವ ಜೂನ್‌ಗೆ ಪೂರ್ಣಗೊಳ್ಳಲಿದೆ ಎಂದರು.
ರೈಲ್ವೆ ಕೋಚ್‌ಗಳನ್ನು ದುರಸ್ತಿಗೊಳಿಸಿ, ಆಧುನೀಕರಣಗೊಳಿಸುವ ರೈಲ್ವೆ ಕಾರ್ಯಾಗಾರದ ಸಾಮರ್ಥ್ಯ ಹೆಚ್ಚಿಸಲು, ಮೂಲ ಸೌಕರ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರ 35.44 ಕೋಟಿ ರೂ.ಗಳನ್ನು ನೀಡಿದೆ. ಸದ್ಯ ರೈಲ್ವೆ ಕಾರ್ಯಾಗಾರದಲ್ಲಿ ಪ್ರತಿ ತಿಂಗಳಿಗೆ 70 ಕೋಚ್‌ಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಮೇಲ್ದರ್ಜೆಗೇರಿದ ನಂತರ ಇದರ ಸಾಮರ್ಥ್ಯ 80ಕ್ಕೆ ಏರಲಿದೆ.
1924ರಲ್ಲಿ ಸ್ಥಾಪಿಸಲಾಗಿರುವ ರೈಲ್ವೆ ವರ್ಕ್‌ಶಾಪ್ ಅನ್ನು 1932ರಲ್ಲಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಪರಿಶೀಲನೆ ಸಂದರ್ಭದಲ್ಲಿ ಕೇಂದ್ರ ರೈಲ್ವೆ ಕಾರ್ಯಾಗಾರದ ವ್ಯವಸ್ಥಾಪಕ ಅಜಯ್‌ಕುಮಾರ್, ಉಪ ವ್ಯವಸ್ಥಾಪಕ ಎಂ. ರವೀಂದ್ರನ್, ಉಪ ಮುಖ್ಯ ಇಂಜಿನಿಯರ್ ಬಿ.ರಮೇಶ್ ಚಂದ್ರ ಇನ್ನಿತರರು ಹಾಜರಿದ್ದರು.