Advertisement

Railway-State Partnership: ರೈಲ್ವೆ ಯೋಜನೆ ಶೀಘ್ರ ಮುಕ್ತಾಯಗೊಳಿಸಿ: ಎಂ.ಬಿ. ಪಾಟೀಲ್‌

01:01 AM Aug 28, 2024 | Team Udayavani |

ಬೆಂಗಳೂರು: ಉತ್ತರ ಕರ್ನಾಟಕದಿಂದ ರಾಜ್ಯ ರಾಜಧಾನಿ ಬೆಂಗಳೂರಿನ ನಡುವೆ ಸಂಚರಿಸುವ ರೈಲುಗಳ ಪ್ರಯಾಣ ಅವಧಿಯನ್ನು ಇಳಿಸಲು ಆದ್ಯತೆ ನೀಡಬೇಕು ಎಂದು ಭಾರಿ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್‌ ಸೂಚಿಸಿದ್ದಾರೆ.

Advertisement

ಮಂಗಳವಾರ ನೈರುತ್ಯ ರೈಲ್ವೆ ಅಧಿಕಾರಿಗಳ ಜತೆ ರೈಲ್ವೇ ಜತೆ ರಾಜ್ಯ ಸರ್ಕಾರ ವೆಚ್ಚ ಹಂಚಿಕೆ ಮಾಡಿಕೊಂಡು ಜಾರಿಗೊಳಿಸುತ್ತಿರುವ ರೈಲ್ವೇ ಯೋಜನೆಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ವೇಳೆ ಅವರು ಈ ಸೂಚನೆ ನೀಡಿದರು.
ಸಭೆಯಲ್ಲಿ ರಾಜ್ಯದ ಗದಗ- ವಾಡಿ, ಧಾರವಾಡ-ಬೆಳಗಾವಿ, ತುಮಕೂರು- ದಾವಣಗೆರೆ, ತುಮಕೂರು-ರಾಯದುರ್ಗ ಸೇರಿದಂತೆ ಹಲವಾರು ರೈಲ್ವೆ ಯೋಜನೆಗಳಿಗೆ ಎದುರಾಗಿರುವ ಭೂಸ್ವಾಧೀನ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿದ್ದು ಶೀಘ್ರವೇ ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ ಅವರೊಂದಿಗೆ ಸಭೆ ನಡೆಸುವುದಾಗಿ ಪ್ರಕಟಿಸಿದರು.

ಈ ಸಭೆಯ ಮಧ್ಯೆಯೇ ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, ದಾವಣಗೆರೆ, ಕಲುºರ್ಗಿ ಮತ್ತು ಹಾವೇರಿ ಜಿಲ್ಲಾಧಿಕಾರಿಗಳು, ಕೃಷ್ಣಾ ಭಾಗ್ಯ ಜಲನಿಗಮದ ಉನ್ನತಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ತಂತಮ್ಮ ಜಿಲ್ಲೆಯಲ್ಲಿ ಹಾದು ಹೋಗುವ ರೈಲ್ವೆ ಯೋಜನೆಗಳಿಗೆ ತೊಡಕಾಗಿರುವ ಸಮಸ್ಯೆಗಳನ್ನು ಕ್ಷಿಪ್ರವಾಗಿ ಬಗೆಹರಿಸಿ, ಸಹಕರಿಸುವಂತೆ ಸಚಿವರು ಮನವಿ ಮಾಡಿದರು.
ಬೆಂಗಳೂರು- ವಿಜಯಪುರ ನಡುವೆ ಹತ್ತು ಗಂಟೆಯಲ್ಲಿ ರೈಲ್ವೇ ಪೂರ್ಣಗೊಳ್ಳಲು ಬಾಗಲಕೋಟೆ – ವಂಡಾಲ್‌ ನಡುವಿನ ಜೋಡಿ ಮಾರ್ಗ ಕಾಮಗಾರಿ, ಆಲಮಟ್ಟಿ ಪ್ರದೇಶದಲ್ಲಿನ ಕೆಲವು ಕಿರು ಸೇತುವೆಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು.

ಹುಬ್ಬಳ್ಳಿ ದಕ್ಷಿಣ ನಿಲ್ದಾಣವನ್ನು ಪ್ರಯಾಣಿಕ ಸ್ನೇಹಿಯಾಗಿ ಅಭಿವೃದ್ಧಿಪಡಿಸಬೇಕು, ವಿಜಯಪುರ ಕಡೆ ಹೋಗುವ ರೈಲುಗಳನ್ನು ಅಲ್ಲಿಂದಲೇ ಗದಗದ ಕಡೆ ತಿರುಗಿಸಬೇಕು ರೀತಿ ಗದಗದಲ್ಲಿಯೂ ಬೈಪಾಸ್‌ ಮೂಲಕ ವಿಜಯಪುರದ ಕಡೆಗೆ ಹೋಗುವ ಹಾಗೆ ಆಗಬೇಕು ಎಂದು ಎಂ. ಬಿ ಪಾಟೀಲ್‌ ಸಲಹೆ ನೀಡಿದರು.

ಗದಗ-ವಾಡಿ ಯೋಜನೆ, ತುಮಕೂರು- ದಾವಣಗೆರೆ, ತುಮಕೂರು- ರಾಯದುರ್ಗ, ಚಿಕ್ಕಮಗಳೂರು-ಆದಿಹಳ್ಳಿ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಮತ್ತು ಧಾರವಾಡ-ಬೆಳಗಾವಿ ಯೋಜನೆಗೆ ಸಂಬಂಧಿಸಿದಂತೆ ಇರುವ ಭೂಸ್ವಾಧೀನ, ಟೆಂಡರ್‌ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು ಕಾಲಮಿತಿಯಲ್ಲಿ ಸಮಸ್ಯೆ ಪರಿಹರಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ.

Advertisement

ಸಭೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮಂಜುಳಾ, ಹೆಚ್ಚುವರಿ ಕಾರ್ಯದರ್ಶಿ ಶ್ರೀಧರ ಮೂರ್ತಿ, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ನೈರುತ್ಯ ರೈಲ್ವೆಯ ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿ ಅಜಯ ಶರ್ಮಾ, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಮೂರ್ತಿರಾಜು ಸೇರಿದಂತೆ ನೈರುತ್ಯ ರೈಲ್ವೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next