ಪಡೀಲ್: ಮಂಗಳೂರು ಜಂಕ್ಷನ್ (ಕಂಕನಾಡಿ) ರೈಲ್ವೇ ನಿಲ್ದಾಣಕ್ಕೆ ಕೆಎಸ್‌ಆರ್ ಟಿಸಿಯಿಂದ ಬಸ್ ಗಳ ಸಂಚಾರವಿದೆ. ಆದರೆ ರೈಲ್ವೇ ನಿಲ್ದಾಣದಲ್ಲಿ ಬಸ್ ನಿಲುಗಡೆಗೆ ವ್ಯವಸ್ಥೆ ಇಲ್ಲದ ಕಾರಣ ಈ ರೈಲ್ವೇ ನಿಲ್ದಾಣದಲ್ಲಿ ಬಂದಿಳಿಯುವ ಪ್ರಯಾಣಿಕರಿಗೆ ಪ್ರಯೋಜನವಾಗುತ್ತಿಲ್ಲ.
ಕೆಎಸ್‌ಆರ್‌ಟಿಸಿಯ ಎರಡು ಸಿಟಿ ಬಸ್‌ಗಳು ಮಂಗಳೂರು ರೈಲ್ವೇ ಜಂಕ್ಷನ್ ನ ಪ್ರವೇಶ ದ್ವಾರದ ಎದುರಿನವರೆಗೂ ಬರುತ್ತವೆ. ಆದರೆ ಬಸ್‌ಗಳಿಗೆ ನಿಲುಗಡೆಗೆ ವ್ಯವಸ್ಥೆ ಇಲ್ಲದ ಕಾರಣ ಕೆಲವೇ ಕೆಲವು ಸೆಕೆಂಡ್‌ಗಳಲ್ಲಿಯೇ ಅವುಗಳು ಅಲ್ಲಿಂದ ಹೊರಡುತ್ತವೆ.
ಮಾತ್ರವಲ್ಲದೆ, ನಿಲ್ದಾಣದಲ್ಲಿ ಬಂದಿಳಿಯುವ ಪ್ರಯಾಣಿಕರು ಪ್ರವೇಶ ದ್ವಾರಕ್ಕೆ ಬರುವ ಸಮಯಕ್ಕೆ ಸರಿಯಾಗಿ ಈ ಬಸ್‌ಗಳು ಸಿಗದಿರುವ ಕಾರಣ ಇದರಿಂದ ಪ್ರಯಾಣಿಕರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆಕ್ಷೇಪ. ಕೊಂಕಣ ರೈಲ್ವೇ ಆರಂಭವಾದ ದಿನಗಳಿಂದಲೂ ಮಂಗಳೂರು ರೈಲ್ವೇ ಜಂಕ್ಷನ್ ಬಳಿ ಬಸ್ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಬಂಧಪಟ್ಟ ಪ್ರಾಧಿಕಾರ, ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ
ಪ್ರಯೋಜನವಾಗಿಲ್ಲ ಎಂದು ಸಾಮಾಜಿಕ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ರೈಲುಗಳಲ್ಲಿ ದೂರದಿಂದ ಪ್ರಯಾಣ ಮಾಡಿ ಲಗೇಜ್‌ನೊಂದಿಗೆ ಜಂಕ್ಷನ್‌ನಿಂದ ಇಳಿದು ತಮ್ಮ ಗಮ್ಯ ಸ್ಥಾನಗಳಿಗೆ ಹೋಗಬೇಕಾದ ವರು ಪ್ರವೇಶ ದ್ವಾರದ ಬಳಿ ಬಂದಾಗ ಬಹುತೇಕವಾಗಿ ಬಸ್‌ಗಳೇ ಲಭ್ಯವಾಗುವುದಿಲ್ಲ. ಬಸ್ ಎದುರಿನಿಂದ ಬಂದರೂ ನಿಲುಗಡೆ ಸಮರ್ಪಕವಾಗಿ ಇಲ್ಲದ ಕಾರಣ ಲಗೇಜ್ ಹೊತ್ತು ಬಸ್‌ನತ್ತ ಸಾಗಿ ಬಂದು ಬಸ್ ಹತ್ತುವುದು ವಯೋವೃದ್ಧರಿಗಂತೂ ಅಸಾಧ್ಯದ ಮಾತು. ಹೀಗಾಗಿ ತಮ್ಮ 15 ರೂ. ಗಳ ಪ್ರಯಾಣಕ್ಕೆ ಇತರ ಸಂಚಾರ ವ್ಯವಸ್ಥೆಗಾಗಿ 50 ರಿಂದ 100 ರೂ. ವ್ಯಯಿಸಬೇಕಾಗುತ್ತದೆ.
-ಅಮೃತ್ ಪ್ರಭು ಗಂಜಿಮಠ,
ಸಾಮಾಜಿಕ ಹೋರಾಟಗಾರರು
Related Articles
ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದ ಜಾಗದಲ್ಲಿ ಬಸ್ ನಿಲುಗಡೆಗೆ ಜಾಗವನ್ನು ಕೋರಿ ಈಗಾಗಲೇ ಪಾಲಾ^ಟ್ ವಿಭಾಗದ ಮುಖ್ಯಸ್ಥರಿಗೆ ಪತ್ರ ಬರೆಯಲಾಗಿದೆ. ವ್ಯವಸ್ಥೆ ಕಲ್ಪಿಸುವ ಭರವಸೆ ಇದೆ. ಈಗಾಗಲೇ ಕೆಎಸ್‌ಆರ್‌ಟಿಸಿಯಿಂದ ಎರಡು ಸಿಟಿ ಬಸ್‌ಗಳು ಇಲ್ಲಿಗೆ ಸಂಚರಿಸುತ್ತವೆ. ಇನ್ನೂ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಲು ನಾವು ಸಿದ್ದರಿದ್ದೇವೆ. ಆದರೆ ನಿಲುಗಡೆ ಸೂಕ್ತ ವ್ಯವಸ್ಥೆ ಅಗತ್ಯವಿದೆ.
–ರಾಜೇಶ್ ಶೆಟ್ಟಿ , ಕೆಎಸ್‌ಆರ್‌ಟಿಸಿ ವಿಭಾಗೀಯ
ನಿಯಂತ್ರಣಾಧಿಕಾರಿ, ಮಂಗಳೂರು