ಮಂಗಳೂರು: ಮಂಗಳೂರು ಸೇರಿದಂತೆ ಕರಾವಳಿಗೆ ಅತ್ಯುಪಯುಕ್ತವೆನಿಸುವ ನಾಲ್ಕು ಹೊಸ ರೈಲುಗಳ ಸಂಚಾರ ಮತ್ತು ಸ್ಥಗಿತಗೊಂಡಿರುವ ಎರಡು ರೈಲುಗಳ ಪುನರಾರಂಭಕ್ಕೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ.
ಈಗಾಗಲೇ ರೈಲ್ವೇ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಜ. 20ರಂದು ದಕ್ಷಿಣ ರೈಲ್ವೇಯ ಮಹಾ ಪ್ರಬಂಧಕರು ಆಯೋಜಿಸಿದ್ದ ಪಾಲಕ್ಕಾಡ್ ವಿಭಾಗ ವ್ಯಾಪ್ತಿಯ ಸಂಸದರ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಈ ವಿಷಯವನ್ನು ಪ್ರಸ್ತಾವಿಸಿ ಐಆರ್ ಟಿಟಿಸಿ-2022ರ ಸಭೆಗೆ ಸೇರ್ಪಡೆ ಮಾಡುವಂತೆಯೂ ಕೋರಿದ್ದರು. ಆದರೂ ಜನರ ಬೇಡಿಕೆ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟದ ಹಾದಿಯೊಂದೇ ಉಳಿದಿದೆ.
ಮಂಗಳೂರು ಸೆಂಟ್ರಲ್- ತಿರುಪತಿ ವಯಾ ಹಾಸನ- ಬೆಂಗಳೂರು, ಮಂಗಳೂರು ಸೆಂಟ್ರಲ್- ಅಹಮದಾಬಾದ್ ವಯಾ ಮಡಗಾಂವ್, ಮಂಗ ಳೂರು-ರಾಮೇಶ್ವರ, ವಯಾ ಮಧುರೈ ಹಾಗೂ ಮಂಗಳೂರು- ಅಯೋಧ್ಯೆಗೆ ಹೊಸ ರೈಲುಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಲಾಗಿತ್ತು. ಈಗಾಗಲೇ ಸ್ಥಗಿತಗೊಂಡಿರುವ ಮಂಗಳೂರು- ಜಮ್ಮು ತಾವಿ ನವಯುಗ (ವೈಷ್ಣೊಧೀದೇವಿ) ಸಾಪ್ತಾಹಿಕ ಎಕ್ಸ್‌ಪ್ರೆಸ್ ಮತ್ತು ಮಂಗಳೂರು- ಮೀರಜ್ ಮಹಾಲಕ್ಷ್ಮೀ ಡೈಲಿ ರೈಲುಗಳನ್ನು ಮರು ಆರಂಭಿಸಬೇಕು ಎಂದು ಕರಾವಳಿ ಜನತೆ, ರೈಲ್ವೇ ಬಳಕೆದಾರರ ಸಂಘಟನೆಗಳು ಇಲಾಖೆಯನ್ನು, ಸಚಿವರನ್ನು ಹಲವು ಬಾರಿ ಆಗ್ರಹಿಸಿವೆ.
ಕರಾವಳಿಗರಿಗೆ ಪ್ರಯೋಜನ
Related Articles
ಮಂಗಳೂರಿನಿಂದ ಹೈದರಾಬಾದ್‌ಗೆ ತೆರಳುವ ಕಾಚಿಗುಡ ಎಕ್ಸ್‌ಪ್ರೆಸ್‌ಗೆ ತಿರುಪತಿಯಲ್ಲಿ ನಿಲುಗಡೆ ಇದ್ದು, ಏಕಮಾತ್ರ ರೈಲು ಆಗಿದೆ. ಕರಾವಳಿಯಿಂದ ತಿರುಪತಿಗೆ ಪ್ರತೀದಿನ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ತೆರಳುತ್ತಾರೆ. ನೇರ ರೈಲು ಇದ್ದರೆ ಅನುಕೂಲ. ಜತೆಗೆ ಆಂಧ್ರ ಮತ್ತಿತರ ಪ್ರದೇಶಗಳಿಂದ ಕುಕ್ಕೆ ಸುಬ್ರಹ್ಮಣ್ಯ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುವವರಿಗೂ ಪ್ರಯೋಜನವಾಗುತ್ತದೆ. ಅಲ್ಲದೆ ಬೆಂಗಳೂರಿಗೆ ಕರಾವಳಿಯಿಂದ ಒಂದು ರೈಲು ಹೆಚ್ಚು ದೊರಕಿದಂತಾಗುತ್ತದೆ. ರಾಮೇಶ್ವರ ಮತ್ತು ಮಧುರೈ, ಪಳನಿ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕ್ಷೇತ್ರಗಳು. ಕರಾವಳಿಯಿಂದ ಈ ಕ್ಷೇತ್ರಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ತೆರಳುತ್ತಾರೆ. ಪ್ರಸ್ತುತ ಕರಾವಳಿಯಿಂದ ಅಲ್ಲಿಗೆ ನೇರ ರೈಲುಗಳಿಲ್ಲ.
ಇದನ್ನೂ ಓದಿ:ಈ ಕೇಸಿಗೆ 150 ವರ್ಷ ವಯಸ್ಸು! : ಬ್ರಿಟಿಷ್‌ರ ಕಾಲದ ಪ್ರಕರಣಕ್ಕೆ ಇನ್ನೂ ಸಿಕ್ಕಿಲ್ಲ ಪರಿಹಾರ
ಕರಾವಳಿಯಲ್ಲಿ ಗುಜರಾತ್ ಮೂಲದ ಉದ್ಯಮಿಗಳು, ಕಾರ್ಮಿಕರು ಬಹುಸಂಖ್ಯೆಯಲ್ಲಿದ್ದಾರೆ. ಪ್ರಸ್ತುತ ಗುಜರಾತ್‌ಗೆ ಇರುವ ರೈಲುಗಳು ಕೇರಳ ಭಾಗದಿಂದ ಬರುವಂಥವು.ಮರು ಆರಂಭಕ್ಕೆ ಆಗ್ರಹ ಕೊರೊನಾ ಪೂರ್ವದಲ್ಲಿ ಸಂಚರಿಸುತ್ತಿದ್ದ ಜಮ್ಮು ತಾವಿ ನವಯುಗ ಎಕ್ಸ್‌ಪ್ರೆಸ್ ಸಾಪ್ತಾಹಿಕ ರೈಲು (ವೈಷ್ಣೋದೇವಿ ಕಟ್ರಾ) ಸ್ಥಗಿತಗೊಂಡು ಮೂರು ವರ್ಷಗಳಾಗಿದ್ದು, ಇದನ್ನು ಪುನರಾರಂಭಿಸಬೇಕು ಬೇಡಿಕೆ ವ್ಯಕ್ತವಾಗಿದೆ. 1990ರ ದಶಕದಲ್ಲಿ ಮಂಗಳೂರಿನಿಂದ ಪ್ರತೀ ರಾತ್ರಿ ಅರಸೀಕೆರೆ ಮಾರ್ಗವಾಗಿ ಮೀರಜ್‌ಗೆ ಸಂಚರಿಸುತ್ತಿದ್ದ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್ಸನ್ನೂ ಪುನರಾರಂಭಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆ. ಮಂಗಳೂರು- ಹಾಸನ ನಡುವೆ ಮೀಟರ್‌ಗೆàಜ್ ಇದ್ದಾಗ ಮಂಗಳೂರಿಗೆ ಸಕಲೇಶಪುರ, ಅರಸೀಕೆರೆ, ಹುಬ್ಬಳ್ಳಿ ಧಾರವಾಡ, ಬೆಳಗಾವಿ ಮೂಲಕ ಈ ರೈಲು ಸಂಚರಿಸುತ್ತಿತ್ತು. ಇದು ಆರಂಭಗೊಂಡರೆ ಮಂಗಳೂರು-ಹುಬ್ಬಳ್ಳಿ, ಧಾರವಾಡ, ಬೆಳಗಾವಿ ನಡುವೆ ರೈಲ್ವೇ ಸಂಪರ್ಕ ಜಾಲ ಏರ್ಪಡಲಿದೆ.
ದಕ್ಷಿಣ ರೈಲ್ವೇಯ ಮಹಾಪ್ರಬಂಧಕರು ಇತ್ತೀಚೆಗೆ ಆಯೋಜಿಸಿದ್ದ ಸಭೆಯಲ್ಲಿ ಹೊಸ ಮತ್ತು ಸ್ಥಗಿತಗೊಂಡಿರುವ ರೈಲುಗಳನ್ನು ಆರಂಭಿಸಲು ಪ್ರಸ್ತಾವಿಸಿದ್ದೇನೆ. ಇದರ ಕಾರ್ಯಸಾಧ್ಯತೆ ಪರಿಶೀಲಿಸಿ ಮುಂದಿನ ಐಆರ್‌ಟಿಟಿಸಿ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಮಂಡಿಸುವುದಾಗಿ ಮಹಾಪ್ರಬಂಧಕರು ತಿಳಿಸಿದ್ದಾರೆ. ಪ್ರಸ್ತಾವನೆ ಕಾರ್ಯರೂಪಕ್ಕೆ ಬರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. – ನಳಿನ್ ಕುಮಾರ್ ಕಟೀಲು, ಸಂಸದರು, ದ.ಕ
–ಕೇಶವ ಕುಂದರ್