Advertisement

ಬಜೆಟ್ 2020 ಕಿರು ವಿಮರ್ಶೆ: ರೇಲ್ವೇ ವೆಚ್ಚ ಕಡಿತ, ಮೂಲ ಸೌಕರ್ಯಕ್ಕೆ ಒತ್ತು

10:00 AM Feb 02, 2020 | keerthan |

ಹೊಸದಿಲ್ಲಿ; ಈ ಬಾರಿಯ ಕೇಂದ್ರ ಮುಂಗಡ ಪತ್ರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ಸಂಸತ್ತಿನಲ್ಲಿ ಮಂಡಿಸಿದ್ದು, ಹಲವು ರೈಲ್ವೇ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಮುಖ್ಯವಾಗಿ ಮೂಲಸೌಕರ್ಯ ಸುಧಾರಣೆ, ಇಂಧನ ಮಿತವ್ಯಯ, ಪ್ರಯಾಣಿಕರ ಅನುಕೂಲ ಇತ್ಯಾದಿಗಳಿಗೆ ಆದ್ಯತೆ ನೀಡಲಾಗಿದೆ. ರೈಲ್ವೇ ಸಹಿತ ಮೂಲಸೌಕರ್ಯಗಳ ಅಭಿವೃದ್ಧಿಗೆ 1.7 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

Advertisement

ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಕಿಸಾನ್‌ ರೈಲುಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಒಟ್ಟು 150 ರೈಲುಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಓಡಿಸಲು ಹಾಗೂ ನಾಲ್ಕು ರೈಲು ನಿಲ್ದಾಣಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಪುನರುಜ್ಜೀವನಗೊಳಿಸುವ ಯೋಜನೆಯನ್ನೂ ಘೋಷಿಸಲಾಗಿದೆ. ರೈಲು ನಿಲ್ದಾಣಗಳ ಆಧುನೀಕರಣಕ್ಕೂ ಯೋಜನೆ ರೂಪಿಸಲಾಗಿದೆ.

ಮುಂಬಯಿ- ಅಹಮದಾಬಾದ್‌ ನಡುವೆ ಹೈಸ್ಪೀಡ್‌ ರೈಲು ಯೋಜನೆಗೆ ವೇಗ ಲಭಿಸಲಿದೆ. ಸುಮಾರು 550 ರೈಲು ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ಒದಗಿಸಲಾಗಿದೆ. ಇವುಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.

ರೈಲ್ವೇ ಇಲಾಖೆಯ ಅಧೀನದಲ್ಲಿ ಹಳಿಗಳ ಪಕ್ಕದಲ್ಲಿರುವ ಜಾಗದಲ್ಲಿ ಸೌರಶಕ್ತಿ ಉತ್ಪಾದನ ಘಟಕಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ದೇಶದಲ್ಲಿ 1.25 ಲಕ್ಷ ಕಿ.ಮೀ. ಉದ್ದದ ರೈಲು ಜಾಲವಿದೆ. ದಿನಕ್ಕೆ 20,849 ಸಂಚಾರಗಳನ್ನು ಕೈಗೊಳ್ಳುತ್ತಿದ್ದು, ಸರಾಸರಿ 2.3 ಕೋಟಿ ಜನ ಪ್ರಯಾಣಿಸುತ್ತಿದ್ದಾರೆ. 30 ಲಕ್ಷ ಟನ್‌ ಸರಕು ಸಾಗಿಸುತ್ತಿದೆ. 10,773 ಲೋಕೋ ಮೋಟಿವ್‌ ರೈಲುಗಳಿದ್ದು, 53,046 ಕೋಚ್‌ ಗಳನ್ನು ಹೊಂದಿದೆ. ಸರಕು ಸಾಗಾಟದ ವ್ಯಾಗನ್‌ಗಳ ಒಟ್ಟು ಸಂಖ್ಯೆ 2.45 ಲಕ್ಷ. ಇದು ಜಗತ್ತಿನಲ್ಲಿಯೇ ಬೃಹತ್ತಾದ ಸಂಚಾರ ವ್ಯವಸ್ಥೆ. ಹಳಿಗಳ ಪಕ್ಕದಲ್ಲಿ ಇಲಾಖೆಗೆ ಸೇರಿದ ಸಾಕಷ್ಟು ಜಾಗವೂ ಇದೆ. ಇದನ್ನು ಬಳಸಿಕೊಂಡು ಸೌರಶಕ್ತಿ ಉತ್ಪಾದಿಸುವ ಗುರಿ ಹೊಂದಲಾಗಿದೆ. ಇಂಧನ ಮಿತವ್ಯಯ ಸಾಧಿಸುವ ಜತೆಗೆ ಸ್ವಾವಲಂಬನೆಗೂ ಇದು ಸಹಕಾರಿಯಾಗಲಿದೆ. ಪರಿಸರಕ್ಕೂ ಪೂರಕ ಯೋಜನೆ.

ಇದರ ಜತೆಗೆ 27,000 ಕಿ.ಮೀ. ರೈಲು ಹಳಿಗಳ ವಿದ್ಯುದೀಕರಣಕ್ಕೂ ಸರಕಾರ ಯೋಜನೆ ರೂಪಿಸಿದೆ. ಭವಿಷ್ಯದಲ್ಲಿ ವಿದ್ಯುತ್‌ ಚಾಲಿತ ರೈಲುಗಳ ಸಂಖ್ಯೆ ಹೆಚ್ಚಳಕ್ಕೆ ಇದು ಪೂರಕ ಯೋಜನೆ. ಈ ಮೂಲಕ ಇಂಧನ ಮಿತವ್ಯಯ ಸಾಧಿಸುವ ಯೋಜನೆಯೂ ನಿರ್ಮಲಾ ಅವರ ಬಜೆಟ್‌ನಲ್ಲಿದೆ.

Advertisement

2030ರ ಸುಮಾರಿಗೆ ಇಂಗಾಲದ ಹೊರಸೂಸುವಿಕೆ ಪ್ರಮಾಣವನ್ನು ಶೂನ್ಯಕ್ಕಿಳಿಸುವ ಗುರಿಯನ್ನು ರೈಲ್ವೇ ಇಲಾಖೆ ಹೊಂದಿದೆ. ನವೀಕರಿಸಬಹುದಾದ ಇಂಧನ ಮೂಲಗಳ ಮೂಲಕ ತನ್ನ ಒಟ್ಟು ಆವಶ್ಯಕತೆಯ ಶೇ. 10ರಷ್ಟು ಇಂಧನ ಉತ್ಪಾದಿಸಲು ಇಲಾಖೆ ಹೆಜ್ಜೆ ಇರಿಸಿದೆ.

ಪ್ರವಾಸಿ ತಾಣಗಳ ಸಂಪರ್ಕಕ್ಕೆ ಇನ್ನಷ್ಟು ತೇಜಸ್‌ ರೈಲುಗಳ ಅನುಷ್ಠಾನ ಮಾಡುವ ಇಂಗಿತವನ್ನು ಸಚಿವರು ವ್ಯಕ್ತಪಡಿಸಿದ್ದಾರೆ. ದಿಲ್ಲಿ- ಮುಂಬಯಿ ನಡುವಿನ ಎಕ್ಸ್‌ಪ್ರೆಸ್‌ ವೇ 2023ರ ಒಳಗೆ ಪೂರ್ಣಗೊಳ್ಳಲಿದೆ ಎಂದು ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ.

ಸುಮಾರು 18,600 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳ್ಳುವ 148 ಕಿ.ಮೀ. ಉದ್ದದ ಬೆಂಗಳೂರಿನ ಸಬ್‌ ಅರ್ಬನ್‌ ರೈಲು ಯೋಜನೆಗೆ ಶೇ. 60ರಷ್ಟು ಅನುದಾನ ನೀಡುವುದಾಗಿ ಘೋಷಿಸಿದ್ದಾರೆ.

ಮಾನವ ರಹಿತ ಲೆವೆಲ್‌ ಕ್ರಾಸಿಂಗ್‌ಗಳನ್ನು ಸರಕಾರ ಇಲ್ಲವಾಗಿಸುತ್ತಿದ್ದು, ಸುರಕ್ಷಿತ ಸಂಚಾರಕ್ಕೆ ಪೂರಕವಾಗಿ ಹಲವು ಉಪಕ್ರಮಗಳನ್ನೂ ಕೈಗೊಳ್ಳುತ್ತಿದೆ.

*ಅನಂತ್ ಹುದೆಂಗಜೆ

Advertisement

Udayavani is now on Telegram. Click here to join our channel and stay updated with the latest news.

Next