Advertisement

ರೈಲ್ವೆ ಕೆಳ ಸೇತುವೆ ನಿರ್ಮಾಣ ಅವೈಜ್ಞಾನಿಕ

02:06 PM Jun 02, 2019 | Team Udayavani |

ಬ್ಯಾಡಗಿ: ರೈಲ್ವೆ ಕ್ರಾಸಿಂಗ್‌ಗಳನ್ನು ಮಾನವ ರಹಿತವಾಗಿ ಮಾಡುತ್ತಿರುವ ಕಾರ್ಯ ಸ್ವಾಗತಾರ್ಹ. ಆದರೆ, ಯೋಜನೆಯಡಿ ನಡೆಯುತ್ತಿರುವ ಬಹುತೇಕ ಕಾಮಗಾರಿಗಳು ಅವೈಜ್ಞಾನಿಕವಾಗಿದ್ದು, ಮಳೆಗಾಲದಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ಎಲ್ಲ ಲೆವೆಲ್ ಕ್ರಾಸಿಂಗ್‌ ಮೇಲ್ಸೆತುವೆ ಮಾಡುವುದು ಹೆಚ್ಚು ಸೂಕ್ತ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸಲಹೆ ನೀಡಿದರು.

Advertisement

ಸಂಸದ ಶಿವಕುಮಾರ ಉದಾಸಿ ನಿರ್ದೇಶನ ಮೇರೆಗೆ ಶನಿವಾರ ರೈಲ್ವೆ ಇಲಾಖೆ ಅಧಿಕಾರಿಗಳು ಬ್ಯಾಡಗಿ ಮತ್ತು ರಾಣಿಬೆನ್ನೂರ ತಾಲೂಕುಗಳಲ್ಲಿರುವ ಲೆವೆಲ್ ಕ್ರಾಸಿಂಗ್‌ಗಳಲ್ಲಿ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದರು.

ರೈಲ್ವೆ ಕ್ರಾಸಿಂಗ್‌ಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಹಳಿಗಳ ಮೇಲಿರುವ ದಾರಿಗಳನ್ನು ಜಿರೋ ಟ್ರಾಫಿಕ್‌ ಮಾಡಲಾಗುತ್ತಿದೆ. ಆದರೆ, ರೈಲ್ವೆ ಇಲಾಖೆ ಬಹುತೇಕ ಕಡೆಗಳಲ್ಲಿ ಕೆಳ ಸೇತುವೆಗಳನ್ನು ನಿರ್ಮಿಸುತ್ತ ಹೊರಟಿದ್ದು, ಮಳೆಗಾಲದಲ್ಲಿ ಅವುಗಳಲ್ಲಿ ಮಳೆ ನೀರು ಸಂಗ್ರಹವಾಗುತ್ತಿದ್ದು ವಾಹನ ಸಂಚಾರ ಸ್ಥಗಿತಗೊಳ್ಳುತ್ತಿದೆ. ಇದಕ್ಕೆ ತಮ್ಮ ಬಳಿ ಶಾಶ್ವತ ಪರಿಹಾರವಿಲ್ಲ ಎಂದು ಆರೋಪಿಸಿದರು.

ಮುಕ್ತ ಸಂಚಾರಕ್ಕೆ ಸೌಲಭ್ಯಗಳನ್ನು ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲವಾಗಬೇಕಾಗಿದ್ದ ಕೆಳಸೇತುವೆಗಳಲ್ಲಿ ನೀರು ತುಂಬಿಕೊಂಡು ವರ್ಷದ ಒಂದೆರಡು ತಿಂಗಳು ಸಂಚಾರ ಸ್ಥಗಿತಗೊಳ್ಳುತ್ತಿದೆ. ಅಷ್ಟೇ ಅಲ್ಲದೆ ಕನಿಷ್ಟ 2 ತಿಂಗಳ ವರೆಗೆ ರೈತರ ಕೃಷಿ ಚಟುವಟಿಕೆಗಳಿಗೆ ಅಡೆತಡೆ ನಿಲ್ಲುತ್ತಿವೆ. ಹಂಗಾಮಿನಲ್ಲಿ ಹೊಲಗಳಿಗೆ ಹೋಗುವುದೇ ಸಮಸ್ಯೆಯಾದಾಗ ಅವರಾದರೂ ಹೇಗೆ ಸುಮ್ಮನಿರಲು ಸಾಧ್ಯ? ಎಂದು ಪ್ರಶ್ನಿಸಿದರು.

ಎಲ್ಲ ರೈಲ್ವೆ ಹಳಿಗಳ ಪಕ್ಕದಲ್ಲಿ ಸರ್ವೀಸ್‌ ರಸ್ತೆಗಳನ್ನು ನಿರ್ಮಿಸುವುದರಿಂದ ಕೃಷಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಬ್ಯಾಡಗಿ ಮತ್ತು ಕಾಕೋಳ ಮಧ್ಯೆ ನಿರ್ಮಿಸುತ್ತಿರುವ ಕೆಳ ಸೇತುವೆ ಯಾವ ಪುರುಷಾರ್ಥಕ್ಕೆ ನಿರ್ಮಿಸಲಾಗುತ್ತಿದೆ? 60 ಟನ್‌ ಸಾಮರ್ಥ್ಯದ ಲಾರಿಗಳು ಕೆಳ ಸೇತುವೆಯಿಂದ ಮೇಲೆ ಬರಲು ಸಾಧ್ಯವೇ ಇಲ್ಲ. ಅಷ್ಟೊಂದು ಕಡಿದಾಗಿ ನಿರ್ಮಿಸಿದ್ದು, ಕೃಷಿಕರ ಎತ್ತಿನಗಾಡಿಗಳು ಅಲ್ಲಿಂದ ಹೊರಬರುವುದು ಕಷ್ಟಸಾಧ್ಯ. ಕೂಡಲೇ ಕಾಮಗಾರಿ ಬದಲಾವಣೆಗೊಳಿಸಿ ಮೇಲ್ಸೇತುವೆಯಾಗಿ ಪರಿವರ್ತನೆ ಮಾಡಬೇಕು ಎಂದು ತಾಕೀತು ಮಾಡಿದರು.

Advertisement

ಅಧಿಕಾರಿಗಳು ತೆಗೆದುಕೊಂಡ ಅವೈಜ್ಞಾನಿಕ ನಿರ್ಣಯಗಳಿಂದ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ವ್ಯರ್ಥವಾಗುತ್ತಿದೆ ಎಂದು ಆರೋಪಿಸಿದರು.

ಮುಖಂಡ ಶಿವಬಸಪ್ಪ ಕುಳೇನೂರ ಮಾತನಾಡಿ, ಮೋಟೆಬೆನ್ನೂರ ಮತ್ತು ಕೋಡಿಹಳ್ಳಿ ಗ್ರಾಮದ ನಡುವೆ ಇರುವ ಲೆವಲ್ ಕ್ರಾಸಿಂಗ್‌ ಹಾಗೆಯೇ ಇರಲಿ. ಯಾವುದೇ ಕೆಳಸೇತುವೆ ಅಥವಾ ಮೇಲ್ಸೇತುವೆಗಳ ಅವಶ್ಯಕತೆಯಿಲ್ಲ. ಸದ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ. ತಮ್ಮ ಕೆಳ ಸೇತುವೆಗಳಿಂದ ಇನ್ನಷ್ಟು ಸಮಸ್ಯೆಯಾಗುವುದು ಬೇಡ ಎಂದರು.

ಸಮಸ್ಯೆಗಳನ್ನು ಕೂಲಂಕುಷವಾಗಿ ಆಲಿಸಿದ ನೈಋತ್ಯ ರೈಲ್ವೆ ವಿಭಾಗದ ಎಂಜಿನಿಯರ್‌ ಹರಿಪ್ರಸಾದ್‌, ಇವೆಲ್ಲವುಗಳನ್ನು ಅನುಷ್ಠಾನಗೊಳಿಸಲು ತಮ್ಮಿಂದ ಪತ್ರವೊಂದನ್ನು ಹಿರಿಯ ಅಧಿಕಾರಿಗಳಿಗೆ ಕೊಡಿ, ಬಳಿಕ ಸಂಸದರ ಜತೆಗೆ ಸಭೆ ನಡೆಸಿ ಸಮಸ್ಯಾತ್ಮಕ ಕಾಮಗಾರಿಗಳ ಬದಲಾವಣೆಗೆ ಕ್ರಮ ಕೈಗೊಳ್ಳುವುದಾಗಿ ಶಾಸಕರಿಗೆ ತಿಳಿಸಿದರು.

ಮುಖಂಡರಾದ ಶಂಕ್ರಣ್ಣ ಮಾತನವರ, ಪಿಎಲ್ಡಿ ಬ್ಯಾಂಕ್‌ ನಿರ್ದೇಶಕ ಸುರೇಶ್‌ ಯತ್ನಳ್ಳಿ, ಉದ್ಯಮಿ ಆರ್‌.ನಾಗರಾಜ ಸೇರಿದಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ತಾಂತ್ರಿಕ ಸಮಿತಿ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next