Advertisement

ರೈಲ್ವೇ ಆಡಳಿತ ಸುಧಾರಣೆಗೆ ಕೇಂದ್ರದ ಮಹತ್ತರ ಹೆಜ್ಜೆ

11:40 PM Sep 18, 2021 | Team Udayavani |

ಹೊಸದಿಲ್ಲಿ: ಮಹತ್ವದ ಬೆಳವಣಿಗೆ­ಯೊಂದರಲ್ಲಿ, ರೈಲ್ವೇ ವಿಕಾಸ್‌ ನಿಗಮ್‌ ಲಿಮಿಟೆಡ್‌ ಸಂಸ್ಥೆಯನ್ನು ಭಾರತೀಯ ರೈಲ್ವೇ ನಿರ್ಮಾಣ ಲಿಮಿಟೆಡ್‌ (ಐಆರ್‌ಸಿಒಎನ್‌) ಸಂಸ್ಥೆಯಲ್ಲಿ ಹಾಗೂ ರೈಲ್‌ ಟೆಲ್‌ ಸಂಸ್ಥೆಯನ್ನು ಇಂಡಿಯನ್‌ ರೈಲ್ವೇ ಕೆಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೊರೇಷನ್‌ನಲ್ಲಿ (ಐಆರ್‌ಸಿಟಿಸಿ) ವಿಲೀನ­ಗೊಳಿಸಲು ಕೇಂದ್ರ ಸರಕಾರ‌ ನಿರ್ಧರಿಸಿದೆ.

Advertisement

ಜತೆಗೆ ಕೇಂದ್ರ ಸರಕಾರಿ ಸ್ವಾಮ್ಯದ ಬ್ರಾತ್‌ವೈಟ್‌ ಆ್ಯಂಡ್‌ ಕಂಪೆನಿ ಲಿ. ಸಂಸ್ಥೆಯನ್ನು ರೈಲ್‌ ಇಂಡಿಯಾ ಆ್ಯಂಡ್‌ ಎಕನಾಮಿಕ್‌ ಸರ್ವೀಸ್‌ (ರೈಟ್ಸ್‌) ಸಂಸ್ಥೆಯ ತೆಕ್ಕೆಗೆ ತರಲು ನಿರ್ಧರಿಸಲಾಗಿದೆ. ಈ ಎಲ್ಲ ನಿರ್ಧಾರಗಳನ್ನು ಶೀಘ್ರವೇ ಅನುಷ್ಠಾನಕ್ಕೆ ತರುವಂತೆ ರೈಲ್ವೇ ಇಲಾಖೆಗೆ ಕೇಂದ್ರ ಸರಕಾರ‌ದ ಪ್ರಧಾನ ಕಾರ್ಯದರ್ಶಿ ಕಚೇರಿಯಿಂದ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ರೈಲ್ವೇ ಇಲಾಖೆಯ ಆಡಳಿತ ಸರಳಗೊಳಿ­ಸುವ ಉದ್ದೇಶದಿಂದ ಕೇಂದ್ರ ಹಣಕಾಸು ಇಲಾಖೆಯ ಮುಖ್ಯ ಆರ್ಥಿಕ ಸಲಹೆಗಾರ ಸಂಜೀವ್‌ ಸನ್ಯಾಲ್‌ ಅವರು ಕೇಂದ್ರ ಸರಕಾರ‌ಕ್ಕೆ ಮಾಡಿದ್ದ ಶಿಫಾರಸುಗಳನ್ವಯ ಸರಕಾರ‌ ಈ ನಿರ್ಧಾರಕ್ಕೆ ಬಂದಿದೆ.

ಆಡಳಿತ ಸುಧಾರಣೆಗೆ ಕೇವಲ ಮೇಲ್ಕಂಡ ಸಾರ್ವಜನಿಕ ಸಂಸ್ಥೆಗಳ ವಿಲೀನ­ವಷ್ಟೇ ಅಲ್ಲ, ಇನ್ನೂ ಹಲವಾರು ಸುಧಾ­ರಣಾತ್ಮಕ ಕ್ರಮಗಳನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ರೈಲ್ವೇ ಇಲಾಖೆಯ ಸಿಬಂದಿಯ ಮಕ್ಕಳಿಗಾಗಿ ರೈಲ್ವೇ ಇಲಾಖೆ ನಡೆಸುತ್ತಿರುವ ದೇಶದ ಒಟ್ಟು 94 ಶಾಲೆಗಳನ್ನು ಕೇಂದ್ರೀಯ ವಿದ್ಯಾಲಯಗಳ ವ್ಯಾಪ್ತಿಗೆ ತರುವುದು, 125 ರೈಲ್ವೇ ಆಸ್ಪತ್ರೆ­ಗಳನ್ನು ಮೇಲ್ದರ್ಜೆಗೇರಿಸಿ ಅವುಗಳ ಸೇವೆಯನ್ನು ಕೇವಲ ರೈಲ್ವೇ ಇಲಾಖೆ ಸಿಬಂದಿಗೆ ಮಾತ್ರವಲ್ಲದೆ ಜನಸಾಮಾನ್ಯ­ರಿಗೂ ಸಿಗುವಂತೆ ಮಾಡಲು ತೀರ್ಮಾನಿಸ­ಲಾಗಿದೆ. ಅಗತ್ಯವಿರುವ ಕಡೆಗೆ, ಈ ಶಾಲೆ­ಗಳನ್ನು ಹಾಗೂ ಆಸ್ಪತ್ರೆಗಳನ್ನು ಸಾರ್ವ­ಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next