ಕೋಟ: ಹುಣ್ಸೆಮಕ್ಕಿ ಸಮೀಪದ ಮೊಳಹಳ್ಳಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ರವಿವಾರ ತಡರಾತ್ರಿ ಕಾರ್ಕಳ ಎ.ಎಸ್.ಪಿ. ಕೃಷ್ಣಕಾಂತ್ ನೇತೃತ್ವದ ತಂಡ ದಾಳಿ ನಡೆಸಿದೆ. ಈ ಸಂಬಂಧ 20 ಮಂದಿಯನ್ನು ಬಂಧಿಸಲಾಗಿದೆ.
ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಕಾರ್ಕಳದ ಎಎಸ್‌ಪಿ ಕೃಷ್ಣಕಾಂತ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಯಿತು.
ಮೊಳಹಳ್ಳಿ ಕೈಲ್ಕೆರೆ ಅಕ್ರಮ ಮರಳುಗಾರಿಕೆ ಧಕ್ಕೆಗೆ ದಾಳಿ ನಡೆಸಿ 10 ದೋಣಿ, 1 ಲಾರಿ, 2 ಕಾರು ಸ್ವಾದೀನಪಡಿಸಿಕೊಳ್ಳಲಾಗಿದೆ. ಮರಳು ತೆಗೆಯುವ ಕಾರ್ಮಿಕರು ಸೇರಿದಂತೆ 20ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಅನಿಲ್ ಕುಮಾರ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಭರತ್ ಶೆಟ್ಟಿ, ಸುರೇಶ್ ಕುಮಾರ್, ಜಯಪ್ರಕಾಶ್, ಅನೂಪ್ ಶೆಟ್ಟಿ, ರಾಜೇಶ್ ಶೆಟ್ಟಿ, ಉಮೇಶ್ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದರು ಎನ್ನಲಾಗಿದೆ. ಇವರ ಜತೆಗೆ 12 ಮಂದಿ ಮರಳು ತೆಗೆಯುವ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲುಗೊಂಡಿದೆ.
ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಮಹೇಶ್, ಕೋಟ ಠಾಣಾಧಿಕಾರಿ ನರಸಿಂಹ ಶೆಟ್ಟಿ ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದಾರೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.