ರಾಯಚೂರು: ಸಸ್ಯ ತಳಿಗಳ ಸಂಶೋಧನೆ ಹೆಚ್ಚಾಗಿ ನಡೆಸುವ ಮೂಲಕ ರೈತರಿಗೆ ಬೆಳೆಗಳಿಂದ ಆಗುತ್ತಿರುವ ನಷ್ಟ ತಪ್ಪಿಸಲು ವಿವಿ ವಿದ್ಯಾರ್ಥಿಗಳು ಹೆಚ್ಚು ಶ್ರಮಿಸಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ| ಎಂ.ಬಿ. ಚೆಟ್ಟಿ ಹೇಳಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾ ಗೃಹದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಸ್ಯರೋಗ ಶಾಸ್ತ್ರದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಬೆಳೆಗಳಿಗೆ ವಿವಿಧ ರೋಗ ಬಂದು ರೈತರಿಗೆ ನಷ್ಟವಾಗುತ್ತಿದೆ. ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಸ್ಯ ತಳಿಗಳ ಬಗ್ಗೆ ಹೆಚ್ಚೆಚ್ಚು ಸಂಶೋಧನೆ ನಡೆಸುವ ಅಗತ್ಯವಿದೆ ಎಂದರು.
ಸಸ್ಯ ಶಾರೀರಿಕ ಕ್ರಿಯೆಯಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸಬೇಕಿದೆ. ಬೆಳೆಗಳಿಗೆ ಹರಡುವ ರೋಗ ತಡೆಗಟ್ಟುವಂತಹ ಪ್ರತಿರೋಧಕ ಶಕ್ತಿಯನ್ನು ಸಂಶೋಧಿಸಬೇಕಿದೆ. ವಿದ್ಯಾರ್ಥಿಗಳು, ಪ್ರಾಧ್ಯಾಪಕ ವೃಂದವು ಸಸ್ಯ ತಳಿಗಳ ಬಗ್ಗೆ ಹೆಚ್ಚಿನ ಸಂಶೋಧನೆಗೆ ಒತ್ತು ನೀಡಿ, ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಗೆ ಅನುಗುಣವಾಗಿ ರೈತರು ಬೆಳೆ ಬೆಳೆಯಬೇಕು. ಆಗ ಮಾತ್ರ ನಷ್ಟದಿಂದ ಪಾರಾಗಲು ಸಾಧ್ಯ ಎಂದರು.
ಬೆಳೆ ಹಾನಿಯಾಗಲು ಹವಾಮಾನ ವೈಪರೀತ್ಯ ಕೂಡ ಕಾರಣವಾಗುತ್ತಿದೆ. ಇದರಿಂದ ರೈತರು ಆರ್ಥಿಕ ನಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಕೃಷಿ ವಿಶ್ವವಿದ್ಯಾಲಯವು ರೈತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಕಡಿಮೆ ವೆಚ್ಚದಲ್ಲಿ ಅಧಿ ಕ ಲಾಭ ಪಡೆಯುವಂತೆ ರೈತರನ್ನು ಪ್ರೇರೇಪಿಸುವ ಕೆಲಸ ಮಾಡಬೇಕಿದೆ. ರೈತರ ಬೆಳೆದ ಬೆಳೆಗಳಿಗೆ ಇಂದು ಮಾರುಕಟ್ಟೆಯಲ್ಲಿ ವೈಜ್ಞಾನಿಕ ಬೆಲೆ ಸಿಗದ ಕಾರಣ ರೈತರ ಸ್ಥಿತಿ ತೀರ ಶೋಚನೀಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಬಳಿಕ ವಿವಿಧ ವಿಷಯಗಳು ಕುರಿತು ತಜ್ಞರು ವಿಷಯ ಮಂಡಿಸಿದರು.
ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ಮತ್ತು ತೋಟಗಾರಿಕಾ ವಿಜ್ಞಾನ ಕೇಂದ್ರದ ಉಪಕುಲಪತಿ ಡಾ| ಎಂ.ಕೆ. ನಾಯಕ್, ಕೃಷಿ ವಿಶ್ವವಿದ್ಯಾಲಯ ಮಾಜಿ ಉಪಕುಲಪತಿ ಡಾ| ವಿ.ಐ. ಬೆನಾಗಿ, ಶಿಕ್ಷಣ ನಿರ್ದೇಶಕ ಡಾ| ಎಸ್.ಕೆ. ಮೇಟಿ, ಸಂಶೋಧನಾ ನಿರ್ದೇಶಕ ಡಾ| ಬಿ.ಕೆ. ದೇಸಾಯಿ, ಇಂಡಿಯನ್ ಫೈಟೊಪಾಥೋಲಾಜಿಕಲ್ ಸೊಸೈಟಿ ಕಾರ್ಯದರ್ಶಿ ಡಾ| ದಿನೇಶ್ ಸಿಂಗ್, ಡಾ| ಕೆ.ಎನ್. ಕಟ್ಟಿಮನಿ, ಎಸ್.ಎನ್. ಪ್ರಸಾದ, ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯರಾದ ಅಮರೇಶ ಬಲ್ಲಿದವ, ಸಿದ್ದಪ್ಪ ಭಂಡಾರಿ, ರಾಜೇಂದರ್ ಕುಮಾರ ಕಟಾರಿಯಾ, ವೀರನಗೌಡ ಪರಸರೆಡ್ಡಿ ಹಾಗೂ ಇತರರು ಇದ್ದರು.