ರಾಯಚೂರು: ಉಡುಪಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು ನಗರದ ಸತ್ಯನಾಥ ಕಾಲೋನಿಯ ಮುಖ್ಯ ಪ್ರಾಣದೇವರ ದೇವಸ್ಥಾನ ಆವರಣದಲ್ಲಿ ಶನಿವಾರ ಬೆಳಗ್ಗೆ ಸಂಸ್ಥಾನ ಪೂಜೆ ನೆರವೇರಿಸುವ ಮೂಲಕ ತಮ್ಮ 47ನೇ ಚಾತುರ್ಮಾಸ್ಯ ವ್ರತಾಚರಣೆಗೆ ಚಾಲನೆ ನೀಡಿದರು.
ಬಳಿಕ ಆಶೀರ್ವಚನ ನೀಡಿದ ಪೂಜ್ಯರು, ಚಾತುರ್ಮಾಸ್ಯ ವ್ರತಾಚರಣೆಗೆ ಸಾಕಷ್ಟು ಮಹತ್ವವಿದೆ. ಇದನ್ನು ಯತಿಗಳು ಕಟ್ಟುನಿಟ್ಟಿನಿಂದ ಆಚರಿಸಿಕೊಂಡು ಬಂದಿದ್ದಾರೆ. ವೈಷ್ಣವರನ್ನು ಒಗ್ಗೂಡಿಸುವ ಮಹೋನ್ನತ ಕೆಲಸ ಇದರಿಂದ ಸಾಧ್ಯವಾಗಲಿದೆ ಎಂದರು.
ಬ್ರಾಹ್ಮಣರು ನೀಡುವ ಗುಣವುಳ್ಳವರೇ ವಿನಃ ಬೇಡುವ ಪ್ರವೃತ್ತಿ ಹೊಂದಿದವರಲ್ಲ. ಕೇಂದ್ರ ಸರ್ಕಾರ ನೀಡಿದ ಶೇ.10 ಮೀಸಲಾತಿ ಕೂಡ ತಾನಾಗಿಯೇ ಲಭಿಸಿದ್ದು, ವಿನಃ ಅದನ್ನು ಕೇಳಿದ್ದಲ್ಲ. ಬ್ರಾಹ್ಮಣ ಸಮಾಜವು ಇತರರಿಗೆ ಮಾದರಿಯಾಗಿದೆ. ತಾನೊಬ್ಬನೇ ಸುಖದಿಂದ ಇದ್ದರೆ ಸಾಕು ಎನ್ನುವುದಲ್ಲ, ಇಡೀ ಲೋಕವೇ ಸುಖದಿಂದ ಇರಲೆಂದು ಬೇಡುವ ಮನಸ್ಥಿತಿ ಹೊಂದಬೇಕು. ಇಡೀ ಲೋಕದ ಜನ ಸುಖವಾಗಿ ಬಾಳುವಂತೆ ಮಾಡು ಎಂದು ಭಗವಂತನಲ್ಲಿ ಪ್ರಾರ್ಥಿಸುವ ಗುಣ ನಮ್ಮದಾಗಲಿ ಎಂದರು.
ಆನೆಗೊಂದಿ ನವ ವೃಂದಾನವದಲ್ಲಿ ಕಿಡಿಗೇಡಿಗಳು ಧ್ವಂಸಗೊಳಿಸಿದ್ದ ಶ್ರೀ ವ್ಯಾಸರಾಜರ ವೃಂದಾವನವನ್ನು ಒಂದೇ ದಿನದಲ್ಲಿ ಪುನರ್ ನಿರ್ಮಿಸಲಾಯಿತು. ಇದರಿಂದ ಮಧ್ವ ಸಮಾಜದ ಬಲ ಏನೆಂಬುದು ಸಮಾಜಕ್ಕೆ ತೋರಿಸಿಕೊಟ್ಟಿದೆ. ಲೌಕಿಕ ವಿದ್ಯೆಯಲ್ಲಿ ಅನೇಕ ವಿಷಯಗಳಿವೆ. ಆದರೆ, ಆಧ್ಯಾತ್ಮಿಕ ವಿದ್ಯೆಯಿಂದ ಮಾತ್ರ ಭಗವಂತನ ಪ್ರಾಪ್ತಿಯಾಗಲಿದೆ. ಮನುಷ್ಯ ಎಷ್ಟೇ ಪದವಿಗಳನ್ನು ಪಡೆದರೂ ಆಧ್ಯಾತ್ಮಿಕ ಚಿಂತನೆಯಿಂದ ಮಾತ್ರ ಭಗವಂತನ ಕೃಪೆ ಸಾಧ್ಯ ಎಂದರು.
ಈ ಭಾಗದ ಗಟ್ಟಿ ಮನದ ಜನರಿಗೆ ಹರಿದಾಸರು ತಮ್ಮ ಚಿಂತನೆಗಳ ಮೂಲಕ ಭಗವಂತನನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆಂದು ತಿಳಿಸಿದರು.