Advertisement

ಪರೀಕ್ಷಾ ಲ್ಯಾಬ್‌ಗೆ ಪರವಾನಗಿ ಬಾಕಿ

01:02 PM May 29, 2020 | Naveen |

ರಾಯಚೂರು: ಇಲ್ಲಿನ ರಿಮ್ಸ್‌ ಆಡಳಿತ ಭವನದಲ್ಲಿ ಸ್ಥಾಪಿಸಿದ ಕೋವಿಡ್‌-19 ಪರೀಕ್ಷಾ ಪ್ರಯೋಗಾಲಯದ ಕೆಲಸ ಬಹುತೇಕ ಮುಗಿದಿದ್ದು, ಸರ್ಕಾರದ ಅನುಮತಿಯೊಂದೇ ಬಾಕಿ ಇದೆ. ಕಳೆದ ವಾರವೇ ಈ ಕೇಂದ್ರ ಆರಂಭವಾಗಬೇಕಿತ್ತು. ಆದರೆ, ಪ್ರಮುಖವಾಗಿ ಬೇಕಿದ್ದ ಆರ್‌ಟಿಪಿಸಿಆರ್‌ ಬರುವುದು ವಿಳಂಬವಾದ ಕಾರಣ ತಡವಾಗಿದೆ. ಇದಕ್ಕಾಗಿ ಜಿಲ್ಲಾಡಳಿತ ಎಸ್‌ಡಿಆರ್‌ಎಫ್‌ ನಿಧಿಯಡಿ 50 ಲಕ್ಷ ರೂ. ನೀಡಿದರೆ, ರಿಮ್ಸ್‌ ಆಡಳಿತ ಮಂಡಳಿ ಕೂಡ ಹಣ ನೀಡಿದೆ. ಒಂದು ವೇಳೆ ಈ ಪ್ರಯೋಗಾಲಯ ಶುರುವಾದಲ್ಲಿ ನಿತ್ಯ 200 ವರದಿಗಳನ್ನು ಇಲ್ಲಿಯೇ ಪರೀಕ್ಷೆ ಮಾಡಬಹುದಾಗಿದ್ದು, ಕಲಬುರಗಿ, ಬಳ್ಳಾರಿ, ಬೆಂಗಳೂರನ್ನು ಅವಲಂಬಿಸುವ ತಾಪತ್ರಯ ತೀರಲಿದೆ.ಅಲ್ಲದೇ, ಆಯಾ ದಿನಗಳಂದೇ ಫಲಿತಾಂಶ ಕೈ ಸೇರುವುದರಿಂದ ಅನಗತ್ಯ ಕಾಲಕ್ಷೇಪಕ್ಕೂ ಕಡಿವಾಣ ಬೀಳಲಿದೆ. ನೆಗೆಟಿವ್‌ ಬಂದಲ್ಲಿ ಶಂಕಿತರನ್ನು ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡಬಹುದು.

Advertisement

ಐಸಿಎಂಆರ್‌ನಿಂದ ಅನುಮತಿ: ಲ್ಯಾಬ್‌ ನಲ್ಲಿ ಗುರುವಾರ ಪ್ರಯೋಗಕ್ಕಾಗಿ ಪರೀಕ್ಷೆ ನಡೆಸಲಾಗಿದೆ. ಆ ವರದಿಯನ್ನು ಬೆಂಗಳೂರಿನ ನಿಮಾನ್ಸ್‌ಗೆ ಕಳುಹಿಸಲಾಗುತ್ತಿದೆ. ಅಲ್ಲಿಂದ ದೆಹಲಿಯ ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್‌ ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ. ಒಂದು ವೇಳೆ ಯಂತ್ರ ಯಾವುದೇ ಲೋಪದೋಷಗಳಿಲ್ಲದೇ ಸುಗಮ ವಾಗಿ ಕಾರ್ಯೋನ್ಮುಖವಾಗಿದ್ದರೆ ಒಂದೆರಡು ದಿನ ಗಳಲ್ಲೇ ಅನುಮತಿ ಸಿಗುವ ನಿರೀಕ್ಷೆ ಇದೆ. ಅಲ್ಲಿ ಈ ಪ್ರಯೋಗಾಲಯಕ್ಕೆ ಪತ್ಯೇಕ ಐಡಿ ನೀಡಲಾಗುತ್ತದೆ. ಅದರಲ್ಲಿ ಆಯಾ ದಿನದ ಫಲಿತಾಂಶಗಳನ್ನು ಸಿಬ್ಬಂದಿ ದಾಖಲಿಸಬೇಕು. ಆಗ ಐಸಿಎಂಆರ್‌ ರೋಗಿಯ ಸಂಖ್ಯೆ ನೀಡುತ್ತದೆ.

ಆನ್‌ಲೈನ್‌ನಲ್ಲೇ ಮಾರ್ಗದರ್ಶನ: ಆರ್‌ ಟಿಪಿಸಿಆರ್‌ ಯಂತ್ರ ಅಳವಡಿಕೆಗೆ ಯಾವುದೇ ಸಿಬ್ಬಂದಿ ಬಂದಿಲ್ಲ. ಸಿಬ್ಬಂದಿಗೆ ಒತ್ತಡ ಇರುವ ಕಾರಣ ಅವರು ಆನ್‌ಲೈನ್‌ನಲ್ಲೇ ನಿರ್ದೇಶನ ನೀಡಿದ್ದು, ಸ್ಥಳೀಯ ಸಿಬ್ಬಂದಿಯೇ ಅಳವಡಿಸಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಇರುವ ಕಾರಣ ಅಳವಡಿಕೆ ಪ್ರಯಾಸ ಪಡುವ ಪ್ರಮೇಯ ಬಂದಿಲ್ಲ ಎನ್ನುವುದು ಸಿಬ್ಬಂದಿ ವಿವರಣೆ. ಇನ್ನೂ ಇದಕ್ಕಾಗಿ ಈಗಾಗಲೇ ಪಿಎಚ್‌ಡಿ ಪದವೀಧರರು, ತಾಂತ್ರಿಕ ಸಿಬ್ಬಂದಿಗೆ ತರಬೇತಿ ಕೂಡ ನೀಡಲಾಗಿದೆ.

ತಡವಾಗಿ ಆರಂಭ: ಜಿಲ್ಲೆಯ ಮಟ್ಟಿಗೆ ಈ ಪ್ರಯೋಗಾಲಯವನ್ನು ಬೇಗನೇ ಆರಂಭಿಸಬೇಕಿತ್ತು. ಈಗಾಗಲೇ ಬಹುತೇಕ ವಲಸಿಗರು ಊರು ಸೇರಿಕೊಂಡಿದ್ದಾರೆ. ಅನ್ಯ ರಾಜ್ಯಗಳಿಂದ ಬಂದಿರುವ ಕಾರ್ಮಿಕರು ಕ್ವಾರಂಟೈನ್‌ಗಳಿದ್ದು, ಅವರ ವರದಿಗಳನ್ನು ಪರೀಕ್ಷೆಗೆಂದು ಕಳುಹಿಸಲಾಗಿದೆ. ಜಿಲ್ಲೆಯಿಂದ ಈವರೆಗೆ 14,474 ಜನರ ಮಾದರಿ ಸಂಗ್ರಹಿಸಿದ್ದು, 9,009 ವರದಿಗಳ ಪರೀಕ್ಷೆ ಬಂದಿದೆ. ಇನ್ನೂ 4,324 ವರದಿ ಬಾಕಿ ಇದೆ. ಆದರೆ, ಈಗ ಹೊರಗಿನಿಂದ ಬರುವವರ ಸಂಖ್ಯೆ ಕೂಡ ಕಡಿಮೆಯಾಗಿದೆ. ಹೀಗಾಗಿ ಪ್ರಯೋಗಾಲಯ ಶುರುವಾದರೂ ಒತ್ತಡ ಕಡಿಮೆ ಆಗಬಹುದು. ಇದರಲ್ಲಿ ಎಲ್ಲ ರೀತಿಯ ವೈರಸ್‌ ಪರೀಕ್ಷೆ ಮಾಡಲು ಅವಕಾಶವಿದ್ದು, ಮುಂದೆ ಬೇರೆ ಉದ್ದೇಶ ಗಳಿಗೂ ಬಳಕೆಯಾಗುವುದೇ ಸಮಾಧಾನದ ಸಂಗತಿ.

ರಿಮ್ಸ್‌ನಲ್ಲಿ ಕೋವಿಡ್‌-19 ಪರೀಕ್ಷಾ ಲ್ಯಾಬ್‌ ಸಿದ್ಧತೆ ಕಾರ್ಯ ಮುಗಿದಿದೆ. ಈಗ ಪ್ರಯೋಗಾತ್ಮಕವಾಗಿ ಪರೀಕ್ಷೆ ನಡೆಸಿದ್ದು, ವರದಿಯನ್ನು ನಿಮಾನ್ಸ್‌ ಕಳುಹಿಸಲಾಗುವುದು. ಒಂದೆರಡು ದಿನದಲ್ಲಿ ದೆಹಲಿಯ ಐಸಿಎಂಆರ್‌ನಿಂದ ಅನುಮತಿ ಸಿಗುವ ವಿಶ್ವಾಸವಿದೆ. ನಿತ್ಯ 200 ವರದಿ ಪರೀಕ್ಷಿಸಬಹುದಾಗಿದ್ದು, ಸಮಯ, ಶ್ರಮ ಉಳಿಯಲಿದೆ.
ಡಾ.ಬಸವರಾಜ್‌ ಪೀರಾಪುರ,
ರಿಮ್ಸ್‌ ನಿರ್ದೇಶಕರು

Advertisement
Advertisement

Udayavani is now on Telegram. Click here to join our channel and stay updated with the latest news.

Next