Advertisement

ಐಸಿಸ್‌ ಉಗ್ರರಿಂದ ಪಾರು ಮಾಡಿಸಿದ್ದ ಸುಷ್ಮಾ!

10:43 AM Aug 08, 2019 | Naveen |

ಸಿದ್ಧಯ್ಯಸ್ವಾಮಿ ಕುಕನೂರು
ರಾಯಚೂರು:
ನಾನು ಇಂದು ಹೆತ್ತವರು, ಹೆಂಡತಿ, ಮಕ್ಕಳೊಂದಿಗೆ ನೆಮ್ಮದಿಯಿಂದ ಇದ್ದೇನೆ ಎಂದರೆ ಅದಕ್ಕೆ ಕಾರಣ ಸುಷ್ಮಾ ಸ್ವರಾಜ್‌. ಅಂದು ಐಸಿಸ್‌ ಉಗ್ರರ ಸೆರೆಗೆ ಸಿಲುಕಿದ್ದ ನಮ್ಮ ನೆರವಿಗೆ ಅವರು ಬಾರದಿದ್ದರೆ ನಮ್ಮ ಪರಿಸ್ಥಿತಿಯೇ ಬೇರೆ ಆಗಿರುತ್ತಿತ್ತು ಎಂದು ಭಾವುಕರಾಗುತ್ತಾರೆ ಲಕ್ಷ್ಮೀಕಾಂತ.

Advertisement

ಇಸ್ರೇಲ್ನ ಲಿಬಿಯಾದಲ್ಲಿ ಐಸಿಸ್‌ ಉಗ್ರರ ಒತ್ತೆಯಾಳುಗಳಾಗಿದ್ದ ಭಾರತದ ನಾಲ್ವರ ಪೈಕಿ ರಾಯಚೂರಿನ ಲಕ್ಷ್ಮೀಕಾಂತ ಛಲವಾದಿ ಕೂಡ ಒಬ್ಬರು. ಲಿಬಿಯಾದ ಸಿರತ್ಥ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ಕರ್ನಾಟಕದ ಲಕ್ಷ್ಮೀಕಾಂತ, ವಿಜಯಕುಮಾರ, ಆಂಧ್ರದ ಗೋಪಾಲಕೃಷ್ಣ, ಬಲರಾಮ್‌ ಅವರೊಟ್ಟಿಗೆ 2015ರ ಜು.29ರಂದು ಹಿಂದಿರುಗುವಾಗ ಉಗ್ರರು ವಶಕ್ಕೆ ಪಡೆದಿದ್ದರು. 42 ಗಂಟೆಗಳ ಕಾಲ ಕೂಡಿ ಹಾಕಿದ್ದರು. ಆ ಕ್ಷಣದಲ್ಲಿ ‘ನಾವು ಇಲ್ಲಿಂದ ಜೀವಂತ ಹೋಗುವುದೇ ಅಸಾಧ್ಯ’ ಎಂದು ಜೀವದ ಮೇಲೆ ಆಸೆ ಕೈಬಿಟ್ಟಿದ್ದೆವು. ಆಗ ನೆರವಿಗೆ ಧಾವಿಸಿದವರೇ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌. ಅವರು ಅಂದು ಕೈಗೊಂಡ ಸಮಯೋಚಿತ ನಿರ್ಧಾರದಿಂದ ನಮ್ಮ ಜೀವ ಉಳಿಯಿತು ಎನ್ನುತ್ತಾರೆ ಅವರು.

ರಾಯಚೂರು ತಾಲೂಕಿನ ಹೊಸಪೇಟೆ ಮೂಲದ ಲಕ್ಷ್ಮೀಕಾಂತ 2009ರಲ್ಲಿ ಲಿಬಿಯಾಕ್ಕೆ ತೆರಳಿದ್ದರು. ಕೆಲ ದಿನಗಳ ಬಳಿಕ ತಮ್ಮ ಪತ್ನಿ ಡಾ| ಪ್ರತಿಭಾ ಕೂಡ ಅಲ್ಲಿಗೆ ಹೋಗಿ ನೆಲೆಸಿದ್ದರು. 2015ರಲ್ಲಿ ಗರ್ಭಿಣಿಯಾಗಿದ್ದ ಅವರು ಸ್ವದೇಶಕ್ಕೆ ಮರಳಿದ್ದರು. ಮಗಳು ಹುಟ್ಟಿದ ಬಳಿಕ ಅವಳನ್ನು ನೋಡಲು ಸ್ವದೇಶಕ್ಕೆ ಬರುವಾಗ ಉಗ್ರರ ವಶಕ್ಕೆ ಸಿಲುಕಿಕೊಂಡಿದ್ದರು. ಎಲ್ಲಿ ನನ್ನ ಮಗಳನ್ನು ನೋಡದೆಯೇ ಸಾಯುವೆನೋ ಎಂಬ ಚಿಂತೆ ನನ್ನನ್ನು ಅರ್ಧ ಸಾಯಿಸಿತ್ತು ಎನ್ನುತ್ತಾರೆ ಲಕ್ಷ್ಮೀಕಾಂತ.

ಸುದ್ದಿ ತಿಳಿದಾಕ್ಷಣ ಕಾರ್ಯಪ್ರವೃತ್ತ ರಾದ ಆಗಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ಅಲ್ಲಿನ ರಾಯಭಾರ ಕಚೇರಿ ಜತೆ ಸಂಪರ್ಕ ಸಾಧಿಸಿ ಇಬ್ಬರನ್ನು ತಕ್ಷಣ ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಆಂಧ್ರದ ಇನ್ನಿಬ್ಬರ ಬಿಡುಗಡೆ ಮಾತ್ರ ಒಂದು ವರ್ಷದ ಬಳಿಕ ಆಗಿತ್ತು. ರಾಯಚೂರಿನ ಪಿಜಿ ಸೆಂಟರ್‌ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಲಕ್ಷ್ಮೀಕಾಂತ ತಂದೆ, ತಾಯಿ, ಮಗಳು ಕೃತಿಕುಮಾರಿ, ಮಗ ದೈವಿಕ್‌ ಜತೆ ನೆಮ್ಮದಿಯಿಂದ ಇದ್ದಾರೆ.

ಅನಿವಾಸಿ ಭಾರತೀಯರ ಪಾಲಿಗೆ ಸುಷ್ಮಾ ಸ್ವರಾಜ್‌ ನಿಜಕ್ಕೂ ಆಪತ್ಬಾಂಧವರ ರೀತಿ ಇದ್ದರು. ಎನ್‌ಆರ್‌ಐಗಳ ಮಾಹಿತಿ ಸಂಗ್ರಹಿಸಲು ವೆಬ್‌ಪೋರ್ಟಲ್ ಆರಂಭಿಸಿದ್ದು ಅವರೇ. ಅದು ನಮ್ಮ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲು ನೆರವಾಯಿತು. ಉಗ್ರರ ಕೈಗೆ ಸಿಕ್ಕ ನಾವು ನರಕದ ಬಾಗಿಲು ತಟ್ಟಿ ಬಂದಿದ್ದೆವು. ಇಂದಿಗೂ ಆ ಭಯಾನಕ ಕ್ಷಣಗಳು ಕಣ್ಣು ಕಟ್ಟಿದಂತಿವೆ. ನಮಗೆ ಪುನರ್ಜನ್ಮ ನೀಡಿದ್ದ ಸುಷ್ಮಾ ಸ್ವರಾಜ್‌ ಅವರ ಅಗಲಿಕೆ ನಿಜಕ್ಕೂ ತುಂಬಾ ಖೇದವುಂಟು ಮಾಡಿದೆ.
ಲಕ್ಷ್ಮೀಕಾಂತ,
ಐಸಿಸ್‌ ಉಗ್ರ ಸೆರೆಯಾಗಿದ್ದ ವ್ಯಕ್ತಿ

Advertisement

ನಮಗೆ ಹೆಣ್ಣು ಮಗು ಜನಿಸಿ ಕೆಲವೇ ತಿಂಗಳಾಗಿತ್ತು. ಆದರೆ, ಅವರಿನ್ನೂ ಮಗಳನ್ನು ಎತ್ತಿ ಮುದ್ದಾಡಿರಲಿಲ್ಲ. ಐಸಿಸ್‌ ಉಗ್ರರ ಸೆರೆಗೆ ಸಿಲುಕಿದ್ದಾರೆ ಎಂಬ ಸುದ್ದಿ ತಿಳಿದಾಕ್ಷಣ ನಮ್ಮ ಜಂಘಾಬಲವೇ ಉಡುಗಿ ಹೋಯಿತು. ಎರಡು ದಿನ ಇಡೀ ಕುಟುಂಬ ಕಣ್ಣೀರಲ್ಲೇ ಕೈ ತೊಳೆದಿದೆ. ಆದರೆ, ಆ ವೇಳೆ ನಮ್ಮ ಪಾಲಿಗೆ ಸುಷ್ಮಾ ಸ್ವರಾಜ್‌ ಅವರು ದೇವರಂತೆ ಬಂದರು. ಇಂದು ನಾವು ಸಂತೋಷದಿಂದಿರಲು ಅವರೇ ಕಾರಣ. ಅವರ ಅಗಲಿಕೆ ನಮ್ಮ ಮನೆ ಸದಸ್ಯರನ್ನೇ ಕಳೆದುಕೊಂಡ ಭಾವನೆ ಮೂಡತ್ತಿದೆ.
ಡಾ| ಪ್ರತಿಭಾ,
 ಲಕ್ಷ್ಮೀಕಾಂತ ಪತ್ನಿ

Advertisement

Udayavani is now on Telegram. Click here to join our channel and stay updated with the latest news.

Next