Advertisement

ಉಭಯ ನದಿಗಳಲ್ಲೂ ತಗ್ಗಿದ ಪ್ರವಾಹ

11:37 AM Aug 14, 2019 | Team Udayavani |

ರಾಯಚೂರು: ದೇವದುರ್ಗ ತಾಲೂಕಿನ ಕರ್ಕಿಹಳ್ಳಿ ಗ್ರಾಮದಲ್ಲಿ ಕೃಷ್ಣಾ ನದಿ ಪ್ರವಾಹದಿಂದ ನುಗ್ಗಿದ ನೀರು ಇನ್ನೂ ತೆರವಾಗಿಲ್ಲ.

Advertisement

ರಾಯಚೂರು: ಜಿಲ್ಲೆಯ ಎರಡು ನದಿಗಳಾದ ಕೃಷ್ಣೆ, ತುಂಗಭದ್ರೆಯಲ್ಲಿ ಪ್ರವಾಹ ಇಳಿಮುಖವಾಗಿದ್ದು, ಸಂತ್ರಸ್ತರು, ನದಿ ಪಾತ್ರದ ಜನ ನಿಟ್ಟುಸಿರು ಬಿಡುತ್ತಿದ್ದಾರೆ. ಎರಡೂ ನದಿಗಳಿಗೆ ಜಲಾಶಯದಿಂದ ಹರಿಸುವ ನೀರಿನ ಪ್ರಮಾಣ ತುಸು ಕಡಿಮೆ ಮಾಡಲಾಗಿದೆ.

ನಾರಾಯಣಪುರ ಜಲಾಶಯದಿಂದ ಮಂಗಳವಾರ 5.90 ಲಕ್ಷ ಕ್ಯೂಸೆಕ್‌ ಹರಿಸಿದ್ದು, ಸನ್ನತಿಯಿಂದ ಭೀಮಾ ನದಿಗೆ 1.10 ಲಕ್ಷ ಕ್ಯೂಸೆಕ್‌ ಹರಿಸಲಾಗಿದೆ. ಇದರಿಂದ ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಪ್ರವಾಹ ತಗ್ಗಿದೆ. ಆದರೆ, ಇನ್ನೆರಡು ದಿನಗಳ ಕಾಲ ಭೀಮಾ ನದಿಗೆ ಒಂದು ಲಕ್ಷ ಕ್ಯೂಸೆಕ್‌ ನೀರು ಹರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಪರಿಸ್ಥಿತಿ ತಿಳಿಗೊಳ್ಳಲು ಇನ್ನೊಂದೆರಡು ದಿನಗಳು ಬೇಕಾಗಬಹುದು ಎನ್ನಲಾಗುತ್ತಿದೆ.

ಇನ್ನು ತುಂಗಭದ್ರಾ ಜಲಾಶಯದಿಂದಲೂ ಮಂಗಳವಾರ ಬೆಳಗ್ಗೆ 1.15 ಲಕ್ಷ ಕ್ಯೂಸೆಕ್‌ ನೀರನ್ನು ನದಿಗೆ ಹರಿಸಿದ ಪರಿಣಾಮ ಪ್ರವಾಹ ತಗ್ಗಿದ್ದು, ನದಿ ಪಾತ್ರದ ಜನರಲ್ಲಿ ಸಮಾಧಾನ ಮೂಡಿದೆ. ಆದರೆ, ಪ್ರವಾಹದಿಂದ ನೀರು ನುಗ್ಗಿದ ಗ್ರಾಮಗಳಲ್ಲಿ ವಾತಾವರಣ ತಿಳಿಗೊಂಡಿಲ್ಲ. ಎಲ್ಲ ಗ್ರಾಮಗಳಲ್ಲೂ ಇನ್ನೂ ನೀರು ನಿಂತಿದೆ. ಹೀಗಾಗಿ ಜನ ಪರಿಹಾರ ಕೇಂದ್ರಗಳಲ್ಲೇ ಉಳಿದುಕೊಂಡಿದ್ದಾರೆ. ಯಾರೂ ಕೂಡ ಊರುಗಳಿಗೆ ಹಿಂದಿರುಗುವ ಧೈರ್ಯ ತೋರುತ್ತಿಲ್ಲ. ಗ್ರಾಮಗಳು ಬಿಕೋ ಎನ್ನುತ್ತಿವೆ. ಕೆಲವೊಂದು ಹಳೇ ಮನೆಗಳ ಬುನಾದಿಗಳಿಗೆ ನೀರು ನಿಂತ ಕಾರಣ ಧಕ್ಕೆ ಆಗುತ್ತಿದೆ.

ಪಶ್ಚಿಮ ವಾಹಿನಿಗಳಲ್ಲಿ ಮಳೆ ಹೆಚ್ಚಾಗಿದ್ದು, ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿತ್ತು. ಇದರಿಂದ ನದಿ ತೀರದ ಸಿಂಧನೂರು ಹಾಗೂ ಮಾನ್ವಿ, ರಾಯಚೂರು ತಾಲೂಕು ವ್ಯಾಪ್ತಿಯ 34 ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿತ್ತು. 30 ಗ್ರಾಮದ 602 ಜನರು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲದೇ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಹೈಅಲರ್ಟ್‌ ಘೋಷಿಸಲಾಗಿತ್ತು. ಸೋಮವಾರ ಪ್ರವಾಹದ ಹಿನ್ನೆಲೆಯಲ್ಲಿ ಚೀಕಲಪರ್ವಿ ವಿಜಯದಾಸರ ಕಟ್ಟೆವರೆಗೆ ನೀರು ಬಂದಿತ್ತು. ರಾಯಚೂರು ತಾಲೂಕಿನ ಎಲೆಬಿಚ್ಚಾಲಿಯ ರಾಯರ ಜಪದಕಟ್ಟೆ ಜಲಾವೃತಗೊಂಡಿತ್ತು.

Advertisement

ಜಿಲ್ಲಾಡಳಿತ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ದಢೇಸುಗೂರು ಗ್ರಾಮದ ಜನರಿಗೆ ಸರ್ಕಾರಿ ಶಾಲೆಗಳು, ಗ್ರಾಪಂ ಕಚೇರಿಯಲ್ಲಿ ಹಾಗೂ ಸಿಂಗಾಪುರ ಗ್ರಾಮದ ಜನರಿಗೆ ಸಮೀಪದ ಮುಕ್ಕುಂದ ಸರ್ಕಾರಿ ಶಾಲೆ ಹಾಗೂ ಬಾಲಾಜಿ ಕ್ಯಾಂಪ್‌ನ ಸರ್ಕಾರಿ ಶಾಲೆಯಲ್ಲಿ ಗಂಜಿ ಕೇಂದ್ರವನ್ನು ಸ್ಥಾಪನೆ ಮಾಡಿದೆ. ಮಾನ್ವಿ ತಾಲೂಕಿನ ಚೀಕಲಪರ್ವಿ, ದದ್ದಲ್, ಕಾತರಕಿ ಗ್ರಾಮಸ್ಥರ ಸ್ಥಳಾಂತರಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಪ್ರವಾಹ ಇಳಿಮುಖವಾಗಿದ್ದು, ಜಿಲ್ಲಾಡಳಿತವು ಹೈಅಲರ್ಟ್‌ ಮುಂದುವರಿಸಿದೆ. ನೀರಿನ ಹರಿವು ಕಡಿಮೆಯಾಗಿರುವ ಕಾರಣ ಜನ ಕೂಡ ನಿರಾಳವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next