ರಾಯಚೂರು: ಹೈಕೋರ್ಟ್ ಆದೇಶದನ್ವಯ ಕಾರ್ಮಿಕರಿಗೆ ಕನಿಷ್ಠ ಕೂಲಿ ಜಾರಿ ಸೇರಿ ವಿವಿಧ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನಾ ರ್ಯಾಲಿ ನಡೆಸಿದರು. ನಗರದ ಸಾರ್ವಜನಿಕ ಉದ್ಯಾನವನದಿಂದ ಶುರುವಾದ ಪ್ರತಿಭಟನಾ ರ್ಯಾಲಿ ಜಿಲ್ಲಾ ಕಾರ್ಮಿಕ ಇಲಾಖೆ ಕಚೇರಿವರೆಗೂ ನಡೆಯಿತು. ಬಳಿಕ ಇಲಾಖೆ ಅಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
37 ಪ್ರಕಾರದ ಕೈಗಾರಿಕೆಗಳಿಗೆ ಸರ್ಕಾರ ನಿಗದಿ ಮಾಡಿದ ಕನಿಷ್ಠ ವೇತನ ಅಧಿಸೂಚನೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಶೇ.6ರಷ್ಟು ಬಡ್ಡಿಯೊಂದಿಗೆ ಎಂಟು ವಾರದೊಳಗೆ ಬಾಕಿ ವೇತನ ಸಂದಾಯ ಮಾಡುವಂತೆ ಸೂಚಿಸಿದೆ. ಹಾಗೂ ಕಾಯಂ, ಬದಲಿ, ಹೊರಗುತ್ತಿಗೆ ಕಾರ್ಮಿಕರೆಲ್ಲರೂ ಮೂಲ ವೇತನ ಪಡೆಯಲು ಅರ್ಹರೆಂದು ಆದೇಶಿಸಿದೆ. ಕೈಗಾರಿಕೆ, ಕಾರ್ಖಾನೆಗಳ ಆಡಳಿತ ಮಂಡಳಿಗಳು, ಮಾಲೀಕರು ಕೂಡಲೇ ನ್ಯಾಯಾಲಯದ ಆದೇಶ ಪಾಲಿಸಬೇಕು ಎಂದು ಒತ್ತಾಯಿಸಿದರು.
ಮನೆ ಕೆಲಸಗಾರರು, ಟೇಲರ್, ಮೆಕ್ಯಾನಿಕ್ಸ್, ಹಮಾಲರು, ಕ್ಷೌರಿಕರು, ಚಿಂದಿ ಆಯುವವರು, ಚಾಲಕರಂಥ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಮಂಡಳಿ ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿ ರಾಜ್ಯ ಸರ್ಕಾರ ಸ್ಮಾರ್ಟ್ ಕಾರ್ಡ್ ನೀಡುವುದಾಗಿ ಅರ್ಜಿ ಪಡೆದು ವರ್ಷವಾಗಿದೆ. ಆದರೆ, ಯಾರಿಗೂ ಕಾರ್ಡ್ ವಿತರಿಸಿಲ್ಲ. ಕೂಡಲೇ ಅರ್ಹರಿಗೆ ಸ್ಮಾರ್ಟ್ ಕಾರ್ಡ್ ನೀಡಬೇಕು ಎಂದು ಆಗ್ರಹಿಸಿದರು.
ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರನ್ನೂ ಕನಿಷ್ಠ ಕೂಲಿ ವ್ಯಾಪ್ತಿಗೆ ಒಳಪಡಿಸಬೇಕು. 5 ಘಟಕಗಳ ಆಧಾರದಡಿ ಕನಿಷ್ಠ ಕೂಲಿ ನಿಗದಿಪಡಿಸಬೇಕು. ಬೆಲೆ ಏರಿಕೆ ಸೂಚ್ಯಂಕ ನಿಗದಿಯಲ್ಲಿನ ಮೋಸ ನಿಲ್ಲಿಸಬೇಕು. ಕಾರ್ಮಿಕರ ಸಂಘದ ನೋಂದಣಿ ಶುಲ್ಕ ಒಂದು ಸಾವಿರ ರೂ.ಗೆ ಹೆಚ್ಚಿಸಿದ್ದು, ಕೂಡಲೇ ಹಿಂಪಡೆಯಬೇಕು. ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಸಿಬ್ಬಂದಿ ನೇಮಕ, ಹಲವು ವರ್ಷದಿಂದ ಬಾಕಿಯಿರುವ ಪ್ರಕರಣಗಳನ್ನು ವಿಲೇವಾರಿ ಮಾಡಲು ವಿಶೇಷ ಒತ್ತು ನೀಡಬೇಕು. ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ- ತುಟ್ಟಿಭತ್ಯೆ ಬಾಕಿ ಜಾರಿಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ರ್ಯಾಲಿಯಲ್ಲಿ ಟಿಐಟಿಯು ಜಿಲ್ಲಾಧ್ಯಕ್ಷೆ ಎಚ್.ಪದ್ಮಾ, ಪ್ರಧಾನ ಕಾರ್ಯದರ್ಶಿ ಶೇಕ್ಷಾಖಾದ್ರಿ, ಕೆ.ಜಿ.ವೀರೇಶ, ವರಲಕ್ಷ್ಮೀ ಸೇರಿ ಮುಖಂಡರು, ಕಾರ್ಮಿಕರು ಪಾಲ್ಗೊಂಡಿದ್ದರು.