ರಾಯಚೂರು: ಬರೋಬ್ಬರಿ ಒಂದೂವರೆ ತಿಂಗಳ ಬಳಿಕ ಮದ್ಯ ಮಾರಾಟಕ್ಕೆ ಅವಕಾಶ ನೀಡುತ್ತಿದ್ದಂತೆ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿತ್ತು. ಆದರೆ, ಕೇವಲ 10 ದಿನದೊಳಗೆ ಮದ್ಯ ಮಾರಾಟದ ಪ್ರಮಾಣದಲ್ಲಿ ಸಾಕಷ್ಟು ಇಳಿಕೆ ಕಂಡು ಬಂದಿದೆ.
ಸರ್ಕಾರ ಲಾಕ್‌ಡೌನ್ ನಡುವೆಯೂ ಮೇ 4ರಂದು ಮದ್ಯ ಮಾರಾಟಕ್ಕೆ ಅವಕಾಶ ನೀಡಿತ್ತು. ಮೊದಲ ದಿನವೇ ಜಿಲ್ಲೆಯಲ್ಲಿ 2.5 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿತ್ತು. ಅದಾದ ನಾಲ್ಕೈದು ದಿನಗಳ ಮಟ್ಟಿಗೆ ಚೆನ್ನಾಗಿಯೇ ವಹಿವಾಟು ನಡೆಯಿತು. ಬಳಿಕ ಬಾರ್ ಆ್ಯಂಡ್ ರೆಸ್ಟೊರೆಂಟ್‌ಗಳಿಗೂ ಮಾರಾಟಕ್ಕೆ ಅವಕಾಶ ನೀಡಲಾಯಿತು. ಅದರ ಜತೆಗೆ ಸರ್ಕಾರ ಶೇ.17 ದರ ಹೆಚ್ಚಿಸಿತು. ದರ ಹೆಚ್ಚಿಸುತ್ತಿದ್ದಂತೆ ಮದ್ಯ ಮಾರಾಟ ಪ್ರಮಾಣದಲ್ಲಿ ನಿಧಾನಕ್ಕೆ ಇಳಿಕೆ ಕಂಡು ಬಂದಿದೆ. ಏನಿಲ್ಲವೆಂದರೂ ಶೇ.20-30 ಕುಸಿತ ಕಂಡಿದೆ.
ಮೇ 4ರಂದು ಜಿಲ್ಲೆಯಲ್ಲಿ 53,768 ಲೀ. ಮದ್ಯ ಹಾಗೂ 13,895 ಲೀಟರ್ ಬಿಯರ್ ಮಾರಾಟವಾಗಿತ್ತು. ಮೇ 5ರಂದು 32,437 ಲೀ. ಮದ್ಯ ಹಾಗೂ 10,785 ಲೀ. ಬಿಯರ್ ಮಾರಾಟವಾಗಿತ್ತು. ಮೇ 6ರಂದು 59,926 ಲೀ. ಮದ್ಯ, 12,672 ಲೀ. ಬಿಯರ್ ಮಾರಾಟವಾಗಿದೆ. ಮೇ 7ರಂದು 49,023 ಲೀ. ಮದ್ಯ ಹಾಗೂ 11,162 ಲೀ. ಬಿಯರ್ ಮಾರಾಟವಾಗಿದೆ. ಆದರೆ, ಮೇ 13ರಂದು ಮಾರಾಟ ಪರಿಶೀಲಿಸಿದರೆ 32,059 ಲೀ. ಮದ್ಯ ಮಾರಾಟವಾದರೆ, 7,514 ಲೀ. ಬಿಯರ್ ಮಾರಾಟವಾಗಿದೆ. ಮೇ 15ರಂದು 30570 ಲೀ. ಮದ್ಯ ಹಾಗೂ 8099 ಲೀ. ಬಿಯರ್ ಮಾರಾಟವಾಗಿದೆ. ಅಂದರೆ ಸರಾಸರಿ ಶೇ.20ರಿಂದ 30 ಕಡಿಮೆ ಮಾರಾಟ ಕಡಿಮೆಯಾಗಿದೆ.
ಜನರಿಗೆ ಕೆಲಸವಿಲ್ಲ: ಲಾಕ್‌ಡೌನ್ ವೇಳೆ ಬಡ ಜನರಿಗೆ ಮದ್ಯ ಸಿಗುವುದೇ ದುಸ್ತರವಾಗಿತ್ತು. ಯಾವುದೇ ಬ್ರಾಂಡ್‌ನ ಮದ್ಯ ಏನಿಲ್ಲವೆಂದರೂ ಐದು ಪಟ್ಟು ಹೆಚ್ಚು ದರಕ್ಕೆ ಮಾರಾಟವಾಗಿದೆ. ಇದರಿಂದ ಸಾಕಷ್ಟು ಶ್ರಮಿಕರು ಕಳ್ಳಭಟ್ಟಿ, ಸೇಂದಿ, ಸಿಎಚ್ ಪೌಡರ್ ಮೊರೆ ಹೋಗಿದ್ದರು. ಯಾವಾಗ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿತೋ ನಾ ಮುಂದು.. ನೀ ಮುಂದು.. ಎನ್ನುವಂತೆ ಮದ್ಯಪ್ರಿಯರು ಖರೀದಿಗೆ ಮುಗಿ ಬಿದ್ದರು. ಆದರೆ, ಅದು ಹೆಚ್ಚು ದಿನ ನಡೆಯಲಿಲ್ಲ. ಇನ್ನೂ ಜನರಿಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ಸಿಗುತ್ತಿಲ್ಲ. ಸಿಕ್ಕರೂ ಕೈಗೆ ಹಣ ದಕ್ಕುತ್ತಿಲ್ಲ. ಹೀಗಾಗಿ ಕುಡಿಯಬೇಕೆಂದರೂ ಹಣದ ಅಭಾವ ಕಾಡುತ್ತಿದೆ. ಅದರ ಜತೆಗೆ ಸರ್ಕಾರ ಶೇ.17 ದರ ಹೆಚ್ಚಿಸಿರುವುದು ಮದ್ಯಪ್ರಿಯರಿಗೆ ಹೊರೆಯಾಗಿ ಪರಿಣಮಿಸಿದೆ.
ಆರಂಭಿಕ ದಿನಗಳಿಗೆ ಹೋಲಿಸಿದರೆ ಮದ್ಯ ಮಾರಾಟದಲ್ಲಿ ಸಾಕಷ್ಟು ಇಳಿಕೆ ಕಂಡು ಬಂದಿದೆ. ಲಾಕ್ ಡೌನ್ ಇನ್ನೂ ಪೂರ್ಣ ಪ್ರಮಾಣದಲ್ಲಿ ತೆರವಾಗಿಲ್ಲದ ಕಾರಣ ಜನರಲ್ಲಿ ಹಣದ ವಹಿವಾಟು ನಡೆಯುತ್ತಿಲ್ಲ. ಆದರೂ ಸರಾಸರಿ ಮಾರಾಟ ನಡೆಯುತ್ತಿದೆ. ಮೇ 4ಕ್ಕೆ ಹೋಲಿಸಿದರೆ ಶೇ.20ಕ್ಕಿಂತ ಹೆಚ್ಚು ಪ್ರಮಾಣ ಕಡಿಮೆಯಾಗಿದೆ. ಇನ್ನೂ ಬಾರ್‌ಗಳಲ್ಲಿ ಮಾರಾಟಕ್ಕೆ ಮೇ 18ರ ವರೆಗೆ ಅವಕಾಶ ನೀಡಿದ್ದು, ಅದನ್ನು ಮುಂದುವರಿಸಬೇಕೇ ಬೇಡವೆ ಎಂಬ ಬಗ್ಗೆ ಯಾವುದೇ ಸೂಚನೆ ಬಂದಿಲ್ಲ.
ಕೆ. ಪ್ರಶಾಂತ ಕುಮಾರ್,
ಅಬಕಾರಿ ಇಲಾಖೆ ಜಿಲ್ಲಾಧಿಕಾರಿ