Advertisement

ಎಲ್‌ಐಸಿ ಷೇರು ಮಾರಾಟ ಪ್ರಸ್ತಾವನೆ ಕೈಬಿಡಿ

12:30 PM Feb 05, 2020 | Naveen |

ರಾಯಚೂರು: ಕೇಂದ್ರ ಹಣಕಾಸು ಸಚಿವರು ಬಜೆಟ್‌ನಲ್ಲಿ ಜೀವ ವಿಮಾ ನಿಗಮ (ಎಲ್‌ಐಸಿ)ದ ಷೇರು ಮಾರಾಟ ಪ್ರಸ್ತಾವನೆ ಮಾಡಿರುವುದನ್ನು ವಿರೋಧಿಸಿ ಜೀವ ವಿಮಾ ನಿಗಮದ ನೌಕರರು ನಗರದ ವಿಭಾಗೀಯ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಮಾತನಾಡಿದ ಮುಖಂಡರು, ಎಲ್‌ಐಸಿಯ ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್‌ ಮಾಡುವ ಮತ್ತು ಸಂಸ್ಥೆಯ ಭಾಗಶಃ ಶೇರುಗಳನ್ನು ಮಾರಾಟ ಮಾಡುವ ಬಗ್ಗೆ ಸಚಿವರು ಉಲ್ಲೇಖೀಸಿದ್ದಾರೆ.

ಪ್ರಸ್ತುತ ಎಲ್‌ಐಸಿ ಶೇ. 100ರಷ್ಟು ಸರ್ಕಾರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಪಾಲಸಿದಾರರ ಮೂಲಕ ಸಂಗ್ರಹಿಸುವ ಸಣ್ಣ ಉಳಿತಾಯವು ದೊಡ್ಡ ಮೊತ್ತವಾಗಿದ್ದು, ದೇಶದ ಅಭಿವೃದ್ಧಿಗೆ ನೆರವಾಗುತ್ತಿದೆ. 68 ವರ್ಷಗಳಿಂದ ದೇಶದ ಅಭಿವೃದ್ಧಿಯಲ್ಲಿ ವಿಶೇಷ ಕೊಡುಗೆ ನೀಡುತ್ತಾ ಬಂದಿದೆ. ಪಂಚವಾರ್ಷಿಕ ಯೋಜನೆಗಳ ಜಾರಿಯಲ್ಲಿ ಎಲ್‌ಐಸಿ ಮೂಲಕ ಮೂಲ ಸೌಕರ್ಯಗಳ ಅಭಿವೃದ್ಧಿಗೆ ನೆರವು ಒದಗಿಸಲಾಗಿದೆ. ದೇಶದ ಜಿಡಿಪಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಎಲ್‌ಐಸಿ ಬೆಳವಣಿಗೆ ಆಗುತ್ತಿದೆ. ಕಳೆದ ಆರು ತಿಂಗಳಲ್ಲಿ ಎಲ್‌ಐಸಿ ಸಾಧಿಸಿರುವ ಪ್ರಗತಿಯಿಂದಾಗಿ ಆರ್ಥಿಕ ಸಂಕಷ್ಟದಲ್ಲಿದ್ದ ಸರ್ಕಾರವನ್ನು ಉತ್ತಮಗೊಳಿಸುವುದಕ್ಕೆ ಸಾಧ್ಯವಾಗಿದೆ ಎಂದರು.

ವಿಮಾ ಉದ್ಯಮದಲ್ಲಿ ಶೇ. 73ರಷ್ಟು ಪಾಲುದಾರಿಕೆ ಹೊಂದಿರುವ ಹಾಗೂ ಗಮನಾರ್ಹ ಸಾಧನೆ ಮಾಡುತ್ತಿರುವ ಸರ್ಕಾರಿ ಸಂಸ್ಥೆಯನ್ನು ಖಾಸಗಿ ಪಾಲುದಾರರಿಗೆ ಕೊಡುತ್ತಿರುವುದು ಸರಿಯಲ್ಲ. ಸಾರ್ವಜನಿಕರ ವಿಶ್ವಾಸದಿಂದ ಬೆಳೆದು ಬಂದಿರುವ ಸಂಸ್ಥೆಯನ್ನು ಖಾಸಗೀಕರಣ ಮಾಡುವುದರಿಂದ ಆಗುವ ಪರಿಣಾಮವನ್ನು ನೋಡಬೇಕು ಎಂದು ಆಗ್ರಹಿಸಿದರು.

ಪ್ರಾರಂಭದಲ್ಲಿ ಸರ್ಕಾರದ ಬಂಡವಾಳ 100 ಕೋಟಿ ಇತ್ತು. ಇಲ್ಲಿಯವರೆಗೆ 2,611 ಕೋಟಿ ಲಾಭಾಂಶವನ್ನು ಸರ್ಕಾರಕ್ಕೆ ನೀಡಿದೆ. ಕೇಂದ್ರ ಸರ್ಕಾರವು ಮಂಡಿಸುವ ಬಜೆಟ್‌ ಅನುಷ್ಠಾನಕ್ಕೆ ಎಲ್‌ ಐಸಿಯಿಂದ ಶೇ. 25 ರಷ್ಟು ಅನುದಾನ ಪಡೆದುಕೊಳ್ಳುತ್ತ ಬಂದಿದೆ. ವಿಶ್ವಾಸದಿಂದ ಮುಂದೆ ಸಾಗುತ್ತಿರುವ ಸರ್ಕಾರಿ ಸಂಸ್ಥೆಯಿಂದ ಬಂಡವಾಳ ಹಿಂತೆಗೆತ ಮಾಡುವ ಕ್ರಮ ಕೈಬಿಡಬೇಕು. ಬಜೆಟ್‌ ನಲ್ಲಿ ಘೋಷಿಸಿರುವ ಪ್ರಸ್ತಾವನೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

Advertisement

ಎಲ್‌ಐಸಿ ನೌಕರರ ಸಂಘದ ಎಂ.ರವಿ, ಗುರುರಾಜ, ಸೀತಾರಾಮ ಕಟ್ಟಿಮನಿ, ಎಂ.ಶರಣಗೌಡ, ಶ್ರೀಧರ, ಜಿ.ಲತಾಮ ಉಷಾ ಅವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next