ರಾಯಚೂರು: ಗ್ರಾಮೀಣ ಭಾಗದ, ಹಿಂದುಳಿದ ಬಡ ಮಕ್ಕಳಿಗೆ ಅನುಕೂಲವಾಗಲಿ ಎಂದು ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿ ಉಚಿತ ಲ್ಯಾಪ್‌ಟಾಪ್ ವಿತರಿಸುತ್ತಿದೆ. ವಿದ್ಯಾರ್ಥಿಗಳು ಲ್ಯಾಪ್‌ಟಾಪ್‌ನ್ನು ಉನ್ನತ ವ್ಯಾಸಂಗಕ್ಕೆ ಬಳಸಿಕೊಳ್ಳಬೇಕು ಎಂದು ನಗರ ಶಾಸಕ ಡಾ| ಶಿವರಾಜ ಪಾಟೀಲ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು. ಇಂದಿನ ಸ್ಮರ್ಧಾತ್ಮಕ ದಿನಗಳಲ್ಲಿ ಎಷ್ಟು ಅಧ್ಯಯನ ಮಾಡಿದರೂ ಕಡಿಮೆಯೇ ಎನ್ನುವಂತಿದೆ. ಹೀಗಾಗಿ ವಿದ್ಯಾರ್ಥಿಗಳು ಲ್ಯಾಪ್‌ಟಾಪ್‌ಗ್ಳನ್ನು ಐಎಎಸ್, ಕೆಎಎಸ್ ಹಾಗೂ ಐಬಿಪಿಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಬಳಸಿಕೊಳ್ಳಬೇಕು. ಬೇಕಾದ ಮಾಹಿತಿಯನ್ನು ಇದರಲ್ಲೇ ಪಡೆಯಬೇಕು. ಸ್ಪರ್ಧೆ ಎದುರಿಸಲು ಸನ್ನದ್ಧರಾಗಬೇಕು ಎಂದರು.
ಇಂದು ಸರ್ಕಾರಿ ಶಾಲಾ ಕಾಲೇಜುಗಳು ಯಾವುದೇ ಖಾಸಗಿ ಸಂಸ್ಥೆಗಳಿಗೆ ಕಡಿಮೆಯಿಲ್ಲ ಎನ್ನುವಂತೆ ಪೈಪೋಟಿ ನೀಡಬೇಕಿದೆ. ಆ ದಿಸೆಯಲ್ಲಿ ಸರ್ಕಾರ ಕೋಟ್ಯಂತರ ರೂ. ವ್ಯಯಿಸುತ್ತಿದೆ. ಆದರೆ, ಕಟ್ಟಡ ನಿರ್ಮಾಣ, ಸೌಲಭ್ಯಗಳ ಹೆಚ್ಚಿಸುವಿಕೆಗಾಗಿ ಮಾತ್ರ ಅನುದಾನ ವಿನಿಯೋಗಿಸದೆ ಜ್ಞಾನ ಹಾಗೂ ಕೌಶಲಾಭಿವೃದ್ಧಿಗೂ ನೀಡಲಾಗುತ್ತಿದೆ. ಇಂಥ ಸೌಲಭ್ಯ ಪಡೆಯುವ ವಿದ್ಯಾರ್ಥಿಗಳು ಸರ್ಕಾರಿ ಸೇರಿ ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಪಡೆಯಬೇಕು ಎಂದು ತಿಳಿಸಿದರು.
ಕಾಲೇಜಿನ ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ| ಜೆ.ಎಲ್. ಈರಣ್ಣ ಮಾತನಾಡಿ, ಅತಿ ಹೆಚ್ಚು ವಿದ್ಯಾರ್ಥಿಗಳಿರುವ ರಾಜ್ಯದ ಕೆಲವೇ ಕೆಲವು ಸರ್ಕಾರಿ ಪದವಿ ಕಾಲೇಜುಗಳಲ್ಲಿ ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜೂ ಒಂದು. ನುರಿತ ಸಿಬ್ಬಂದಿ ಹಾಗೂ ಗುಣಮಟ್ಟದ ಶಿಕ್ಷಣ ಇರುವ ಕಾರಣ ಜಿಲ್ಲೆಯ ಬಹುತೇಕ ವಿದ್ಯಾರ್ಥಿಗಳು ಪ್ರತಿವರ್ಷ ನಮ್ಮಲ್ಲಿ ದಾಖಲಾಗುತ್ತಿದ್ದಾರೆ. ಅಲ್ಲದೇ ಆಟೋಟಗಳು, ಶೈಕ್ಷಣಿಕ ಸ್ಪರ್ಧೆಗಳು, ವಿಚಾರ ಸಂಕಿರಣಗಳಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆಯುವ ಮೂಲಕ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಪ್ರಭಾರ ಪ್ರಾಚಾರ್ಯ ಆರ್.ಮಲ್ಲನಗೌಡ ಮಾತನಾಡಿ, ವಿದ್ಯಾರ್ಥಿನಿಯರು ಕೇವಲ ಪದವಿಗಳಿಗೆ ಮಾತ್ರ ಸೀಮಿತವಾಗದೆ ಉನ್ನತ ಸ್ಥಾನಮಾನ ಹೊಂದಬೇಕು ಎಂದರು. ನಗರಸಭೆ ಸದಸ್ಯ ಶರಣಬಸವ ಬಲ್ಲಟಗಿ, ಇಟಗಿ ಭೀಮಣ್ಣ, ಉಪನ್ಯಾಸಕರಾದ ಡಾ| ಎಂ. ಶಿವರಾಜಪ್ಪ, ಮಹಾಂತೇಶ ಅಂಗಡಿ, ಮಹಾದೇವಪ್ಪ, ಡಾ| ಶಿವಯ್ಯ ಹಿರೇಮಠ, ಡಾ| ಮಹೆಬೂಬ್‌ಅಲಿ, ಸೈಯ್ಯದ್ ಮಿನಾಜ್, ರವಿ, ಪುಷ್ಪಾ, ಸಪ್ನಾ, ವಿಜಯ ಸರೋದೆ, ಚಂದ್ರು ಗಬ್ಬೂರು ಇತರರಿದ್ದರು.