ರಾಯಚೂರು: ಭೂ ಒಡೆತನ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಮೀನಿಗೆ ದರ ನಿಗದಿಪಡಿಸುವ ಕುರಿತು ಜಮೀನು ಮಾಲೀಕರಿಂದ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡುವಂತೆ ಜಿಲ್ಲಾ ಧಿಕಾರಿ ಆರ್. ವೆಂಕಟೇಶಕುಮಾರ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ 2018-19 ಮತ್ತು 2019-20ನೇ ಸಾಲಿನ ಭೂ ಒಡೆತನ ಯೋಜನೆಯ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಯೋಜನೆಯಡಿ ಫಲಾನುಭವಿಗಳ ಕುಟುಂಬದ ವಂಶಾವಳಿ ಪ್ರಮಾಣಪತ್ರ ಪಡೆಯಬೇಕು. ಫಲಾನುಭವಿಗಳ ಕುಟುಂಬಸ್ಥರಿಗೆ ಯಾವುದೇ ಜಮೀನು ಇಲ್ಲದಿರುವ ಬಗ್ಗೆ ತಹಶೀಲ್ದಾರ್‌ರಿಂದ ಜಮೀನು ಸರ್ವೇ ಮಾಡಿಸಿ ವರದಿ ನೀಡಬೇಕು. ಅರ್ಹ ಫಲಾನುಭವಿಗಳಿಗೆ ಒಂದು ಎಕರೆ ನೀರಾವರಿ ಭೂಮಿ ಅಥವಾ ಎರಡು ಎಕರೆ ಒಣ ಭೂಮಿ ಖರೀದಿಸಿ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ಸರ್ಕಾರ ಮತ್ತು ನಿಗಮದ ನಿಯಮಾನುಸಾರ ಹಾಗೂ ಮಾರ್ಗಸೂಚಿಗಳನ್ವಯ ಭೂಮಿ ಮಾರಾಟ ಮಾಡುವವರು ಅಥವಾ ಖರೀದಿಗೆ ಸಂಬಂಧಿ ಸಿ 31 ಅರ್ಜಿ ಸಲ್ಲಿಕೆಯಾಗಿವೆ. ಸುಮಾರು 151 ಎಕರೆ ಭೂಮಿಯನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು. ಕೇವಲ 20 ಗುಂಟೆ ಜಮೀನು ನೀಡಿದರೆ ಅದರಲ್ಲಿ ಏನೂ ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದ ನೀರಾವರಿಗೆ 1 ಎಕರೆ ಮತ್ತು ಖುಷ್ಕಿಗೆ 2 ಎಕರೆ ನೀಡಬೇಕೆಂದು ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧಿಕಾರಿಗೆ ಸೂಚಿಸಿದರು.
ಪ್ರತಿ ಜಮೀನುದಾರರಿಂದ ಭೂಮಿ ಖರೀದಿಸುವ ಬಗ್ಗೆ ಅಭಿಪ್ರಾಯ
ಸಂಗ್ರಹಿಸಿದರು. ಭೂಮಿಯನ್ನು ಯಾವ ಬೆಲೆಗೆ ಖರೀದಿಸಬೇಕು ಎಂದು ಜಿಲ್ಲಾ ಉಪನೋಂದಣಾಧಿಕಾರಿ ನೀಡುವ ವರದಿ ಮೇಲೆ ದರವನ್ನು ಮೂರು ಪಟ್ಟು ಹೆಚ್ಚಿಸಲಾಗುತ್ತದೆ. ಅಂತಿಮವಾಗಿ ದರ ನಿಗದಿಪಡಿಸುವುದು ಜಿಲ್ಲಾಧಿಕಾರಿ ವಿವೇಚನೆಗೆ ಬಿಡಲಾಗುವುದು ಎಂದು ವಿವರಿಸಿದರು.
ಸಹಾಯಕ ಆಯುಕ್ತ ಸಂತೋಷ ಕಾಮಗೌಡರ, ಲಿಂಗಸುಗೂರು ಸಹಾಯಕ ಆಯುಕ್ತ ದಿಲೀಪ್, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳು ಸೇರಿದಂತೆ ಇತರರಿದ್ದರು.