Advertisement

ಕಂದಾಯ ಇಲಾಖೆ ಲೋಪದಿಂದ ಅನ್ಯಾಯ

05:38 PM May 13, 2019 | Naveen |

ರಾಯಚೂರು: ಕಂದಾಯ ಇಲಾಖೆ ಲೋಪದೋಷದಿಂದ ಸರ್ಕಾರದಿಂದ ಮಂಜೂರಾದ ಭೂಮಿಯ ಫಲಾನುಭವಿಗೆ ಅನ್ಯಾಯವಾಗಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಫಲಾನುಭವಿಗೆ ನ್ಯಾಯ ಒದಗಿಸಲು ಮುಂದಾಗಬೇಕು ಎಂದು ಜೆಡಿಎಸ್‌ ಮುಖಂಡ ಬುಡ್ಡನಗೌಡ ಒತ್ತಾಯಿಸಿದರು.

Advertisement

ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಸೀಮಾಂತರ ಸರ್ವೆ ನಂಬರ್‌ 896ಬಿ ನಲ್ಲಿರುವ ಮೂರು ಎಕರೆ ಭೂಮಿಯನ್ನು 1981ರಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಸಾವಿತ್ರಮ್ಮ ಸೂಗುರಯ್ಯ ಎಂಬುವರರಿಗೆ ಮಂಜೂರು ಮಾಡಲಾಗಿತ್ತು. ಆದರೆ, 2015ರಲ್ಲಿ ಭೂಮಿಯನ್ನು ಸರ್ವೇ ನಡೆಸಿದಾಗ ತಪ್ಪಾಗಿ ಸರ್ವೇ ನಂಬರ್‌ ಭೂಮಿ ನಿಮ್ಮದಲ್ಲವೆಂದು ಫಲಾನುಭವಿಗಳಿಂದ ವಶಪಡಿಸಿಕೊಂಡಿದ್ದಾರೆ. ಆದರೂ ಇಲ್ಲಿಯವರೆಗೂ ಸಾವಿತ್ರಮ್ಮ ಕುಟುಂಬಕ್ಕೆ ನ್ಯಾಯ ದೊರಕಿಲ್ಲ ಎಂದು ಆರೋಪಿಸಿದರು.

ಕಳೆದ 30ವರ್ಷಗಳಿಂದಲೂ ಈ ಭೂಮಿಯಲ್ಲಿ ಸಾವಿತ್ರಮ್ಮನವರು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಆದರೆ, ಕಂದಾಯ ಇಲಾಖೆಯ ಅಧಿಕಾರಿಗಳು ನಿಮ್ಮದಲ್ಲವೆಂದು ಹೇಳುತ್ತಿದ್ದಾರೆ. ಅಲ್ಲದೇ ತಪ್ಪಾದ ಭೂಮಿಯನ್ನು ಕಂದಾಯ ಇಲಾಖೆ ನೀಡಿದೆ ಎಂದು ವಿವರಣೆ ನೀಡುತ್ತಿದ್ದಾರೆ ಎಂದು ಹೇಳಿದರು.

ಸಾವಿತ್ರಮ್ಮನವರು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಕಲ್ಮಲಾ ತಿಂಥಣಿ ಬ್ರಿಜ್‌ವರೆಗಿನ ರಸ್ತೆ ನಿರ್ಮಾಣ ಗುತ್ತಿಗೆ ಪಡೆದ ಪಟೇಲ್ ಇಂಜಿನಿಯರಿಂಗ್‌ ಸಂಸ್ಥೆಗೆ ಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ. ಉಳಿದ ಭೂಮಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಆಪಾದಿಸಿದರು.

ಸಾಗುವಳಿ ಮಾಡುತ್ತಿರುವ ಭೂಮಿಯಲ್ಲಿ ಕಲ್ಲು ಗಣಿಗಾರಿಕೆ ಮಾಡಲಾಗುತ್ತಿದೆ. ಇದರಿಂದ ಭೂಮಿಯು ಮೂಲ ಸ್ವರೂಪ ಕಳೆದುಕೊಂಡಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸಾವಿತ್ರಮ್ಮ ಕುಟುಂಬಕ್ಕೆ ಜಿಲ್ಲಾಡಳಿತವೇ ಸಮಸ್ಯೆಗೀಡು ಮಾಡಿದೆ. ಸ್ಪಷ್ಟ ಮಾಹಿತಿಯನ್ನು ಹೊಂದದ ಕಂದಾಯ ಇಲಾಖೆಯೇ ನೇರ ಹೊಣೆಯಾಗಿದೆ. ಆದರೂ ಸಾವಿತ್ರಮ್ಮನವರ ಹೆಸರು ಪ್ರಸ್ತುತ ಪಹಣಿಯಲ್ಲಿದೆ. ಅವರು ಇದೇ ಭೂಮಿಯ ಪಹಣಿಯ ಆಧಾರದ ಮೇಲೆ ಸಾಲವನ್ನು ಪಡೆದುಕೊಂಡಿದ್ದಾರೆ ಎಂದು ಅವರು ವಿವರಿಸಿದರು.

ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯ ಪ್ರವೇಶಿಸಿ ಸಾವಿತ್ರಮ್ಮ ಕುಟುಂಬಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ನೊಂದ ಫಲಾನುಭವಿ ಸಾವಿತ್ರಮ್ಮ, ಜಗನ್ನಾಥ ಸುಂಕಾರಿ,ಆಂಜನೇಯ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next