ರಾಯಚೂರು: ಜಿಲ್ಲೆಯಲ್ಲಿ ಹೋಮ್ ಕ್ವಾರಂಟೈನ್‌ಗೆ ಒಳಪಟ್ಟವರ ಆರೋಗ್ಯವನ್ನು ನಿತ್ಯ ತಪಾಸಣೆಗೆ ಒಳಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ಎಸ್. ಪ್ರಸನ್ನಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಕೋವಿಡ್-19 ಕುರಿತ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಶಾ ಕಾರ್ಯಕರ್ತೆಯರು ಕೋವಿಡ್ ಶಂಕಿತರ ಆರೋಗ್ಯದ ಮೇಲ್ವಿಚಾರಣೆ ನಡೆಸಬೇಕು. ಆರೋಗ್ಯ ಕಾರ್ಯಕರ್ತರು ನಿತ್ಯ ಭೇಟಿ ನೀಡಿ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. 65 ವರ್ಷ ಮೇಲ್ಪಟ್ಟ ಶಂಕಿತ, ಸೋಂಕಿತರ ಆರೋಗ್ಯದ ಮೇಲೆ ವಿಶೇಷ ಕಾಳಜಿ ವಹಿಸಬೇಕು. ವಿಶೇಷ ಆರೋಗ್ಯ ತಂಡ ಕಟ್ಟಿಕೊಂಡು ಮೇಲಿಂದ ಮೇಲೆ ಆರೋಗ್ಯ ತಪಾಸಣೆ ಮಾಡುವಂತೆ ತಿಳಿಸಿದರು.
ತಜ್ಞ ವೈದ್ಯರು ಆ ತಂಡದಲ್ಲಿರಬೇಕು. ತೀವ್ರ ಉಸಿರಾಟದ ತೊಂದರೆ ಇರುವವರು ಕೋವಿಡ್-19ಗೆ ಬಲಿಯಾಗುತ್ತಿದ್ದು, ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ವರದಿಯನ್ನು ಕಳುಹಿಸಬೇಕು. ಜಿಲ್ಲೆಯಲ್ಲಿರುವ ಕಂಟೈನ್ಮೆಂಟ್ ವಲಯಗಳಲ್ಲಿ ಪೊಲೀಸರು ಸೂಕ್ತ ಭದ್ರತೆ ಒದಗಿಸಬೇಕು ಎಂದರು. ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ 4100 ಕೋವಿಡ್ ಬೆಡ್‌ಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ತಾಲೂಕಿನಲ್ಲಿ 5 ವಸತಿ ನಿಲಯಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಡಿಸಿ ಆರ್. ವೆಂಕಟೇಶಕುಮಾರ ಮಾತನಾಡಿದರು. ಸಹಕಾರಿ ಇಲಾಖೆಯಿಂದ ಜಿಲ್ಲೆಯ 1030 ರೈತರಿಗೆ ಸಾಲ ನೀಡುವ ಪ್ರಕ್ರಿಯೆ ಬಾಕಿ ಉಳಿದಿದ್ದು, ಕೂಡಲೇ ಸಾಲ ಸೌಲಭ್ಯವನ್ನು ಒದಗಿಸಬೇಕು. ಜಿಲ್ಲೆಯ 2.4 ಲಕ್ಷ ಜನರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಬೇಕಿದ್ದು, 1,07,550 ರೈತರು ನೋಂದಾಯಿಸಿಕೊಂಡಿದ್ದಾರೆ. ಉಳಿದವರನ್ನು ಈ ಯೋಜನೆಯಡಿ ನೋಂದಾಯಿಸಲು ಕ್ರಮ ಕೈಗೊಳ್ಳುವಂತೆ ಸಹಕಾರ ಸಂಘಗಳ ಉಪನಿಬಂಧಕರಿಗೆ ಕಾರ್ಯದರ್ಶಿ ಸೂಚಿಸಿದರು. ಜಿಪಂ ಸಿಇಒ ಲಕ್ಷ್ಮೀಕಾಂತ್ ರೆಡ್ಡಿ, ಎಸ್‌ಪಿ ಡಾ| ಸಿ.ಬಿ.ವೇದಮೂರ್ತಿ, ಎಡಿಸಿ ದುರುಗೇಶ, ಲಿಂಗಸುಗೂರು ಎಸಿ ರಾಜಶೇಖರ ಡಂಬಳ ಸೇರಿ ವಿವಿಧ ಇಲಾಖೆ ಅಧಿಕಾರಿಗಳಿದ್ದರು.
ಉಸ್ತುವಾರಿ ಕಾರ್ಯದರ್ಶಿ ನಿವೃತ್ತಿ-ಬೀಳ್ಕೊಡುಗೆ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಎಸ್. ಪ್ರಸನ್ನಕುಮಾರ ಸೇವೆಯಿಂದ ವಯೋ ನಿವೃತ್ತಿ ಹೊಂದುತ್ತಿರುವ ಪ್ರಯುಕ್ತ ಜಿಲ್ಲಾಡಳಿತದಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಸನ್ನಕುಮಾರ, ಕೋವಿಡ್ ವೈರಸ್ ಸಮುದಾಯದ ಮಧ್ಯೆ ಹರಡದಂತೆ ತಡೆಯುವಲ್ಲಿ ಜಿಲ್ಲಾಡಳಿತದ ಶ್ರಮ ಶ್ಲಾಘನೀಯ. ಲಾಕ್‌ಡೌನ್ ನಿಯಮಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.