Advertisement

ಖಾತ್ರಿಯಡಿ ವೈಯಕ್ತಿಕ ಕಾಮಗಾರಿಗಳಿಗೆ ಒತ್ತು

03:12 PM Apr 23, 2020 | Naveen |

ರಾಯಚೂರು: ಕೋವಿಡ್ ಲಾಕ್‌ ಡೌನ್‌ ಮಧ್ಯೆಯೂ ಜಿಲ್ಲೆಯಲ್ಲಿ ಹಂತ ಹಂತವಾಗಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಜಿಲ್ಲೆಯ ವಿವಿಧ ಪಂಚಾಯಿತಿ ವ್ಯಾಪ್ತಿಯಲ್ಲಿ 15 ಸಾವಿರಕ್ಕೂ ಅಧಿಕ ಜನ ಕೆಲಸದಲ್ಲಿ ತೊಡಗಿದ್ದಾರೆ.

Advertisement

ಲಾಕ್‌ಡೌನ್‌ನಿಂದ ದುಡಿಯುವ ವರ್ಗ ಕೆಲಸವಿಲ್ಲದೆ ಕಂಗಾಲಾಗಿದೆ. ಜತೆಗೆ ಸುಮಾರು 50 ಸಾವಿರಕ್ಕೂ ಅಧಿಕ ಜನ ಗುಳೆ ಹೋದವರು ಹಿಂದಿರುಗಿ ಬಂದಿದ್ದಾರೆ. ಅವರಿಗೆಲ್ಲ ಕೆಲಸ ಇಲ್ಲದ ಕಾರಣಕ್ಕೆ ಕುಟುಂಬ ನಿರ್ವಹಣೆ ಸವಾಲು ಎದುರಾಗಿತ್ತು. ಇದನ್ನರಿತ ಸರ್ಕಾರ ಕೆಲ ಮಾನದಂಡ ಆಧಾರದಡಿ ಕೆಲಸ ನೀಡುತ್ತಿದೆ. ಈ ಯೋಜನೆಯನ್ನು ರಾಯಚೂರು ಜಿಲ್ಲೆ ಹಿಂದೆ ಸಮರ್ಪಕವಾಗಿ ಬಳಸಿಕೊಂಡಿದೆ. ಕಳೆದ ವರ್ಷ 1.10 ಕೋಟಿ ಮಾನವ ದಿನಗಳ ಸೃಜನೆ ಗುರಿ ಇದ್ದರೆ, ಜಿಲ್ಲೆಯಲ್ಲಿ 1.11 ಕೋಟಿಯಷ್ಟು ಸೃಜಿಸಿ ನಿರೀಕ್ಷಿತ ಗುರಿ ದಾಟಿತ್ತು. ಈ ಆರ್ಥಿಕ ವರ್ಷ ಆರಂಭದಲ್ಲೇ ಕೊರೊನಾ ಹಾವಳಿ ಶುರುವಾಗಿ ಖಾತ್ರಿ ಯೋಜನೆಯೂ ಸ್ಥಗಿತಗೊಂಡಿತ್ತು.

ತಾಂತ್ರಿಕ ಸಮಸ್ಯೆ: ಖಾತ್ರಿಯಡಿ ಮಾಡಿದ ಕೆಲಸದ ದೈನಂದಿನ ವರದಿ ದಾಖಲಿಸಲು ಸಾಫ್ಟ್ವೇರ್‌ ಸಮಸ್ಯೆ ಎದುರಾಗಿದೆ. ಲಾಕ್‌ಡೌನ್‌ ಪರಿಣಾಮ ಕೇಂದ್ರ ಸರ್ಕಾರ ಕೆಲಸಗಾರರಿಗೆ ರಜೆ ನೀಡಿದ್ದರಿಂದ ಸರ್ವರ್‌ ನಿರ್ವಹಣೆ ಆಗುತ್ತಿಲ್ಲ. ಇದರಿಂದ ಇಲ್ಲಿ ಮಾಡಿದ ಕೆಲಸದ ವಿವರವನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗುತ್ತಿಲ್ಲ. ಇದರಿಂದ ಅಧಿಕಾರಿಗಳಿಗೆ ಗೊಂದಲ ಎದುರಾಗಿದೆ. ಇದೇ ಕಾರಣಕ್ಕೆ ಸಾಕಷ್ಟು ಪಂಚಾಯಿತಿಗಳು ಇನ್ನೂ ಕೆಲಸವನ್ನೆ ಆರಂಭಿಸಿಲ್ಲ. ಒಂದೆರಡು ದಿನಗಳಲ್ಲಿ ಸರ್ವರ್‌ ಸಮಸ್ಯೆ ನೀಗಲಿದ್ದು, ಎಲ್ಲ ಕಡೆ ಕೆಲಸ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವೈಯಕ್ತಿಕ ಕೆಲಸಕ್ಕೆ ಆದ್ಯತೆ: ಕೋವಿಡ್ ವೈರಸ್‌ ಹರಡಬಾರದು ಎಂಬ ಕಾರಣಕ್ಕೆ ಸಮೂಹ ಕೆಲಸಗಳನ್ನು ಕಡಿಮೆ ಮಾಡಿ ವೈಯಕ್ತಿಕ ಕೆಲಸಗಳಿಗೆ ಆದ್ಯತೆ ನೀಡಲಾಗುತ್ತಿದೆ. ಬಚ್ಚಲು ನೀರಿನ ಹೊಂಡ, ಅಂಗನವಾಡಿ ಕೋಣೆ, ಅಡುಗೆ ಕೋಣೆ, ಹೊಲಗಳಲ್ಲಿ ಬದುವು, ಕಾಂಪೌಂಡ್‌ ನಿರ್ಮಾಣ, ಅರಣ್ಯೀಕರಣಕ್ಕೆ ಗುಂಡಿ ಅಗೆಯುವಂಥ ಕೆಲಸ ಮಾಡಿಸಲಾಗುತ್ತಿದೆ. ಅಲ್ಲಲ್ಲಿ ಕೆರೆ ಹೂಳೆತ್ತುವ ಕಾರ್ಯ ನಡೆಸುತ್ತಿದ್ದರೂ ಕಾರ್ಮಿಕರಿಗೆ ಅಂತರ ಕಾಯ್ದುಕೊಳ್ಳಲು ತಿಳಿಸಲಾಗುತ್ತಿದೆ.

24 ಗಂಟೆಯೊಳಗೆ ಜಾಬ್‌ ಕಾರ್ಡ್‌
ಲಾಕ್‌ಡೌನ್‌ ಶುರುವಾದ ಮೇಲೆ ಜಿಲ್ಲೆಯಿಂದ ಗುಳೆ ಹೋಗಿದ್ದ 50 ಸಾವಿರಕ್ಕೂ ಅಧಿಕ ಜನ ಹಿಂದಿರುಗಿದ್ದಾರೆ. ಇವರೆಲ್ಲ ಹೊಟ್ಟೆಪಾಡಿಗಾಗಿ ದುಡಿಯಲು ಹೋದವರು. ಕೆಲವರಿಗೆ ಮಾತ್ರ ಜಾಬ್‌ ಕಾರ್ಡ್‌ಗಳಿಗೆ. ಹೀಗಾಗಿ ಅರ್ಜಿ ನೀಡಿದ 24ರಿಂದ 48 ಗಂಟೆಯೊಳಗೆ ಜಾಬ್‌ ಕಾರ್ಡ್‌ ವಿತರಿಸಬೇಕು ಎಂದು ಎಲ್ಲ ಪಿಡಿಒಗಳಿಗೆ ನಿರ್ದೇಶನ ನೀಡಿದ್ದು, ಸಾಕಷ್ಟು ಜನ ಅರ್ಜಿ ಸಲ್ಲಿಸುತ್ತಿದ್ದಾರೆ.

Advertisement

ನರೇಗಾದಡಿ ಕಳೆದ ವರ್ಷ ನಿರೀಕ್ಷಿತ ಗುರಿ ತಲುಪಲಾಗಿತ್ತು. ಈ ವರ್ಷ ಕೂಡ 85 ಲಕ್ಷ ಮಾನವ ದಿನಗಳ ಸೃಜನೆ ಗುರಿ ಇದೆ. ಹಂತ ಹಂತವಾಗಿ ನರೇಗಾ ಯೋಜನೆ ಅನುಷ್ಠಾನ ಮಾಡುತ್ತಿದ್ದೇವೆ. ಅರ್ಜಿ ಸಲ್ಲಿಸಿದವರಿಗೆ ಕಡ್ಡಾಯವಾಗಿ ಜಾಬ್‌ ಕಾರ್ಡ್‌ ನೀಡಲು ಸೂಚನೆ ನೀಡಲಾಗಿದೆ.
ಲಕ್ಷ್ಮೀಕಾಂತರೆಡ್ಡಿ, ಜಿಪಂ
ಸಿಇಒ, ರಾಯಚೂರು

ಸಿದ್ದಯ್ಯ ಸ್ವಾಮಿ ಕೂಕುನೂರು

Advertisement

Udayavani is now on Telegram. Click here to join our channel and stay updated with the latest news.

Next