ರಾಯಚೂರು: ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆ ಮೇಲೆ ನಡೆದ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದ್ದ ಮುಷ್ಕರಕ್ಕೆ ಜಿಲ್ಲೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಶುಕ್ರವಾರ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ಸೇವೆ ಸ್ಥಗಿತಗೊಳಿಸಿದ್ದರಿಂದ ರೋಗಿಗಳು ಪರದಾಡಿದ ಪ್ರಸಂಗ ನಡೆಯಿತು.
ಬೆಳಗ್ಗೆಯಿಂದ ಆರು ಗಂಟೆಯಿಂದಲೇ ಸೇವೆ ಸ್ಥಗಿತಗೊಳಿಸಿದ ಆಸ್ಪತ್ರೆಗಳು, ತುರ್ತು ಸೇವೆ ಮಾತ್ರ ನೀಡಿದವು. ಆದರೆ, ಮುಷ್ಕರದ ಮಾಹಿತಿ ಇಲ್ಲದೇ ಗ್ರಾಮೀಣ ಭಾಗದಿಂದ ಬಂದ ನೂರಾರು ರೋಗಿಗಳು ಸಕಾಲಕ್ಕೆ ಚಿಕಿತ್ಸೆ ಸಿಗದೆ ಪರದಾಡಿದ ಪ್ರಸಂಗ ನಡೆಯಿತು. ಕ್ಲಿನಿಕ್‌ಗಳ ಮುಂದೆ ಗಂಟೆಗಟ್ಟಲೇ ಕಾದು ಕುಳಿತಿದ್ದ ದೃಶ್ಯ ಕಂಡು ಬಂತು.
ಘಟನೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದ್ದು, ಬೆಂಗಳೂರಿನ ಮಿಂಟೋ ಆಸ್ಪತ್ರೆ ಕಿರಿಯ ವೈದ್ಯೆ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಲ್ಲೆ ನಡೆಸಿರುವುದು ಖಂಡನೀಯ.
ಇದರಿಂದ ವೈದ್ಯರು ಮುಕ್ತವಾಗಿ ಸೇವೆ ನೀಡುವುದೇ ಕಷ್ಟ ಎನ್ನುವ ಪರಿಸ್ಥಿತಿ ಬಂದೊದಗಿದೆ ಎಂದು ದೂರಿದ್ದಾರೆ. ಇಂತಹ ಘಟನೆಗಳು ವೈದ್ಯರ ಮನಸಿನ ಮೇಲೆ ಘಾಡವಾದ ಪ್ರಭಾವ ಬೀರುತ್ತಿದ್ದು,ಆತ್ಮಸ್ಟೈರ್ಯ ಕಳೆದುಕೊಳ್ಳುತ್ತಿದ್ದಾರೆ. ವೈದ್ಯರು ಮುಕ್ತವಾಗಿ ಸೇವೆ ನೀಡಲು ಹಿಂಜರಿಯುವಂತಾಗಿದೆ. ಹಲ್ಲೆ ನಡೆಸುವವರ ವಿರುದ್ಧ ಕ್ರಮ ಜರುಗಿಸಬೇಕು. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಲು ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.