ರಾಯಚೂರು: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಜ.23ರಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ ಜಿಲ್ಲಾ ಗೌರವಾಧ್ಯಕ್ಷ ಪರಮೇಶ್ವರ ಸಾಲಿಮಠ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯ ಪ್ರಜ್ಞೆ ಬೆಳೆಸಬೇಕು. ಚಿಕ್ಕ ವಯಸ್ಸಿನಲ್ಲಿಯೇ ಅವರಲ್ಲಿ ಅಡಗಿದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಬೇಕು ಎನ್ನುವ ಕಾರಣಕ್ಕೆ ನಗರದಲ್ಲಿ ಮೊದಲ ಬಾರಿಗೆ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಮಾನ್ವಿ ಕಲ್ಮಠ ಪದವಿ ಪೂರ್ವ ಕಾಲೇಜಿನ ಭಾರ್ಗವಿ ದೇಸಾಯಿ ಅವರನ್ನು ಸಮ್ಮೇಳನಾಧ್ಯಕ್ಷೆಯನ್ನಾಗಿ ಆಯ್ಕೆ ಮಾಡಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಅಯ್ಯಪ್ಪಯ್ಯ ಹುಡಾ ಅವರನ್ನು ಆಯ್ಕೆ ಮಾಡಲಾಗಿದೆ.
ಸಮ್ಮೇಳನದ ಸಹ ಅಧ್ಯಕ್ಷರ್‍ನಾಗಿ ಕವಿತಾಳದ ಬಸಲಿಂಗಪ್ಪ, ಬಾಯಿದೊಡ್ಡಿಯ ಸವಾರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ವೇದಿಕೆಗೆ ಶ್ರೀ ಸಿದ್ಧಯ್ಯ ಪುರಾಣಿಕರ ಹೆಸರಿಡಲಾಗಿದೆ ಎಂದು ವಿವರಿಸಿದರು.
ಮೊದಲ ಬಾರಿಗೆ ಹಮ್ಮಿಕೊಂಡ ಕಾರ್ಯಕ್ರಮ ಇದಾಗಿದ್ದು, ಒಂದೇ ದಿನಕ್ಕೆ ಸೀಮಿತಗೊಳಿಸಲಾಗಿದೆ. ಅಂದು ಬೆಳಗ್ಗೆ 9ಕ್ಕೆ ನಗರದ ಡಾ| ಅಂಬೇಡ್ಕರ್ ವೃತ್ತದಿಂದ ರಂಗಮಂದಿರದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಮೆರವಣಿಗೆಗೆ ನಗರ ಶಾಸಕ ಡಾ| ಶಿವರಾಜ ಪಾಟೀಲ ಚಾಲನೆ ನೀಡುವರು. ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಧಾರವಾಡದ ಕಾದಂಬರಿಕಾರ ಡಾ| ಬಸು ಬೇವಿನ ಗಿಡದ ಉದ್ಘಾಟಿಸುವರು. ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಗಾಯಕಿ ಸೋಮನಮರಡಿಯ ಮೋನಮ್ಮ, ಪ್ರಧಾನಿ ಜತೆ ಚಂದ್ರಯಾನ ವೀಕ್ಷಿಸಿದ ವೈಷ್ಣವಿ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ಆಯ್ಕೆ ಮಾಡಲಾಗಿದೆ. ಸಂಸದರಾದ ರಾಜಾ ಅಮರೇಶ್ವರ ನಾಯಕ, ಸಂಗಣ್ಣ ಕರಡಿ, ಶಾಸಕರಾದ ಡಾ| ಶಿವರಾಜ ಪಾಟೀಲ, ದದ್ದಲ್ ಬಸವನಗೌಡ, ಕೆ.ಶಿವನಗೌಡ ನಾಯಕ, ವೆಂಕಟರಾವ್ ನಾಡಗೌಡ, ರಾಜಾ ವೆಂಕಟಪ್ಪ ನಾಯಕ, ಡಿ.ಎಸ್.ಹೂಲಗೇರಿ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ
ಸೇರಿ ಇತರ ಗಣ್ಯರು ಆಗಮಿಸುವರು ಎಂದು ತಿಳಿಸಿದರು.
ಮಕ್ಕಳೇ ಪ್ರತಿಯೊಂದು ಚಟುವಟಿಕೆ ನಿರ್ವಹಣೆ ಮಾಡುವುದು ಈ ಸಮ್ಮೇಳನದ ವಿಶೇಷತೆ. ವಿಚಾರಗೋಷ್ಠಿ, ಕವಿಗೋಷ್ಠಿ, ಚಿತ್ರಕಲಾ ಪ್ರದರ್ಶನ, ಕವನ ಸಂಕಲನ ಬಿಡುಗಡೆ, ಮಕ್ಕಳ ಕಥಾ ಸಂಕಲನ ಲೋಕಾರ್ಪಣೆ ಸೇರಿದಂತೆ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಶಿಕ್ಷಕರಿಗೆ ಒಂದು ದಿನ ರಜೆ ನೀಡಲು ಶಿಕ್ಷಣ ಇಲಾಖೆ ಸಮ್ಮತಿಸಿದೆ ಎಂದು ತಿಳಿಸಿದರು. ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಂಕರದೇವರು ಹಿರೇಮಠ, ಸದಸ್ಯರಾದ ವೆಂಕಟೇಶ, ಬ್ರಹ್ಮಾನಂದರೆಡ್ಡಿ, ಈರಣ್ಣ ಬೆಂಗಾಲಿ ಇತರರಿದ್ದರು.