ರಾಯಚೂರು: ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳ ನಿರ್ವಹಣೆ ಹೊಣೆ ಪಂಚಾಯತ್ ರಾಜ್ ಇಲಾಖೆಗೆ ವಹಿಸುತ್ತಿರುವುದು ಮೇಲ್ವಿಚಾರಕರ ಪಾಲಿಗೆ ಉಭಯ ಸಂಕಟ ತಂದೊಡ್ಡಿದೆ. ಇದು ಅನುಕೂಲವೋ, ಅನಾನುಕೂಲವೋ ಎಂಬ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದ್ದಾರೆ.
ಇಷ್ಟು ದಿನ ಜಿಲ್ಲಾ ಗ್ರಂಥಾಲಯಾಧಿಕಾರಿ ಮೂಲಕ ಗೌರವಧನ ಪಡೆಯುತ್ತಿದ್ದ ಮೇಲ್ವಿಚಾರಕರಿಗೆ ಏಪ್ರಿಲ್‌ನಿಂದ ಗ್ರಾಪಂಗಳೇ ಗೌರವಧನ ನೀಡುವ ಸಾಧ್ಯತೆ ಇದೆ. ಗ್ರಾಪಂಗಳಿಂದ ನಿರೀಕ್ಷಿತ ಆದಾಯ ಇಲ್ಲದ ಕಾರಣ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳು ಎರಡು ವರ್ಷದ ಹಿಂದೆಯೇ ಪಂಚಾಯತ್ ರಾಜ್ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಗ್ರಂಥಾಲಯಗಳ ಮೇಲ್ವಿಚಾರಣೆ ಹೊಣೆ ಪಂಚಾಯಿತಿಗಳಿಗೆ ನೀಡಬೇಕು. ವೇತನವನ್ನು ಅಲ್ಲಿಂದಲೇ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದರು. ಅದರ ಪರಿಣಾಮ ಈಗ ಎಲ್ಲ ಗ್ರಂಥಾಲಯಗಳನ್ನು ಸಂಬಂಧಿಸಿದ ಪಂಚಾಯಿತಿಗಳಿಗೆ ಹಸ್ತಾಂತರಿಸುವ ಕೆಲಸ ನಡೆದಿದ್ದು, ರಾಜ್ಯದಲ್ಲಿ ಬಹುತೇಕ ಶೇ.80ರಷ್ಟು ಮಾಡಲಾಗಿದೆ.
ರಾಜ್ಯದಲ್ಲಿ 5766 ಪಂಚಾಯಿತಿಗಳಲ್ಲಿ ಈಗಾಗಲೇ ಗ್ರಂಥಾಲಯಗಳಿವೆ. ಇನ್ನೂ 400ಕ್ಕೂ ಅಧಿಕ ಗ್ರಂಥಾಲಯ ಸ್ಥಾಪನೆಗೆ ಪ್ರಸ್ತಾವನೆ ಇದೆ. ಪ್ರತಿ ಗ್ರಂಥಾಲಯಕ್ಕೂ ಒಬ್ಬ ಮೇಲ್ವಿಚಾರಕರಿದ್ದು, ನಿತ್ಯ ಬೆಳಗ್ಗೆ, ಸಂಜೆಯಂತೆ ದಿನಕ್ಕೆ ನಾಲ್ಕು ಗಂಟೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ 7 ಸಾವಿರ ರೂ. ಗೌರವಧನ ಹಾಗೂ ಅಗತ್ಯ ವಸ್ತುಗಳ ಖರೀದಿಗೆ 500, ಪತ್ರಿಕೆಗಳಿಗೆ 400 ಹಾಗೂ ಸ್ವತ್ಛತೆಗೆ 100 ರೂ. ನೀಡಲಾಗುತ್ತಿತ್ತು.
ತೆರಿಗೆ ಬಾಕಿ: ಪಂಚಾಯಿತಿಗಳಲ್ಲಿ ಸ್ಥಾಪಿತವಾದ ಗ್ರಂಥಾಲಯಗಳಿಗೆ ಹಣಕಾಸಿನ ಮುಗ್ಗಟ್ಟು ಎದುರಾಗಿದೆ. ಪಂಚಾಯಿತಿಗಳು ವಸೂಲಿ ಮಾಡುವ ತೆರಿಗೆಯಲ್ಲಿ ಶೇ.6ರಷ್ಟು ಗ್ರಂಥಾಲಯ ಕರ ಪಾವತಿಸಬೇಕು. ಒಟ್ಟು ಗ್ರಂಥಾಲಯ ಕರದಲ್ಲಿ ಶೇ.2ರಷ್ಟನ್ನು ಸೇವಾ ತೆರಿಗೆ ಕಡಿತ ಮಾಡಿ ಉಳಿದ ಹಣವನ್ನು ಗ್ರಂಥಾಲಯ ಇಲಾಖೆಗೆ ಪಾವತಿಸಬೇಕು. ಆದರೆ, ಈವರೆಗೂ ಯಾವುದೇ ಪಂಚಾಯಿತಿಗಳು ಈ ಕೆಲಸ ಮಾಡಿಲ್ಲ. ಜಿಲ್ಲೆಯಲ್ಲೇ ಕೋಟ್ಯಂತರ ರೂ. ಕರ ಬಾಕಿ ಉಳಿದಿದೆ. ಇದರಿಂದ ನಿರ್ವಹಣೆ ಸಂಕಷ್ಟ ಎದುರಾಗಿತ್ತು.
ಮೇಲ್ವಿಚಾರಕರಿಂದಲೇ ಅಪಸ್ವರ: ಕೇವಲ ಪಂಚಾಯತ್ ರಾಜ್ ಇಲಾಖೆಗೆ ಒಳಪಡಿಸುವುದಕ್ಕಿಂತ ಹಿಂದಿನಂತೆಯೇ ಮುಂದುವರಿಸುವುದು ಲೇಸು. ಅದಕ್ಕಿಂತ ಮುಖ್ಯವಾಗಿ ಸೇವೆ ಕಾಯಂಗೊಳಿಸಬೇಕು. ಕನಿಷ್ಟ ವೇತನ ನೀಡಬೇಕು ಎಂಬುದು ಮೇಲ್ವಿಚಾರಕರ ಪ್ರಮುಖ ಬೇಡಿಕೆ. ಆದರೆ, ಈಗಾಗಲೇ ಶೇ.80ರಷ್ಟು ಪಂಚಾಯಿತಿಗಳನ್ನು ಹಸ್ತಾಂತರಿಸಿದ್ದು, ಪಿಡಿಒ, ಇಒಗಳಿಂದ ಒಪ್ಪಿಗೆ ಕೂಡ ಪಡೆಯಲಾಗಿದೆ.
ಪಂಚಾಯಿತಿ ಹೆಸರು, ಕೆಲಸ ಮಾಡುವ ಸಿಬ್ಬಂದಿ, ಪುಸ್ತಕಗಳ ಸಂಖ್ಯೆ ಇತ್ಯಾದಿ ಮಾಹಿತಿಯನ್ನು ಆಯಾ ಪಂಚಾಯಿತಿ ಪಿಡಿಒಗಳಿಗೆ ಸಲ್ಲಿಸಲಾಗಿದೆ. ರಾಯಚೂರು ಜಿಲ್ಲೆಯಲ್ಲಿಯೇ 164
ಪಂಚಾಯಿತಿಗಳಿದ್ದು, ಶೇ.90ಕ್ಕಿಂತ ಹೆಚ್ಚು ಗ್ರಂಥಾಲಯಗಳನ್ನು ಹಸ್ತಾಂತರಿಸಲಾಗಿದೆ.