ರಾಯಚೂರು: ಗಬ್ಬೂರನ್ನು ತಾಲೂಕು ಕೇಂದ್ರವನ್ನಾಗಿ ಕೂಡಲೇ ಘೋಷಿಸಲು ಆಗ್ರಹಿಸಿ ಗಬ್ಬೂರು ತಾಲೂಕು ರಚನೆ ಹೋರಾಟ ಸಮಿತಿ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಗಬ್ಬೂರು ಹೋಬಳಿ ಕೇಂದ್ರವಾಗಿ ಗುರುತಿಸಿಕೊಂಡಿದ್ದು, ಶೈಕ್ಷಣಿಕ ಮತ್ತು ವಾಣಿಜ್ಯ ಕೇಂದ್ರವಾಗಿದೆ. ತಾಲೂಕು ಕೇಂದ್ರವನ್ನಾಗಿ ಮಾಡಿದರೆ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಕೂಡಲೇ ಗಬ್ಬೂರು ತಾಲೂಕು ಕೇಂದ್ರ ರಚಿಸಿ ಘೋಷಿಸಬೇಕೆಂದು ಆಗ್ರಹಿಸಿದರು.
ದೇವದುರ್ಗ ತಾಲೂಕಿನ ಗಬ್ಬೂರು ಅತ್ಯಂತ ದೊಡ್ಡ ಹೋಬಳಿಯಾಗಿದ್ದು, ಸುತ್ತಮುತ್ತಲಿನ ಗ್ರಾಮಗಳ ಜನರು ವ್ಯವಹಾರಕ್ಕಾಗಿ ಗಬ್ಬೂರಿಗೆ ಆಗಮಿಸುತ್ತಾರೆ. ಈ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 100ಕ್ಕೂ ಅಧಿಕ ಗ್ರಾಮಗಳನ್ನೊಳಗೊಂಡಿದೆ. ನಾಡಕಚೇರಿ, ಆರೋಗ್ಯಕೇಂದ್ರ, ರೈತ ಸಂಪರ್ಕ ಕೇಂದ್ರ, ಪಶು ಆಸ್ಪತ್ರೆ, ಸಹಕಾರ ಸಂಘಗಳು, ವಾಣಿಜ್ಯ ಕೇಂದ್ರಗಳು, ನೀರಾವರಿ ಪ್ರದೇಶ, ಪೊಲೀಸ್ ಠಾಣೆ, ಶಾಲಾ ಕಾಲೇಜುಗಳು ಸೇರಿ ಎಲ್ಲ ಸೌಲಭ್ಯಗಳನ್ನು ಹೊಂದಿದೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ. ಎಲ್ಲವೂ ಅನುಕೂಲಕರವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಶೈಕ್ಷಣಿಕ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಪದವಿ ಕಾಲೇಜು ಪ್ರಾರಂಭವಾಗಬೇಕು. ಪ್ರಾಥಮಿಕ ಶಾಲೆಯಿಂದ ಪದವಿವರೆಗೆ ಮಹಿಳಾ ಶಾಲಾ ಕಾಲೇಜು ಸ್ಥಾಪಿಸಬೇಕು, ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ವೈದ್ಯರು ಮತ್ತು ಸಿಬ್ಬಂದಿ ನೇಮಿಸಬೇಕು. ಎನ್‌ಆರ್‌ಬಿಸಿ 18ನೇ ಉಪ ಕಾಲುವೆಯಿಂದ ಕೆಳ ಭಾಗದ ಜಮೀನುಗಳಿಗೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಐತಿಹಾಸಿಕ ಪ್ರದೇಶವಾದ ಗಬ್ಬೂರನ್ನು ಪ್ರವಾಸಿ ತಾಣವಾಗಿ ಅಭಿವೃದ್ದಿಪಡಿಸಬೇಕು ಎಂದು ಆಗ್ರಹಿಸಿದರು.
ನೀರಾವರಿ, ಆರೋಗ್ಯ, ಶಿಕ್ಷಣ ಸೌಕರ್ಯಗಳನ್ನು ಕಲ್ಪಿಸಲು ಆಗ್ರಹಿಸಿ ಫೆ.28ರಿಂದ ಗಬ್ಬೂರು ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಕಾಲ್ನಡಿಗೆ ಜಾಥಾ ನಡೆಸಲಾಗುವುದು ಎಂದು ತಿಳಿಸಿದರು.
ಹೋರಾಟ ಸಮಿತಿ ಮುಖಂಡರಾದ ಮಲ್ಲಪ್ಪಗೌಡ ಮಾಲಿಪಾಟೀಲ, ಬೂದಯ್ಯಸ್ವಾಮಿ ಹಿರೇಮಠ, ಶಾಂತಕುಮಾರ, ಬೂದಯ್ಯಸ್ವಾಮಿ, ಚೆನ್ನಪ್ಪಗೌಡ ಕಾತರಕಿ, ರಾಮಣ್ಣಕುಣಿ, ಶಿವರಾಜ, ನರಸಪ್ಪ, ರಾಜಪ್ಪ, ಪ್ರಭಾಕರ ಪಾಟೀಲ, ಸಿದ್ದಣ್ಣ, ಮಹೆಬೂಬ್, ಶಿವಣ್ಣ, ಶಂಕರಗೌಡ, ರಾಜಪ್ಪ ಶಿರವಾರಕರ್, ಮಾರೆಪ್ಪ ಹೊನ್ನಟಗಿ, ಉಮ್ಮಣ್ಣ ನಾಯಕ, ಬಸವರಾಜ, ಮಹೇಶ, ಗೋಪಾಲ ಇತರರು ಇದ್ದರು.