ರಾಯಚೂರು: ಮುಂಬೈನಿಂದ ಬಂದವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಕೋವಿಡ್ ವೈರಸ್ ಸೋಂಕು ಸಮುದಾಯಕ್ಕೂ ಹರಡಿದಂತೆ ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ಗುರುವಾರ 88 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಜನರ ಆತಂಕ ಇಮ್ಮಡಿಗೊಳಿಸಿದೆ. ಅಚ್ಚರಿ ಎಂದರೆ ಗುರುವಾರ 76 ಜನರಲ್ಲಿ ಸಂಪರ್ಕದಿಂದಲೇ ಸೋಂಕು ಹರಡಿದೆ. ಸೋಂಕು ಹರಡಿದವರೆಲ್ಲ ಕ್ವಾರಂಟೈನ್‌ನಗಳಲ್ಲಿ ಉಳಿದಿದ್ದರು. ಪಿ 2939, ಪಿ 2936, ಪಿ 2641, ಪಿ 2608 ಹಾಗೂ ಪಿ 2612 ಸೋಂಕು ಹರಡಿದ್ದು, ಮಹರಾಷ್ಟ್ರದಿಂದ ಮರಳಿ ಬಂದವರಾಗಿದ್ದಾರೆ.
ಹಾಗಿದ್ದರೆ ಅವರಿಂದಲೇ ಉಳಿದವರಿಗೆ ಸೋಂಕು ಹರಡಿದೆಯೇ ಎಂಬ ಪ್ರಶ್ನೆ ಮೂಡಿದೆ. ಇನ್ನೂ ಪಿ 4096 ತೆಲಂಗಾಣದಿಂದ ಮರಳಿ ಬಂದಿದ್ದರೆ, ಪಿ 4097 ಸಾರಿ ಪ್ರಕರಣವಾಗಿದೆ. ಪಿ 4100 ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಉಳಿದ ಒಂಭತ್ತು ಜನ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಈವರೆಗೆ 356 ಒಟ್ಟು ಪ್ರಕರಣಗಳು ದೃಢಪಟ್ಟಂತಾಗಿದೆ. ಈವರೆಗೆ 37 ಜನರನ್ನು ಬಿಡುಗಡೆ ಮಾಡಿದ್ದು, 318 ಪ್ರಕರಣಗಳು ಸಕ್ರಿಯವಾಗಿವೆ. ಮುಂಬೈನಿಂದ ಬಂದ ಸೋಂಕಿತರನ್ನು ಉಳಿದವರೊಟ್ಟಿಗೆ ಒಂದೇ ಕ್ವಾರಂಟೈನ್‌ಗಳಲ್ಲಿ ಉಳಿಸುತ್ತಿರುವುದೇ ಈ ರೀತಿ ಪ್ರಕರಣಗಳ ಸಂಖ್ಯೆ ಹೆಚ್ಚಲು ಕಾರಣ ಎನ್ನಲಾಗುತ್ತಿದೆ. ಇನ್ನೂ ಪಶ್ಚಿಮ ಠಾಣೆ ಮೂವರು ಪೇದೆಗಳಿಗೂ ಸೋಂಕು ತಗುಲಿದೆ ಎನ್ನಲಾಗುತ್ತಿದೆ. ಕೃಷಿ ವಿವಿಯಲ್ಲಿ ಸ್ಥಾಪಿಸಿದ ಕ್ವಾರಂಟೈನ್ ಕೇಂದ್ರಕ್ಕೆ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಅಲ್ಲಿ ಮುಂಬೈನಿಂದ ಮರಳಿ ಬಂದವರನ್ನು ಉಳಿಸಲಾಗಿತ್ತು. ಅವರಿಂದ ಸೋಂಕು ಹರಡಿರುವ ಶಂಕೆ ವ್ಯಕ್ತಪಡಿಸಲಾಗುತ್ತಿದೆ. ಮೂವರು ಪೇದೆಗಳನ್ನು ಈಗ ಕ್ವಾರಂಟೈನ್ ಮಾಡಿದ್ದು, ಪಶ್ಚಿಮ ಠಾಣೆ ಸ್ವತ್ಛಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಪೇದೆಗಳಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಠಾಣೆ ಸ್ವತ್ಛಗೊಳಿಸುವ ಕೆಲಸ ಆರಂಭಿಸಲಾಗಿದೆ. 48 ಗಂಟೆಗಳ ಕಾಲ ಸ್ವಚ್ಛತಾ ಕಾರ್ಯ ಇರಲಿದೆ. ಸದ್ಯಕ್ಕೆ ಸಾರ್ವಜನಿಕರು ದೂರುಗಳನ್ನು ಸಂಚಾರಿ ಠಾಣೆಯಲ್ಲಿ ಸಲ್ಲಿಸಬೇಕು. ಇನ್ನೂ ಮೂವರು ಪೇದೆಗಳು ಹಾಗೂ ಅವರೊಟ್ಟಿಗೆ ನೇರ ಸಂಪರ್ಕ ಹೊಂದಿರುವವನ್ನು ಪ್ರತ್ಯೇಕ ಕ್ವಾರಂಟೈನ್‌ಗಳಲ್ಲಿ ಉಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಿಂದ ಗುರುವಾರ 329 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಮುಂಚೆ ಕಳುಹಿಸಿದ ವರದಿಗಳಲ್ಲಿ 364 ವರದಿ ನೆಗೆಟಿವ್ ಬಂದಿವೆ. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ 13 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 566 ಜನ ಫೀವರ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ. ಈವರೆಗೆ 16889 ಜನರ ಮಾದರಿ ಕಳುಹಿಸಿದ್ದು, 15505 ವರದಿ ನೆಗೆಟಿವ್ ಬಂದಿದೆ.
ಕ್ವಾರಂಟೈನ್‌ನಿಂದ ತಪ್ಪಿಸಿಕೊಂಡ ವದಂತಿ
ಮಸ್ಕಿ ಕ್ವಾರಂಟೈನ್‌ನಿಂದ ಮೂವರು ತಪ್ಪಿಸಿಕೊಂಡ ಬೆನ್ನಲ್ಲೆ ಜಿಲ್ಲೆಯಲ್ಲಿ 206 ಜನ ಕ್ವಾರಂಟೈನ್ ನಿಂದ ತಪ್ಪಿಸಿಕೊಂಡಿದ್ದಾರೆ ಎಂಬ ವದಂತಿ ಎಲ್ಲೆಡೆ ಹಬ್ಬಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಿ.ಬಿ. ವೇದಮೂರ್ತಿ, ಕ್ವಾರಂಟೈನ್‌ಗಳಲ್ಲಿ ಇರುವವರ ಬೇರೆ ಮೊಬೈಲ್ ಸಂಖ್ಯೆ ನೀಡಿರುವುದು ಸಮಸ್ಯೆಗೆ ಕಾರಣವಾಗಿದೆ. ಆ ರೀತಿ ಎಲ್ಲಿಯೂ ತಪ್ಪಿಸಿಕೊಂಡು ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.