ರಾಯಚೂರು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರು ಗುಣಮುಖರಾಗುತ್ತಿದ್ದರೆ, ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಬುಧವಾರ ಸಿಂಧನೂರು ತಾಲೂಕಿನ 5 ಸೇರಿ ಮತ್ತೆ 12 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 500ಕ್ಕೆ ತಲುಪಿದೆ.
ಮುಂಬಯಿ ವಲಸಿಗರಿಂದ ಶುರುವಾದ ಕೋವಿಡ್ ಹಾವಳಿ ಈಗ ಸಮುದಾಯಕ್ಕೂ ಅಂಟಿಕೊಂಡಿದ್ದು, ದಿನೇದಿನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಆದರೆ, ಜನರಲ್ಲಿ ಜಾಗೃತಿ ಮಾತ್ರ ಇಲ್ಲದಾಗುತ್ತಿರುವುದು ವಿಪರ್ಯಾಸ. 500 ಜನ ಸೋಂಕಿತರಲ್ಲಿ ಈವರೆಗೆ 404 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಬುಧವಾರ ಕೂಡ ನಾಲ್ವರನ್ನು ಬಿಡುಗಡೆ ಮಾಡಲಾಗಿದೆ.
ಜಿಲ್ಲೆಯ ದೇವದುರ್ಗ ತಾಲೂಕಿನಿಂದ 88, ಲಿಂಗಸೂಗೂರು-73, ಮಾನ್ವಿ-88, ಸಿಂಧನೂರು-29 ಮತ್ತು ರಾಯಚೂರು-118 ಸೇರಿದಂತೆ 396 ಜನರ ಗಂಟಲಿನ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಹಿಂದೆ ಕಳುಹಿಸಿದ್ದ ವರದಿಗಳಲ್ಲಿ 418 ನೆಗೆಟಿವ್ ಬಂದಿವೆ. ಇನ್ನೂ 1,268 ಜನರ ಗಂಟಲು ದ್ರವ ಮಾದರಿ ಫಲಿತಾಂಶ ಬರಬೇಕಿದೆ. ಫಿವರ್ ಕ್ಲಿನಿಕ್ ಗಳಲ್ಲಿಂದು 439 ಜನರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ. ವಿವಿಧ ಕ್ವಾರಂಟೈನ್‌ಗಳಲ್ಲಿ 175 ಜನರನ್ನು ಇರಿಸಿದ್ದು, ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
49 ಜನರ ವಿರುದ್ಧ ಪ್ರಕರಣ: ಹೋಂ ಕ್ಯಾರೆಂಟೈನ್ ನಿಯಮಗಳನ್ನು ಉಲ್ಲಂಘಿಸಿದ 49 ವಿರುದ್ಧ ಪ್ರಕರಣದ ದಾಖಲಾಗಿದೆ. ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ ಜನರನ್ನು ಮತ್ತು ಹೊರ ರಾಜ್ಯಗಳಿಂದ ಬಂದ ಜನರನ್ನು ಕೋವಿಡ್-19 ಸಾಂಕ್ರಾಮಿಕ ರೋಗದ ಲಕ್ಷಣಗಳ ಪತ್ತೆ ಹಚ್ಚುವಿಕೆಯ ಹಿತದೃಷ್ಟಿಯಿಂದ ಸಾಂಸ್ಥಿಕ ಕ್ವಾರೆಂಟೈನ್ ಮಾಡುವ ಬದಲಾಗಿ ಹೋಂ ಕ್ವಾರೆಂಟೈನ್ ಮಾಡಲಾಗಿತ್ತು. ಆದರೆ, ಸೂಚನೆ ನೀಡಿದರೂ ನಿಯಮ ಉಲ್ಲಂಘಿಸಿ ಹೊರಗೆ ಓಡಾಡಿದ ಕಾರಣಕ್ಕೆ 49 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, 5,249 ಜನರಿಗೆ ನೋಟಿಸ್ ನೀಡುವ ಮೂಲಕ ಎಚ್ಚರಿಕೆ ನೀಡಲಾಗಿದೆ. ಡಿಸಿ ಕಚೇರಿಯಲ್ಲಿನ ಕಂಟ್ರೋಲ್ ರೂಮ್‌ದಿಂದ 990 ಜನರಿಗೆ ಕರೆ ಮಾಡಿ ಎಚ್ಚರಿಕೆ ನೀಡಲಾಗಿದೆ.