ರಾಯಚೂರು: ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಜನಗಣತಿ ಕಾರ್ಯವನ್ನು ಯಾವುದೇ ಸಮಸ್ಯೆ ಬಾರದಂತೆ ಸುಸೂತ್ರವಾಗಿ ನಿರ್ವಹಿಸಬೇಕು. ತರಬೇತಿಯಲ್ಲಿ ನೀಡುವ ಎಲ್ಲ ಅಂಶಗಳನ್ನು ಮನನ ಮಾಡಿಕೊಂಡು ಸಾರ್ವಜನಿಕರಿಂದ ಸಮರ್ಪಕ ಮಾಹಿತಿ ಸಂಗ್ರಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ದುರುಗೇಶ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ 2021ರ ಜನಗಣತಿಯ ಎಲ್ಲ ಚಾರ್ಜ್ ಅಧಿಕಾರಿಗಳು, ಸಹಾಯಕ ಚಾರ್ಜ್ ಅಧಿಕಾರಿಗಳು ಹಾಗೂ ತಾಂತ್ರಿಕ ಸಹಾಯಕರಿಗೆ ಗುರುವಾರ ಹಮ್ಮಿಕೊಂಡಿದ್ದ ಜನಗಣತಿ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಜನಗಣತಿ ವೇಳೆ ಸಾಕಷ್ಟು ಸಮಸ್ಯೆಗಳು ಎದುರಾಗಬಹುದು. ಅವುಗಳನ್ನು ಮೆಟ್ಟಿ ನಿಲ್ಲಲು ಈ ತರಬೇತಿ ನೆರವಾಗುತ್ತದೆ. ಈ ನಿಟ್ಟಿನಲ್ಲಿ ತರಬೇತುದಾರರು ತಿಳಿಸುವ ಎಲ್ಲ ಅಂಶಗಳನ್ನು ಉತ್ತಮವಾಗಿ ಮನನ ಮಾಡಿಕೊಳ್ಳಬೇಕು ಎಂದರು.
ಜನಗಣತಿ ಕೈಗೊಳ್ಳುವ ಕುರಿತು ನೀಡಿದ ಮೂರು ಪುಸ್ತಕಗಳನ್ನು ಆಳವಾಗಿ ಅಧ್ಯಯನ ಮಾಡಬೇಕು. ಚಾರ್ಜ್ ಅಧಿಕಾರಿಗಳು ಪುಸ್ತಕದ ಸಂಪೂರ್ಣ ವಿವರ ಅರಿಯಬೇಕು. ಮನೆ ಭೇಟಿ ವೇಳೆ ಹೇಗೆ ಮಾಹಿತಿ ಸಂಗ್ರಹಿಸಬೇಕು ಎಂಬುದನ್ನು ಮೊದಲ ಹಂತದಲ್ಲಿ ಹಾಗೂ 2ನೇ ಹಂತದಲ್ಲಿ ಮನೆ ಪಟ್ಟಿ ಹಾಗೂ ಮೊಬೈಲ್ ಆ್ಯಪ್ ಗಳ ಮೂಲಕ ಹೇಗೆ ಮಾಹಿತಿ ಸಂಗ್ರಹಿಸಬೇಕು ಎಂಬುದನ್ನು ತಿಳಿಸಲಾಗುವುದು ಎಂದರು.
ಜನಗಣತಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ. ನಗರ ಪ್ರದೇಶಗಳಲ್ಲಿ ಅದರ ಸಭೆ ಪಟ್ಟಣ ಪಂಚಾಯಿತಿಗಳಲ್ಲಿ ಹಾಗೂ ಗ್ರಾಮೀಣ ಮಟ್ಟದಲ್ಲಿ ತಹಶೀಲ್ದಾರರು ಜನಗಣತಿಗೆ ಕೈಗೊಳ್ಳಬೇಕಾದ ಮಾರ್ಗಸೂಚಿಗಳನ್ನು ತರಬೇತಿಯಲ್ಲಿ ತಿಳಿಸಲಾಗುವುದು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಜನಗಣತಿ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಯಾವುದೇ ಅನುಮಾನವಿಟ್ಟುಕೊಂಡು ಹಿಂದಿರುಗಬಾರದು. ಜನಗಣತಿ ಕಾರ್ಯ ಜಿಲ್ಲೆಯಲ್ಲಿ ಉತ್ತಮವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕು. ಸಂಬಂ ಧಿಸಿದ ಇಲಾಖೆಗಳು ಅದಕ್ಕೆಂದೇ ತಮ್ಮ ಕಚೇರಿಯಲ್ಲಿ ಪ್ರತ್ಯೇಕ ಶಾಖೆ ತೆರೆಯಬೇಕು ಎಂದು ಸೂಚಿಸಿದರು. ಲಿಂಗಸುಗೂರು ಉಪವಿಭಾಗದ ಸಹಾಯಕ ಆಯುಕ್ತರು ಹಾಗೂ ಜನಗಣತಿ ಕಾರ್ಯದ ಹೆಚ್ಚುವರಿ ಚಾರ್ಜ್ ಅಧಿಕಾರಿ ರಾಜಶೇಖರ ಡಂಬಳ, ಎನ್‌ಐಸಿ ಅಧಿಕಾರಿ ರವಿಶಂಕರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ, ಜನಗಣತಿ ತರಬೇತಿದಾರ ಹಾಗೂ ರಾಯಚೂರು ನೋಡಲ್ ಅಧಿಕಾರಿ ಮುರಾರಿ ಸತ್ಯಬಾಬು, ಡಿಡಿಪಿಐ ಬಿ.ಎಚ್.ಗೋನಾಳ, ಅಧಿಕಾರಿಗಳಾದ ಟಿ.ಕೆ. ಶ್ರೀಧರ ಇತರರಿದ್ದರು. ಶಿವಾನಂದ ಪ್ರಾರ್ಥಿಸಿದರು. ಜಿಲ್ಲಾ ಜನಸಂಖ್ಯೆ ತರಬೇತಿ ಅಧಿಕಾರಿ ಸದಾಶಿವಪ್ಪ ಸ್ವಾಗತಿಸಿದರು.