Advertisement

ಕರೇಗುಡ್ಡ ಗ್ರಾಮ ವಾಸ್ತವ್ಯ ಯಶಸ್ವಿ

01:01 PM Jun 28, 2019 | Naveen |

ರಾಯಚೂರು: ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಬುಧವಾರ ರಾತ್ರಿ ವಾಸ್ತವ್ಯ ಹೂಡಿದ್ದ ಸಿಎಂ ಎಚ್.ಡಿ.ಕುಮಾರಸ್ವಾಮಿ ಗುರುವಾರ ಬೆಳಗಿನ ಜಾವವೇ ಗ್ರಾಮ ತೊರೆಯುವ ಮೂಲಕ ಕಾರ್ಯಕ್ರಮ ಕೊನೆಗೊಳಿಸಿದರು.

Advertisement

ಇಡೀ ದಿನದ ಕಾರ್ಯಕ್ರಮದಲ್ಲಿ ಕೆಲವೊಂದು ಅಹಿತಕರ ಘಟನೆಗಳು ಹೊರತುಪಡಿಸಿ ಗ್ರಾಮ ವಾಸ್ತವ್ಯ ಬಹುತೇಕ ಯಶಸ್ವಿಯಾಯಿತು. ಕೊಟ್ಟ ಮಾತಿನಂತೆ ಗ್ರಾಮದ ಶಾಲೆಯಲ್ಲಿ ತಂಗಿದ್ದ ಅವರು ಬುಧವಾರ ತಡರಾತ್ರಿ 12:30ಕ್ಕೆ ಮಲಗಿದರು.

ಅದಕ್ಕೂ ಮುನ್ನ ರಾತ್ರಿ 10:15 ಗಂಟೆಯವರೆಗೆ ಜನರಿಂದ ಅಹವಾಲು ಸ್ವೀಕರಿಸಿದರು. ಜನತಾ ದರ್ಶನ ಮುಗಿಸಿದ ಬಳಿಕ ಮಾತನಾಡಿ, ಕಾರ್ಯಕ್ರಮ ಮುಗಿಯುವವರೆಗೂ ಸ್ಥಳದಲ್ಲಿದ್ದ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ಧನ್ಯವಾದ ಹೇಳಿದರು. ಗ್ರಾಮ ವಾಸ್ತವ್ಯ ಎನ್ನುವುದು ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಕ್ರಮ. ಯಾರನ್ನೋ ಮೆಚ್ಚಿಸಲಿಕ್ಕಾಗಿಯೋ, ಬಿಜೆಪಿ ನೀಡುವ ಸರ್ಟಿಫಿಕೇಟ್ ಪಡೆಯಲ್ಲಿಕ್ಕಾಗಿಯೋ ಮಾಡಿದ ಕಾರ್ಯಕ್ರಮವಲ್ಲ. ಬೆಂಗಳೂರಿನಲ್ಲಿಯೇ ಕುಳಿತು ಹಳ್ಳಿಗಳ ಅಭಿವೃದ್ಧಿ ಪರಿಶೀಲಿಸಬಹುದು ಎಂದು ಬಿ.ಎಸ್‌. ಯಡಿಯೂರಪ್ಪ ಹೇಳುತ್ತಾರೆ. ಆದರೆ, ನಾನು ಹಳ್ಳಿಯಿಂದ ಬಂದವನು ನಮಗೆ ತಾಂತ್ರಿಕತೆ ಗೊತ್ತಿಲ್ಲ. ಹೀಗಾಗಿ ಈ ಹಳ್ಳಿಗೆ ಬಂದಿದ್ದೇನೆ ಎಂದು ಟಾಂಗ್‌ ನೀಡಿದರು.

ಇಲ್ಲಿ ಸಲ್ಲಿಕೆಯಾದ ದೂರುಗಳಿಗೆ 15 ದಿನದೊಳಗೆ ಪರಿಹಾರ ಕಲ್ಪಿಸಲಾಗುವುದು. ಇದು ಜನಪರ ಸರ್ಕಾರ ಎಂಬ ವಿಶ್ವಾಸ ಮೂಡುವಂತೆ ಮಾಡಬೇಕು. ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳು ಕಂಡುಬಂದಿವೆ. ಎಲ್ಲವನ್ನೂ ಕಾನೂನಾತ್ಮಕವಾಗಿ ನೋಡದೆ ಕೆಲವೊಂದು ಸಮಸ್ಯೆಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ನೋಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ನಾನು ಇಲ್ಲಿಂದ ಬಸವಕಲ್ಯಾಣಕ್ಕೆ ಹೆಲಿಕ್ಯಾಪ್ಟರ್‌ನಲ್ಲಿ ಹೋಗಲು 12 ಲಕ್ಷ ಖರ್ಚಾಗುತ್ತದೆ. ಸಾರ್ವಜನಿಕರ ಹಣವನ್ನು ಯಾಕೆ ಅನಗತ್ಯವಾಗಿ ಖರ್ಚು ಮಾಡಬೇಕು ಎಂಬ ಕಾರಣಕ್ಕೆ ರಸ್ತೆ ಮಾರ್ಗವಾಗಿ ತೆರಳುತ್ತಿದ್ದೇನೆ. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಮಾಡಲು ಅಭ್ಯಾಸ ಮಾಡಿದ್ದಾರೆ. ಅವರನ್ನು ಬಹಳ ಹೊತ್ತು ಕಾಯಿಸಿದ್ದೇನೆ. ಅವರ ಕಾರ್ಯಕ್ರಮ ನೋಡಿ ಮಾನಸಿಕ ನೆಮ್ಮದಿ ದೊರೆಯತ್ತದೆ ಎಂದರು.

ಈ ವೇಳೆ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಬೇಕು ಎಂಬ ಬೇಡಿಕೆಯೊಂದಿಗೆ ಜಿಲ್ಲೆಯ ವಿವಿಧ ಮಠಾಧೀಶರು ಸಿಎಂಗೆ ಮನವಿ ಸಲ್ಲಿಸಿದರು. ಬಳಿಕ ವಿವಿಧ ಶಾಲಾ ಮಕ್ಕಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ದೇಶಭಕ್ತಿ, ನಾಡಭಕ್ತಿ ಗೀತೆಗಳ ಜತೆಗೆ ಜನಪದ ಗೀತೆಗಳಿಗೆ ಮಕ್ಕಳು ಹೆಜ್ಜೆ ಹಾಕಿದರು. ಅದರ ಜತೆಗೆ ಕೆಲ ಸಿನಿಮಾ ಹಾಡುಗಳಿಗೂ ಮಕ್ಕಳು ಹೆಜ್ಜೆ ಹಾಕಿದರು. ಈ ವೇಳೆ ತೆನೆ ಹೊತ್ತ ಮಹಿಳೆ, ಸಿಎಂ ಕುಮಾರಸ್ವಾಮಿ ವೇಷಧಾರಿ ಮಕ್ಕಳು ವಿಶೇಷ ಪ್ರದರ್ಶನ ನೀಡಿ ಗಮನ ಸೆಳೆದರು.

Advertisement

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದ ಸಿಎಂ, ಬಳಿಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next